ನ್ಯೂಸ್

ಮಾವಿನ ಹಣ್ಣುಗಳನ್ನು ಕದ್ದಿದ್ದ ಪೊಲೀಸ್​ ಅಧಿಕಾರಿಗೆ ಬಿಗ್​ ಶಾಕ್​: ಸೇವೆಯಿಂದಲೇ ವಜಾ

ಕೊಟ್ಟಾಯಂ: ಕೇರಳದ ಕಂಜಿರಪಲ್ಲಿಯ ಅಂಗಡಿಯೊಂದರಲ್ಲಿ ಮಾವಿನ ಹಣ್ಣುಗಳನ್ನು ಕಳ್ಳತನ ಮಾಡಿದ್ದ ಪೊಲೀಸ್​ ಅಧಿಕಾರಿಯನ್ನು ಶಾಶ್ವತವಾಗಿ ಕೆಲಸದಿಂದ ವಜಾಗೊಳಸಲಾಗಿದೆ. ಇಡುಕ್ಕಿ ಜಿಲ್ಲೆಯ ಪೊಲೀಸ್​ ಮುಖ್ಯಸ್ಥರು ಈ ಕ್ರಮವನ್ನು ತೆಗೆದುಕೊಂಡಿದ್ದಾರೆ.

ನೋಟಿಸ್​ ಕಳುಹಿಸಲಾಗಿತ್ತು

ಶಿಹಾಬ್ ವಜಾಗೊಂಡ ಅಧಿಕಾರಿ. ಕೆಲಸದಿಂದ ವಜಾ ಆದ ಪೊಲೀಸ್​ ಅಧಿಕಾರಿಗಳ ಪಟ್ಟಿಯಲ್ಲಿ ಶಿಹಾಬ್​ ಹೆಸರು ಸಹ ಇತ್ತು. ಶಿಹಾಬ್​ ಇಡುಕ್ಕಿಯಲ್ಲಿರುವ ಎಆರ್​ ಕ್ಯಾಂಪ್​ನಲ್ಲಿ ಸಿವಿಲ್​ ಪೊಲೀಸ್​ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇಡುಕ್ಕಿಯ ಪೊಲೀಸ್​ ವರಿಷ್ಠಾಧಿಕಾರಿ ವಿ.ಯು. ಕುರೈಕೂಸ್​ ಅವರು ಸೇವೆಯಿಂದ ಯಾಕೆ ವಜಾ ಮಾಡಬಾರದು ಎಂಬುದಕ್ಕೆ ವಿವರಣೆ ನೀಡುವಂತೆ ಈ ಹಿಂದೆ ನೋಟಿಸ್​ನಲ್ಲಿ ತಿಳಿಸಿದ್ದರು. ಡಿಜಿಪಿ ನಿರ್ದೇಶನದಂತೆ ನೋಟಿಸ್​ ಕಳುಹಿಸಿ, 15 ದಿನಗಳ ಒಳಗೆ ವಿವರಣೆ ನೀಡುವಂತೆ ಕೇಳಿದ್ದರು. ಇದೀಗ ಸೇವೆಯಿಂದಲೇ ವಜಾಗೊಳಿಸಲಾಗಿದೆ. ಇದನ್ನೂ ಓದಿ: 6 ಪತ್ನಿಯರ ಜತೆ ಮಲಗಲು ಹಾಸಿಗೆಗಾಗಿ 81 ಲಕ್ಷ ರೂ. ಖರ್ಚು ಮಾಡಿದ ಭೂಪ!

