ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ' ಚಿತ್ರದ ಮುಕುಟಕ್ಕೆ ಇನ್ನೊಂದು ಗುರಿ ಸಿಕ್ಕಿದೆ. ಕನ್ನಡದಲ್ಲಿ ಅತೀ ಹೆಚ್ಚು ವೀಕ್ಷಣೆಗೊಳಾಗದ ಚಿತ್ರ ಮತ್ತು ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 'ಕಾಂತಾರ' ಚಿತ್ರವು ಇದೀಗ 2023ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ಸ್ಪರ್ಧಿಸುವುದಕ್ಕೆ ಅರ್ಹತೆ ಸಿಕ್ಕಿದೆ.
ಈ ವಿಷಯವನ್ನು ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ನಟ-ನಿರ್ದೇಶಕ ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿ ಸಂತೋಷವನ್ನು ಹಂಚಿಕೊಂಡಿದ್ದಾರೆ. 'ಆಸ್ಕರ್ ಪ್ರಶಸ್ತಿಗಳ ಎರಡು ವಿಭಾಗಗಳಲ್ಲಿ ಸ್ಪರ್ಧಿಸುವುದಕ್ಕೆ 'ಕಾಂತಾರ' ಚಿತ್ರಕ್ಕೆ ಅರ್ಹತೆ ಸಿಕ್ಕಿದೆ. ನಮ್ಮ ಈ ಪಯಣದಲ್ಲಿ ಸಹಕರಿಸಿ, ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.
ಆಸ್ಕರ್ ಪ್ರಶಸ್ತಿ ಕಣದಲ್ಲಿ 'ಕಾಂತಾರ' ಚಿತ್ರವು ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಟ ವಿಭಾಗಗಳಲ್ಲಿ ಸ್ಪರ್ಧಿಸುವುದಕ್ಕೆ ಅರ್ಹತೆ ಸಿಕ್ಕಿದೆ. ಈ ಪೈಕಿ ಯಾವ ವಿಭಾಗದಲ್ಲಿ ಚಿತ್ರಕ್ಕೆ ಪ್ರಶಸ್ತಿ ಸಿಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. 301 ಚಿತ್ರಗಳ ಪಟ್ಟಿಯಲ್ಲಿ 'ಕಾಂತಾರ' ಚಿತ್ರವೂ ಸ್ಪರ್ಧಿಸುತ್ತಿದೆ ಎನ್ನುವುದು ವಿಶೇಷ. ಜನವರಿ 24ರಂದು ಆಸ್ಕರ್ ವಿಜೇತ ಅಂತಿಮ ಪಟ್ಟಿ ಪ್ರಕಟವಾಗಲಿದೆ.
'ಕಾಂತಾರ' ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಮುಂತಾದವರು ಅಭಿನಯಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.