ನ್ಯೂಸ್

ಶ್ರೀಗಂಧದ ಬೀಡು

ಸಂದೇಶ್ ಕಾರ್ವಡ್ ಮೈಸೂರು

ಕರುನಾಡು ಚಿನ್ನದ ನಾಡು ಹಾಗೂ ಗಂಧದ ಬೀಡು. ಚಿನ್ನದಷ್ಟೇ ಬೆಲೆ ಹೊಂದಿರುವ ನಮ್ಮ ನಾಡಿನ ಶ್ರೀಗಂಧ ಜಗತ್ತಿನಲ್ಲೇ ವಿಶಿಷ್ಟವಾದದ್ದು. ಶ್ರೀಗಂಧ ಬೆಳೆಯು ವಾಣಿಜ್ಯ, ಆರೋಗ್ಯ ಹಾಗೂ ಧಾರ್ವಿುಕ ಕಾರಣಗಳಿಂದಾಗಿ ನಮ್ಮ ಬದುಕಿನ ಅವಿಭಾಜ್ಯ ಅಂಗ.

ರಾಜ್ಯದ ಮಣ್ಣು, ವಾತಾವರಣ ಶ್ರೀಗಂಧ ಬೆಳೆಗೆ ಹೇಳಿ ಮಾಡಿಸಿದಂತಿದೆ. ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಶ್ರೀಗಂಧ ಉತ್ಪಾದನೆಯಾಗುವುದು ನಮ್ಮ ರಾಜ್ಯದಲ್ಲಿ. ಜಾಗತಿಕ ಮನ್ನಣೆ ಇದ್ದರೂ ಬೇಡಿಕೆಗೆ ತಕ್ಕಷ್ಟು ಉತ್ಪಾದನೆ ಇಲ್ಲ. ಕಳ್ಳರ ಕಾಟದಿಂದ ಶ್ರೀಗಂಧ ಮರಗಳು ಅವಸಾನದ ಅಂಚಿಗೆ ತಲುಪುತ್ತಿವೆ. ಇದನ್ನು ಗಮನಿಸಿದ ಸರ್ಕಾರ ರೈತರಿಗೆ ತಮ್ಮ ಜಮೀನಿನಲ್ಲಿ ಶ್ರೀಗಂಧ ಬೆಳೆಯಲು ಅವಕಾಶ ನೀಡಿತು. ರೈತರು ಶ್ರೀಗಂಧ ಬೆಳೆಯಲು ಉತ್ಸಾಹ ತೋರುತ್ತಿದ್ದಾರೆ. ಆದರೆ, ಮರಗಳನ್ನು ರಕ್ಷಿಸುವುದೇ ದೊಡ್ಡ ಸವಾಲು. ಜತೆಗೆ ರಫ್ತು ನೀತಿಯೂ ಪೂರಕವಾಗಿಲ್ಲ. ಹೀಗಾಗಿ ಜಾಗತಿಕ ಬೇಡಿಕೆ ಬಿಡಿ, ರಾಜ್ಯದ ಬೇಡಿಕೆಗೆ ತಕ್ಕಷ್ಟೂ ಶ್ರೀಗಂಧ ಬೆಳೆಯಲಾಗುತ್ತಿಲ್ಲ. ಶ್ರೀಗಂಧ ಮರ ಕಳವು ತಡೆಯಲು ‘ಮರ ವಿಜ್ಞಾನ ತಾಂತ್ರಿಕ ಸಂಸ್ಥೆ’ (ಐಡಬ್ಲ್ಯೂಎಸ್​ಟಿ)ಯಿಂದ ಮರಗಳಿಗೆ ಚಿಪ್ ಅಳವಡಿಸಲಾಗುತ್ತಿದೆ. ಇವು ಎಲ್ಲ ರೈತರಿಗೂ ದೊರೆತರೆ ಶ್ರೀಗಂಧ ಮರಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಬಹುದು.

