ನ್ಯೂಸ್

2-3 ಪಟ್ಟು ಜಾಸ್ತಿ ಬಂತು ವಿದ್ಯುತ್‌ ಬಿಲ್‌! ಆಕ್ರೋಶ ಹೊರಹಾಕುತ್ತಿರುವ ಜನ

ಬೆಂಗಳೂರು: ಕಾಂಗ್ರೆಸ್ ಸರ್ಕಾರ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿದ ಬಳಿಕ, ವಿದ್ಯುತ್ ದರದಲ್ಲಿ ಏರಿಕೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ವಿದ್ಯುತ್‌ ದರ ಹೆಚ್ಚಳ ಮಾಡಿರುವುದನ್ನು ಸಾರ್ವಜನಿಕರು ಖಂಡಿಸುತ್ತಿದ್ದಾರೆ. 'ಪ್ರತಿ ತಿಂಗಳು ನಮ್ಮ ಮನೆಗೆ ತಿಂಗಳಿಗೆ 300 ರೂ. ಒಳಗೆ ಕರೆಂಟ್ ಬಿಲ್ ಬರುತ್ತಿತ್ತು. ಈ ತಿಂಗಳು 600 ರೂಪಾಯಿಯಷ್ಟು ಬಿಲ್ ಬಂದಿದೆ' ಎಂದು ಜನರು ಆರೋಪಿಸುತ್ತಿದ್ದಾರೆ.

ಸರ್ಕಾರ ಒಂದೆಡೆ ಉಚಿತ ವಿದ್ಯುತ್‌ ಎಂದು ಘೋಷಣೆ ಮಾಡಿದ್ದು, ಇನ್ನೊಂದೆಡೆ ದರ ಹೆಚ್ಚಿಸುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ಜನರ ಗಮನಕ್ಕೆ ಬಾರದಂತೆ ವಿದ್ಯುತ್‌ ಬಿಲ್ ಏರಿಕೆ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಬ್ಬರ ತಲೆ ಒಡೆದು ಇನ್ನೊಬ್ಬರ ಹೊಟ್ಟೆ ತುಂಬಿಸೋ ಅಧಿಕಾರ ಯಾರಿಗೂ ಇಲ್ಲ. ನಮಗೆ ಈ ಹಿಂದಿನ ದರಪಟ್ಟಿಯಲ್ಲೇ ವಿದ್ಯುತ್ ಪೂರೈಕೆ ಮಾಡಬೇಕು. ಅದರಲ್ಲೂ ಸೋಲಾರ್ ವಿನಾಯತಿಗೂ ಕೂಡ ಸರ್ಕಾರ ಕಲ್ಲು ಹಾಕಿದೆ. ಒಂದೂವರೆ ಪಟ್ಟು ಹೆಚ್ಚು ವಿದ್ಯುತ್ ಬಿಲ್ ನಾವ್ಯಾಕೆ ಕಟ್ಟಬೇಕು ಎಂದು ಕೆಲ ವಿದ್ಯುತ್ ಬಳಕೆದಾರರು ಕಾಂಗ್ರೆಸ್ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದೇ ತಿಂಗಳಿನಲ್ಲಿ ಇಷ್ಟೊಂದು ಬದಲಾವಣೆಯಾ?

ಕಾಂಗ್ರೆಸ್ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿರುವುದು ಜನ ಹೈರಾಣಾಗುವಂತೆ ಮಾಡಿದೆ. ಸದ್ಯ ಈ ಹಿಂದಿನ ವಿದ್ಯತ್ ಬಿಲ್ ಮತ್ತು ಜೂನ್ ತಿಂಗಳ ಬಿಲ್​ನ್ನು ಹೋಲಿಕೆ ಮಾಡಿಕೊಂಡು ಸರ್ಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಟ್ವಿಟರ್​ನಲ್ಲಿ ಫೋಟೋವೊಂದು ವೈರಲ್ ಆಗಿದ್ದು, ಕಳೆದ ಮೇ ತಿಂಗಳಿನ ಬಿಲ್​ನಲ್ಲಿ 881 ರೂ. ಬಂದಿದ್ದರೆ, ಜೂನ್ ತಿಂಗಳಿನಲ್ಲಿ 2067 ರೂಪಾಯಿ ಬಂದಿದೆ.

