ಬಾಲಿವುಡ್​ ನಿರ್ಮಾಪಕ ಬೋನಿ ಕಪೂರ್​  
ನ್ಯೂಸ್

ದಾವಣಗೆರೆಯಲ್ಲಿ ಬೋನಿ ಕಪೂರ್​ಗೆ ಸೇರಿದ 39 ಲಕ್ಷ ರೂ. ಮೌಲ್ಯದ ಬೆಳ್ಳಿಯ ವಸ್ತುಗಳು ಸೀಜ್​!

ದಾವಣಗೆರೆ: ಬಾಲಿವುಡ್​ ನಿರ್ಮಾಪಕ ಬೋನಿ ಕಪೂರ್​ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಬರೋಬ್ಬರಿ 39 ಲಕ್ಷ ರೂ. ಮೌಲ್ಯದ 66 ಕೆಜಿ ತೂಕದ ಬೆಳ್ಳಿಯ ವಸ್ತುಗಳನ್ನು ಭಾರತೀಯ ಚುನಾವಣಾ ಆಯೋಗ ವಶಕ್ಕೆ ಪಡೆದುಕೊಂಡಿದೆ.

ಸೂಕ್ತ ದಾಖಲೆಗಳಿಲ್ಲ

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ದಾವಣಗೆರೆ ಹೊರ ವಲಯದ ಹೆಬ್ಬಾಳು ಟೋಲ್​ ಬಳಿ ಇರುವ ಚೆಕ್​ಪೋಸ್ಟ್​ನಲ್ಲಿ ತಪಾಸಣೆ ವೇಳೆ ಬೆಳ್ಳಿಯ ವಸ್ತುಗಳನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿದೆ. ಚೆನ್ನೈನಿಂದ ಮುಂಬೈಗೆ ಬಿಎಂಡಬ್ಲ್ಯು ಕಾರಿನಲ್ಲಿ ಐದು ಬಾಕ್ಸ್‌ಗಳಲ್ಲಿ ಸೂಕ್ತ ದಾಖಲೆಗಳಿಲ್ಲದೆ ಬೆಳ್ಳಿಯ ವಸ್ತುಗಳನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

ದಾವಣಗೆರೆಯಲ್ಲಿ ಪ್ರಕರಣ ದಾಖಲು

ಬೆಳ್ಳಿಯ ಬಟ್ಟಲುಗಳು, ಚಮಚಗಳು, ನೀರಿನ ಜಗ್​ ಹಾಗೂ ತಟ್ಟೆಗಳನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರಿನ ಚಾಲಕ ಸುಲ್ತಾನ್​ ಖಾನ್ ಸೇರಿದಂತೆ ಅವರ​ ಜತೆಯಲ್ಲಿದ್ದ ಹರಿಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿ ವಿಚಾರಣೆ

ಬೋನಿ ಕಪೂರ್​ ಒಡೆತನದ ಬೇವ್ಯೂವ್​ ಪ್ರಾಜೆಕ್ಟ್ಸ್​ ಪ್ರೈವೆಟ್​ ಲಿಮಿಟೆಡ್​ (Bayview Projects Pvt Ltd) ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿರುವುದು ಕಂಡುಬಂದಿದೆ. ಬೆಳ್ಳಿಯ ವಸ್ತುಗಳು ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರ ಕುಟುಂಬಕ್ಕೆ ಸೇರಿದವು ಎಂದು ತನಿಖೆ ವೇಳೆ ಹರಿ ಸಿಂಗ್ ಒಪ್ಪಿಕೊಂಡಿದ್ದಾರೆ.

ಮುಂದುವರಿದ ತನಿಖೆ

ಸೂಕ್ತ ದಾಖಲೆಗಳನ್ನು ನೀಡದ ಕಾರಣ ಬೆಳ್ಳಿ ವಸ್ತುಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬೆಳ್ಳಿಯ ವಸ್ತುಗಳು ನಿರ್ಮಾಪಕ ಬೋನಿ ಕಪೂರ್ ಅವರ ಕುಟುಂಬಕ್ಕೆ ಸೇರಿದ್ದಾ? ಎಂಬುದನ್ನು ಖಚಿತ ಪಡಿಸಿಕೊಳ್ಳಲು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)