ವಿಶ್ವದಲ್ಲೇ ಶ್ರೇಷ್ಠ: ಮೈಸೂರು ಭಾಗದಲ್ಲಿ ಬೆಳೆಯುವ ಶ್ರೀಗಂಧ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ದರ್ಜೆಯದ್ದಾಗಿದೆ. ಈ ಕಾರಣಕ್ಕಾಗಿ ಇದಕ್ಕೆ ಜಾಗತಿಕ ಮನ್ನಣೆ (ಜಿಯೋಗ್ರಫಿಕಲ್ ಇಂಡಿಕೇಷನ್) ದೊರೆತಿದೆ. ಚೇಗಿನ ಅಂಶ ಹೆಚ್ಚಾಗಿರುವುದರಿಂದ ಗಂಧದ ಎಣ್ಣೆಯನ್ನು ಹೆಚ್ಚು ಉತ್ಪಾದಿಸಬಹುದು. ಬೇರೆ ಕಡೆ ಬೆಳೆದ ಮರಗಳಲ್ಲಿ ಚೇಗಿನ ಅಂಶ ಇಷ್ಟಿರುವುದಿಲ್ಲ. ಅಲ್ಲದೆ, ಮೈಸೂರು ಶ್ರೀಗಂಧದಲ್ಲಿ ಸುಗಂಧ ಬೀರುವ ಸ್ಯಾಂಟೆನೆಲಾ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ.

ಉಪ ಬೆಳೆ ಉತ್ತಮ: ಸದ್ಯದ ಸ್ಥಿತಿಯಲ್ಲಿ ಶ್ರೀಗಂಧ ರಕ್ಷಣೆಗೆ ಹೆಚ್ಚಿನ ಗಮನ ಹರಿಸುವ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಸಣ್ಣ ರೈತರು ಶ್ರೀಗಂಧವನ್ನು ಉಪ ಬೆಳೆಯಾಗಿ ಬೆಳೆಯುವುದು ಉತ್ತಮ. ಶ್ರೀಗಂಧ ಮರ ಬೆಳವಣಿಗೆ ಹೊಂದಲು ವಿವಿಧ ಸಸ್ಯಗಳು, ಮರಗಳ ಅವಶ್ಯಕತೆ ಇದೆ. ಹೀಗಾಗಿ ಶ್ರೀಗಂಧ ಬೆಳೆದ ಜಾಗದಲ್ಲಿ ಇತರ ಬೆಳೆಗಳನ್ನು ಬೆಳೆದರೆ ರೈತರಿಗೆ ಹೆಚ್ಚಿನ ಆದಾಯ ದೊರೆಯುತ್ತದೆ. ಶ್ರೀಗಂಧ ಬೆಳೆಯಲು ಅರಣ್ಯ ಇಲಾಖೆಯಿಂದ ಪ್ರೋತ್ಸಾಹಧನವೂ ದೊರೆಯುತ್ತಿದೆ. ಮರದಲ್ಲಿ 7-8 ವರ್ಷಗಳಲ್ಲಿ ಚೇಗಿನ ಅಂಶ ಕಾಣಿಸಿಕೊಳ್ಳುತ್ತದೆ, 15-25 ವರ್ಷಗಳ ಅಂತರದಲ್ಲಿ ಮರ ಕಟಾವು ಮಾಡಬಹುದು. ಕಲ್ಲು, ಮಣ್ಣು ಮಿಶ್ರಿತ ಒಣ ಭೂಮಿ ಶ್ರೀಗಂಧ ಬೆಳೆಗೆ ಅತ್ಯಂತ ಸೂಕ್ತ. ನೀರಾವರಿ ಜಮೀನು ಈ ಬೆಳೆಗೆ ಸೂಕ್ತ ಅಲ್ಲ, ಬೆಳೆದರೆ ಉತ್ತಮ ಗುಣಮಟ್ಟದ ಗಂಧ ದೊರೆಯುವುದಿಲ್ಲ.

ಬೆಲೆ ಕೆಜಿಗೆ 17 ಸಾವಿರ ರೂ.: ಬೇಡಿಕೆ- ಪೂರೈಕೆ ಅಂತರದಿಂದಾಗಿ ಶ್ರೀಗಂಧದ ಬೆಲೆ ಸಾಕಷ್ಟು ಏರುತ್ತಿದ್ದು, ಪ್ರಸ್ತುತ 1 ಕೆ.ಜಿ.ಗೆ 17,000 ರೂ. ಇದೆ. ಗುಣಮಟ್ಟ ಆಧರಿಸಿ ಒಟ್ಟು 20 ವರ್ಗೀಕರಣ ಮಾಡಲಾಗಿದೆ. ಅತಿ ಕಡಿಮೆ ದರ್ಜೆಯದಕ್ಕೆ 8,000 ರೂ. ದರ ಇದೆ. ರಾಜ್ಯದಲ್ಲಿ ಒಟ್ಟು 27 ಶ್ರೀಗಂಧದ ಡಿಪೋಗಳು ಇದ್ದವು. ಬೆಳೆ ಕಡಿಮೆಯಾದಂತೆ ಪ್ರಸ್ತುತ ಮೈಸೂರು, ಶಿವಮೊಗ್ಗ, ಧಾರವಾಡದಲ್ಲಿ ಮಾತ್ರ ಡಿಪೋ ಉಳಿದಿವೆ. ಅದರಲ್ಲೂ ಮೈಸೂರು ಡಿಪೋದಲ್ಲಿ ಚಟುವಟಿಕೆ ಹೆಚ್ಚು.

