ಮುಂಬೈ: ಬಾಲಿವುಡ್ ಚೆಲುವೆ ಕತ್ರೀನಾ ಕೈಫ್ ಮತ್ತು ನಟ ವಿಕಿ ಕೌಶಲ್ರ ಮದುವೆ ನಿಶ್ಚಿತಾರ್ಥವು ದೀಪಾವಳಿ ಸಂದರ್ಭದಲ್ಲಿ ನಡೆದ ಗೌಪ್ಯ 'ರೋಕಾ' ಕಾರ್ಯಕ್ರಮದಲ್ಲಿ ನಡೆದಿದೆ ಎಂಬ ಸುದ್ದಿ ಕೆಲವೇ ದಿನಗಳ ಹಿಂದೆ ಕೇಳಿ ಬಂತು. ಇದೀಗ ಡಿಸೆಂಬರ್ ತಿಂಗಳಲ್ಲಿ ಈ ಹಾಟ್ ಜೋಡಿಯ ವಿವಾಹವು ಎಲ್ಲಿ ಯಾವಾಗ ನಡೆಯಲಿದೆ ಎಂಬ ಬಗ್ಗೆ ವರದಿಗಳು ಹರಿದಾಡಿವೆ.
2019 ರಿಂದ ಡೇಟ್ ಮಾಡುತ್ತಿದ್ದಾರೆ ಎನ್ನಲಾಗುವ ಕತ್ರೀನಾ ಮತ್ತು ವಿಕಿ ತಮ್ಮ ಆಪ್ತವರ್ಗಕ್ಕೆ ಡಿಸೆಂಬರ್ ತಿಂಗಳಲ್ಲಿ ಫ್ರೀಯಾಗಿರಲು ಹೇಳಿದ್ದರೆಂದು ಈ ಮುನ್ನ ಕೇಳಿಬಂದಿತ್ತು. ಇದೀಗ ಅವರು ರಾಜಸ್ಥಾನದ ಸವಾಯಿ ಮಾಧೋಪುರ್ನ ಸಿಕ್ಸ್ ಸೆನ್ಸಸ್ ಐಷಾರಾಮಿ ಹೋಟೆಲ್ನಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ. ಡಿ. 7 ರಿಂದ 9 ವಿವಾಹದ ಕಾರ್ಯಕ್ರಮಗಳು ನಡೆಯಲಿವೆ ಎಂದು ಇಂಡಿಯಾ ಟುಡೇ ವರದಿ ಹೇಳಿದೆ.
ವಿವಾಹ ಸಮಾರಂಭಕ್ಕೆ ತಮ್ಮ ಬಂಧುಬಳಗದೊಂದಿಗೆ ಚಿತ್ರರಂಗದ ಗಣ್ಯರನ್ನು ಆಮಂತ್ರಿಸಲಿದ್ದಾರೆ. ಆದ್ದರಿಂದ ಆ ಸಮಯಕ್ಕೆ ಸ್ಥಳೀಯ ಕಾರ್ ರೆಂಟಲ್ ಸೇವೆಗಳನ್ನು ಆಗಲೇ ಸಾರಾಸಗಟಾಗಿ ಬುಕ್ ಮಾಡಲಾಗಿದೆ. ಆ ವೇಳೆ ಆಗಮಿಸುವ ಅತಿಥಿಗಳಿಗೆ ಏರ್ಪೋರ್ಟ್ನಿಂದ ಹೋಟೆಲ್ಗೆ ತಲುಪಲು ಮತ್ತು ಮದುವೆಯ ಬೇರೆ ಬೇರೆ ಕಾರ್ಯಕ್ರಮಗಳ ಓಡಾಟಕ್ಕೆ ಅನುಕೂಲವಾಗುವಂತೆ ವಾಹನಗಳನ್ನು ಬುಕ್ ಮಾಡಲಾಗಿದೆ ಎಂದು ವರದಿ ಹೇಳಿದೆ. ಆದರೆ ಕತ್ರೀನಾ ಆಗಲಿ, ವಿಕಿ ಆಗಲಿ ಈ ಬಗ್ಗೆ ಏನೂ ಹೇಳುತ್ತಿಲ್ಲ. ಅವರ ಕಡೆಯಿಂದ ಈವರೆಗೆ ಯಾವುದೇ ಆಮಂತ್ರಣವೂ ಹೊರಬಿದ್ದಿಲ್ಲ ಎನ್ನಲಾಗಿದೆ. (ಏಜೆನ್ಸೀಸ್)