Thalapathy Vijay: ತಮಿಳುನಾಡಿನ ಕರೂರಿನಲ್ಲಿ ನಿನ್ನೆ (ಸೆ. 27) ಸಂಜೆ ನಡೆದ ಕಾಲ್ತುಳಿತ ಘಟನೆಯಲ್ಲಿ 39 ಮಂದಿ ಸಾವನ್ನಪ್ಪಿದ್ದು, ನೂರಾರು ಜನ ಗಾಯಗೊಂಡಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ಟಿವಿಕೆ ಪಕ್ಷದ ಮುಖ್ಯಸ್ಥ ಮತ್ತು ಸೂಪರ್ ಸ್ಟಾರ್ ದಳಪತಿ ವಿಜಯ್ ತಲಾ 20 ಲಕ್ಷ ರೂ. ಮತ್ತು ಗಾಯಾಳುಗಳಿಗೆ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ದಳಪತಿ ವಿಜಯ್, ನನ್ನ ಹೃದಯದಲ್ಲಿ ವಾಸಿಸುವ ಎಲ್ಲರಿಗೂ ನಮಸ್ಕಾರ. ನಿನ್ನೆ ಕರೂರಿನಲ್ಲಿ ನಡೆದ ಘಟನೆಯಯಿಂದ ನನ್ನ ಹೃದಯ ಮತ್ತು ಮನಸ್ಸು ತುಂಬಾ ಭಾರವಾಗಿದೆ. ಈ ಅತ್ಯಂತ ದುಃಖಕರ ಸ್ಥಿತಿಯಲ್ಲಿ, ನನ್ನ ಕುಟುಂಬಸ್ಥರನ್ನು ಕಳೆದುಕೊಂಡಾಗ ಆಗುವ ನೋವನ್ನು ಹೇಗೆ ವ್ಯಕ್ತಪಡಿಸಬೇಕೆಂದು ನನಗೆ ತಿಳಿಯುತ್ತಿಲ್ಲ. ನನ್ನಲ್ಲಿ ದುಃಖ ಮಡುಗಟ್ಟಿದೆ.
ಇದು ನಿಜಕ್ಕೂ ನಮಗೆ ತುಂಬಲಾಗದ ನಷ್ಟ. ಯಾರು ಸಾಂತ್ವನದ ಮಾತುಗಳನ್ನಾಡಿದರೂ, ನಮ್ಮ ಪ್ರೀತಿಪಾತ್ರರ ನಷ್ಟ ತುಂಬಲಾರೆವು. ಆದರೂ, ನಿಮ್ಮ ಕುಟುಂಬದ ಸದಸ್ಯನಾಗಿ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ನಮ್ಮ ಸಂಬಂಧಿಕರ ಪ್ರತಿ ಕುಟುಂಬಕ್ಕೆ 20 ಲಕ್ಷ ರೂಪಾಯಿಗಳನ್ನು ಮತ್ತು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೆ 2 ಲಕ್ಷ ರೂಪಾಯಿಗಳನ್ನು ನೀಡಲು ಉದ್ದೇಶಿಸಿದ್ದೇನೆ. ಇಂತಹ ನಷ್ಟದ ಮುಂದೆ ಈ ಮೊತ್ತ ದೊಡ್ಡದಲ್ಲ. ಆದರೆ, ಈ ಸಮಯದಲ್ಲಿ ನಿಮ್ಮ ಕುಟುಂಬದ ಸದಸ್ಯನಾಗಿ, ನನ್ನ ಸಂಬಂಧಿಕರಾದ ನಿಮ್ಮೊಂದಿಗೆ ಹೃದಯದಲ್ಲಿ ನಿಲ್ಲುವುದು ನನ್ನ ಕರ್ತವ್ಯ.
ಅದೇ ರೀತಿ, ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಪ್ರೀತಿಪಾತ್ರರು ಶೀಘ್ರದಲ್ಲೇ ಚೇತರಿಸಿಕೊಂಡು ಮನೆಗೆ ಮರಳಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಚಿಕಿತ್ಸೆ ಪಡೆಯುತ್ತಿರುವವರಿಗೆ ನಮ್ಮ ತಮಿಳುನಾಡು ವೆಟ್ರಿ ಕಳಗಂ ಪಕ್ಷ ಖಂಡಿತವಾಗಿಯೂ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ದೇವರ ದಯೆಯಿಂದ ಎಲ್ಲರು, ಎಲ್ಲದರಿಂದ ಚೇತರಿಸಿಕೊಳ್ಳು ಪ್ರಾರ್ಥಿಸಿವೆ ಎಂದಿದ್ದಾರೆ. (ಏಜೆನ್ಸೀಸ್)