ಪರಭಾಷೆಗೆ ಕಾಂತಾರ ಲೀಲಾ; ‘ಕಾಳಿ’ಗಾಗಿ ಸಿದ್ಧತೆ ನಡೆಸುತ್ತಿರುವ ಸಪ್ತಮಿ ಗೌಡ

Sapthami
Published on

| ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು

‘ಪಾಪ್​ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲಿ ರೆಬೆಲ್ ಗಿರಿಜಾ ಆಗಿ, ಬಳಿಕ ‘ಕಾಂತಾರ’ ಚಿತ್ರದಲ್ಲಿ ಸೈಲೆಂಟ್ ಲೀಲಾ ಪಾತ್ರದಲ್ಲಿ ಮಿಂಚಿರುವ ಸಪ್ತಮಿ ಗೌಡ, ಸದ್ಯ ‘ಕಾಳಿ’ ಚಿತ್ರದ ಶೂಟಿಂಗ್​ಗೆ ಸಿದ್ಧತೆ ನಡೆಸುತ್ತಿದ್ದಾರೆ. ಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ಸಪ್ತಮಿ, ಅಭಿಷೇಕ್ ಅಂಬರೀಶ್​ಗೆ ನಾಯಕಿಯಾಗಿ ನಟಿಸಲಿದ್ದಾರೆ. ಸಿದ್ಧತೆ ನಡುವೆಯೇ ವಿಜಯವಾಣಿ ಜತೆ ಮಾತಿಗೆ ಸಿಕ್ಕ ಅವರು, ‘ಫೆಬ್ರವರಿಯಿಂದ ‘ಕಾಳಿ’ ಚಿತ್ರದ ಶೂಟಿಂಗ್ ಶುರುವಾಗಲಿದೆ. ಸದ್ಯ ವರ್ಕ್​ಶಾಪ್ ನಡೆಯುತ್ತಿದೆ. ನಾನು ಸಹ ಪಾತ್ರಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಆದರೆ, ಈಗಲೇ ಪಾತ್ರದ ಬಗ್ಗೆ ಏನೂ ಹೇಳುವಂತಿಲ್ಲ. ‘ಪಾಪ್​ಕಾರ್ನ್ ಮಂಕಿ ಟೈಗರ್’ ಮತ್ತು ‘ಕಾಂತಾರ’ ಚಿತ್ರಗಳಲ್ಲಿ ನನ್ನ ಪಾತ್ರ ಒಂದಕ್ಕಿಂತ ಒಂದು ಭಿನ್ನವಾಗಿತ್ತು. ಈಗ ‘ಕಾಳಿ’ ಚಿತ್ರದಲ್ಲೂ ಆ ಪಾತ್ರಗಳಿಗಿಂತ ತುಂಬ ವಿಭಿನ್ನ ಪಾತ್ರ ಎಂದಷ್ಟೇ ಹೇಳಬಲ್ಲೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ ಸಪ್ತಮಿ.

ಅಂದಹಾಗೆ ‘ಕಾಂತಾರ’ ಯಶಸ್ಸು ಬದುಕು ಬದಲಿಸಿತಾ ? ಎಂದು ಕೇಳಿದರೆ ಸಪ್ತಮಿ, ‘ಹೌದು, ‘ಕಾಂತಾರ’ ಚಿತ್ರಕ್ಕೂ ಮೊದಲು ನಾನು ಅವಕಾಶಗಳಿಗೆ ಎದುರು ನೋಡುತ್ತಿದ್ದೆ. ಈಗ ಅವಕಾಶಗಳು ಬಂದರೂ ನಾನೇ ಯೋಚಿಸಿ, ಚಿತ್ರದ ಕಥೆ, ಪಾತ್ರ ಎಲ್ಲವನ್ನೂ ತಿಳಿದುಕೊಂಡು, ಯಾವುದನ್ನು ಒಪ್ಪಿಕೊಳ್ಳಬೇಕು, ಯಾವುದನ್ನು ಒಪ್ಪಿಕೊಳ್ಳಬಾರದು ಎಂದು ನಿರ್ಧರಿಸುತ್ತೇನೆ. ‘ಕಾಂತಾರ’ ಸಿನಿಮಾ ನನಗೆ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿದೆ. ಹಲವಾರು ಕಥೆಗಳನ್ನು ಕೇಳಿದ್ದೇನೆ. ಬೇರೆ ಭಾಷೆಗಳಿಂದಲೂ ಆಫರ್​ಗಳು ಬಂದಿವೆ. ಆದರೆ, ಯಾವುದನ್ನೂ ಈಗಲೇ ಅಂತಿಮ ಮಾಡಿಲ್ಲ. ಈಗ ‘ಕಾಳಿ’ ಚಿತ್ರದ ಮೇಲಷ್ಟೇ ನನ್ನ ಗಮನ’ ಎನ್ನುತ್ತಾರೆ.

ಸೂಪರ್ ಕಾಪ್ ಎನಿಸಿಕೊಂಡಿದ್ದ ತಂದೆ, ನಿವೃತ್ತ ಎಸಿಪಿ ಎಸ್.ಕೆ. ಉಮೇಶ್ ಅವರಂತೆಯೇ ಸಪ್ತಮಿಗೂ ತೆರೆಯ ಮೇಲೆ ಖಾಕಿ ಧರಿಸುವ ಆಸೆಯಿದೆಯಂತೆ. ಆದರೆ, ‘ಅಪ್ಪ ಸೂಪರ್ ಕಾಪ್ ಆಗಿದ್ದರು ನಿಜ. ಆದರೆ, ಪೊಲೀಸ್ ಪಾತ್ರ ಇರಬೇಕು ಅಂತ ಸುಖಾಸುಮ್ಮನೆ ಪಾತ್ರ ಕೊಟ್ಟರೆ ನಾನು ನಟಿಸುವುದಿಲ್ಲ. ಆ ಪಾತ್ರಕ್ಕೆ ಅದರದೇ ಆದ ಪ್ರಾಮುಖ್ಯತೆ ಇರಬೇಕು, ಆಗ ಮಾತ್ರ ನಟಿಸುತ್ತೇನೆ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net