ರಫ್ತು ನೀತಿ ಬದಲಾವಣೆ: ಶ್ರೀಗಂಧ ರಫ್ತಿನ ಮೇಲೆ ಸಾಕಷ್ಟು ನಿರ್ಬಂಧಗಳಿದ್ದು, ಇದು ಉದ್ಯಮದ ಮೇಲೆ ಪರಿಣಾಮ ಬೀರಿದೆ. ಶ್ರೀಗಂಧ ಹಾಗೂ ಅದರ ತೈಲಕ್ಕೆ ಜಾಗತಿಕ ಬೇಡಿಕೆ ಇದ್ದರೂ ರಫ್ತಿಗೆ ತೊಡಕುಂಟಾಗುತ್ತಿದೆ. ಈ ಸಮಸ್ಯೆ ಹೋಗಲಾಡಿಸಲು ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೆ ಮುಂದಾಗಿದ್ದು, ರಫ್ತು ಸರಳವಾಗುವ ನಿರೀಕ್ಷೆ ಇದೆ. ಇಲ್ಲಿನ ನಿರ್ಬಂಧಗಳ ಲಾಭವನ್ನು ಆಸ್ಟ್ರೇಲಿಯಾ ಪಡೆಯುತ್ತಿದೆ. ಅಲ್ಲಿನ ಶ್ರೀಗಂಧವು ಭಾರತದ ಶ್ರೀಗಂಧಕ್ಕಿಂತ ಕಡಿಮೆ ಗುಣಮಟ್ಟದ್ದು. ರಫ್ತು ನೀತಿ ಸರಳಗೊಂಡರೆ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ವಿದೇಶಿ ವಿನಿಯಮ ತಂದುಕೊಡಬಲ್ಲ ಉದ್ಯಮವಾಗಿ ಇದು ಬೆಳೆಯಲಿದೆ.

ಹಲವು ಉಪಯೋಗ: ಸೌಂದರ್ಯವರ್ಧಕಗಳು, ಆರೋಗ್ಯ ರಕ್ಷಣೆ, ಆಯುರ್ವೆದ ಔಷಧ, ಗಂಧದ ಕಡ್ಡಿ ತಯಾರಿಯಲ್ಲಿ ಶ್ರೀಗಂಧವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಕೇರಳದ ಕೋಟಕ್ಕಲ್ ಆಯುರ್ವೆದ ಶಾಲೆಯವರು ಪ್ರತಿ ವರ್ಷ ಮೈಸೂರಿನಿಂದ 4 ಟನ್ ಶ್ರೀಗಂಧ ಖರೀದಿಸುತ್ತಿದ್ದಾರೆ. ಶತಮಾನದ ಇತಿಹಾಸ ಹೊಂದಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್​ಡಿಎಲ್) ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆಗೆ ವಾರ್ಷಿಕ 4 ಸಾವಿರ ಕೆ.ಜಿ. ಗಂಧದ ಎಣ್ಣೆ ಬಳಸಲಾಗುತ್ತಿದೆ. ಅದನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಶ್ರೀಗಂಧದಿಂದ ಕಲಾಕೃತಿಗಳು ತಯಾರಾಗುತ್ತಿದ್ದವು. ಅವುಗಳಿಗೆ ಬೇಡಿಕೆಯೂ ಇತ್ತು. ಆದರೆ, ಕಲಾವಿದರಿಗೆ ಸಾಕಷ್ಟು ಶ್ರೀಗಂಧ ದೊರೆಯದೆ, ಕಲಾಕೃತಿ ತಯಾರಿಸುವುದು ಬಹುತೇಕ ನಿಂತಿದೆ.