ಸಿಸಿಟಿವಿಯಲ್ಲಿ ಸೆರೆ

ಶಿಹಾಬ್​, ಕಳೆದ ವರ್ಷ ಸೆ.30ರಂದು ಕಂಜಿರಪಲ್ಲಿಯ ಹಣ್ಣಿನ ಅಂಗಡಿಗೆ ನುಗ್ಗಿ ಮಾವಿನ ಹಣ್ಣುಗಳನ್ನು ಕಳವು ಮಾಡಿದ್ದರು. ಕೆಜಿಗೆ 600 ರೂ.ಮೌಲ್ಯದ ಸುಮಾರು 10 ಕೆಜಿ ಮಾವಿನ ಹಣ್ಣನ್ನು ಶಿಹಾಬ್ ಕದ್ದಿದ್ದರು. ಘಟನೆ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಯಿಂದ ಈ ಪ್ರಕರಣ ಬೆಳಕಿಗೆ ಬಂದಿತು. ಇದಾದ ಬಳಿಕ ಅಕ್ಟೋಬರ್ 3 ರಂದು ಕೇರಳ ಡಿಜಿಪಿ, ಆರೋಪಿ ಶಿಹಾಬ್​ನನ್ನು ಅಮಾನತುಗೊಳಿಸಿದ್ದರು.

ಅಪರಾಧ ಹಿನ್ನೆಲೆ

ಶಿಹಾಬ್​ ಅಪರಾಧ ಹಿನ್ನೆಲೆಯನ್ನು ಸಹ ಹೊಂದಿದ್ದಾರೆ. 2019ರಲ್ಲಿ ಕಂಜಿರಪಲ್ಲಿಯ ಜನರಲ್ ಹಾಸ್ಪಿಟಲ್​ನ ಮಹಿಳಾ ಉದ್ಯೋಗಿಯೊಬ್ಬರಿಗೆ ಮದುವೆ ಆಗುವುದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪವಿದೆ. ಅಲ್ಲದೆ, ಜೈಲಿನಿಂದ ಹೊರಬಂದ ನಂತರ ಮಹಿಳೆಗೆ ಬೆದರಿಕೆ ಮತ್ತು ಹಲ್ಲೆಗೆ ಯತ್ನಿಸಿದ ಶಿಹಾಬ್ ವಿರುದ್ಧ ಮುಂಡಕ್ಕಯಂ ಪೊಲೀಸರು ದಾಖಲಿಸಿರುವ ಮತ್ತೊಂದು ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇದನ್ನೂ ಓದಿ: ಜೇವೂರ ಅಂಗನವಾಡಿ ಅವಾಂತರ: ಕೊಳೆತ ಮೊಟ್ಟೆಗಳ ವಿತರಣೆ, ಮಕ್ಕಳ ಜೀವದ ಜತೆ ಚೆಲ್ಲಾಟ

ಪೊಲೀಸ್​ ಕೆಲಸಕ್ಕೆ ಸೇರುವ ಮುನ್ನ ಅಂದರೆ, 2007ರಲ್ಲಿ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದ ಆರೋಪದ ಮೇಲೆಯೂ ಶಿಹಾಬ್​ ವಿರುದ್ಧ ಕೇಸು ದಾಖಲಾಗಿತ್ತು. ಇದಿಷ್ಟೇ ಅಲ್ಲದೇ ಗಣಿಗಾರಿಕೆ ಮಾಫಿಯಾಗಳ ಸಂಪರ್ಕ, ಶಬರಿಮಲೆಯಲ್ಲಿ ವಿಐಪಿ ದರ್ಶನ ಆಮಿಷವೊಡ್ಡಿ ಭಕ್ತರಿಂದ ಹಣ ವಸೂಲಿ, ಕರ್ತವ್ಯವಿಲ್ಲದ ವೇಳೆ ಸಮವಸ್ತ್ರ ಧರಿಸಿ ಸ್ಥಳೀಯರಿಂದ ಹಣ ವಸೂಲಿ ಮುಂತಾದ ಪ್ರಕರಣಗಳ ಕುರಿತು ಈತನ ವಿರುದ್ಧ ಹಲವು ದೂರುಗಳು ಬಂದಿದ್ದರೂ ಉನ್ನತ ಮಟ್ಟದ ಪ್ರಭಾವದಿಂದ ಯಾವುದೇ ಕ್ರಮ ಕೈಗೊಂಡಿರಲಿಲ್ಲ. (ಏಜೆನ್ಸೀಸ್​)