ಕುಮಟಾದಲ್ಲಿ ವಿದ್ಯುತ್ ಗ್ರಾಹಕರಿಗೆ ಶಾಕ್

ಉತ್ತರಕನ್ನಡ: ಕುಮಟಾದಲ್ಲಿ ಹಳ್ಕಾರ ಗ್ರಾಮದ ಅರುಣ್ ಎಂಬುವವರ ವಿದ್ಯುತ್ ಬಿಲ್ 10963 ರೂ. ಬಂದಿರುವುದು ನೋಡಿ ಒಂದು ಕ್ಷಣ ಗೊಂದಲಗೊಂಡಿದ್ದಾರೆ. ಬಳಕೆಯಾದ 69 ಯುನಿಟ್‌ಗೆ 10963ರೂ. ಕರೆಂಟ್ ಬಿಲ್ ಬಂದಿದೆ. ಪ್ರತಿ ತಿಂಗಳು 200ರಿಂದ 300ರೂ. ಬರುತ್ತಿದ್ದ ವಿದ್ಯುತ್ ಬಿಲ್​ ಏಕಾಏಕಿ ಹೆಚ್ಚಾಗಿರುವುದನ್ನು ಕಂಡು ಕಂಗಾಲಾಗಿದ್ದಾರೆ.

ವಿದ್ಯುತ್ ಬಿಲ್ ನೋಡಿ ಕಂಗಾಲಾದ ಜನರು

ಹುಬ್ಬಳ್ಳಿ: ಗ್ಯಾರಂಟಿ ಯೋಜನೆ ಜಾರಿಗೆ ಬಳಿಕ ವಿದ್ಯುತ್ ದರ ಹೆಚ್ಚು ಮಾಡಿರುವ ಹೆಸ್ಕಾಂ ವಿರುದ್ಧ ಉತ್ತರ ಕರ್ನಾಟಕ ವಾಣಿಜ್ಯೋದ್ಯಮ‌ ಸಂಸ್ಥೆಗಳು ಹೋರಾಟದ ಹಾದಿ ಹಿಡಿಯಲು ಮುಂದಾಗಿವೆ. ಕೆಇಆರ್‌ಸಿಯಿಂದ ಮನಸೋ ಇಚ್ಚೆ ವಿದ್ಯುತ್ ದರ ಏರಿಕೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದ್ದು, ಜನರು ಕಂಗಾಲಾಗಿದ್ದಾರೆ.

ಹೆಸ್ಕಾಂ ಕೆಇಆರ್‌ಸಿ ಮುಂದೆ ಪ್ರತಿ ಯುನಿಟ್​ಗೆ 50% ಹೆಚ್ಚಳದ ಬೇಡಿಕೆ ಇಟ್ಟಿತ್ತು. ಈ ರೀತಿಯ ಬೇಡಿಕೆ ಇಟ್ಟಾಗ ಕೇವಲ 20 ರಿಂದ 30 ಪೈಸೆ ರೂ. ಹೆಚ್ಚಳ ಮಾಡುತ್ತಿದ್ದ ಕೆಇಆರ್‌ಸಿ, ಈ ವರ್ಷ ಪ್ರತಿ ಯುನಿಟ್‌‌ಗೆ 2.54 ರೂ. ನಿಗದಿ ಮಾಡಿದೆ. ವಿದ್ಯುತ್ ದರ ಹೆಚ್ಚಿಗೆ ಮಾಡುವ ಮೂಲಕ ವಾಣಿಜ್ಯೋದ್ಯಮಿಗಳಿಗೆ, ಕೈಗಾರಿಕೋದ್ಯಮಿಗಳಿಗೆ ಹಾಗೂ ಜನಸಾಮಾನ್ಯರಿಗೆ ಹೊರೆ ಹಾಕಿದೆ.

ವಾಣಿಜ್ಯೋದ್ಯಮ‌ ಸಂಸ್ಥೆಯ ಪದಾಧಿಕಾರಿಗಳು ವಿದ್ಯುತ್ ದರ ಹೆಚ್ಚಿಗೆ ಹಿನ್ನೆಲೆ ಹೆಸ್ಕಾಂಗೆ ಏಳು ದಿನಗಳ ಕಾಲ ಗಡುವು ನೀಡಿವೆ. ಏಳು ದಿನಗಳಲ್ಲಿ ಬಿಲ್ ಕಡಿಮೆ ಮಾಡಬೇಕು‌. ಒಂದು ವೇಳೆ ಬಿಲ್ ಕಡಿಮೆ ಮಾಡದೆ ಹೋದರೆ, ಕೈಗಾರಿಕೆಗಳನ್ನು ಬಂದ್ ಮಾಡಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ಮಧ್ಯಪ್ರವೇಶಿಸಿ ವಿದ್ಯುತ್ ದರವನ್ನು ಕಡಿಮೆ ಮಾಡಬೇಕು‌. ಈ ಮೂಲಕ ಜನಸಾಮಾನ್ಯರ ಮೇಲೆ ಹೇರಿರುವ ಹೊರೆ ತಗ್ಗಿಸಬೇಕು ಎಂದು ಒತ್ತಾಯ ಕೇಳಿ ಬಂದಿದೆ.