ನ್ಯೂಸ್

ಗಣರಾಜ್ಯೋತ್ಸವದಂದು ಮನೆಮನೆಗೂ ಬರಲಿದ್ದಾನೆ ಬಡವ ರಾಸ್ಕಲ್​: ವೂಟ್‌ ಸೆಲೆಕ್ಟ್‌ ಒಟಿಟಿಯಲ್ಲಿ ಸಿನಿಮಾ ರಿಲೀಸ್​

ಬೆಂಗಳೂರು: ಗಣರಾಜ್ಯೋತ್ಸವದಂದು ಮನೆಮನೆಗೂ 'ಬಡವ ರಾಸ್ಕಲ್'​ ಬರಲಿದ್ದಾನೆ. ಅರ್ಥಾತ್, ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ಕಂಡ ಡಾಲಿ ಧನಂಜಯ್ ಅಭಿನಯದ 'ಬಡವ ರಾಸ್ಕಲ್' ಸಿನಿಮಾ ಜನವರಿ 26ರಂದು 'ವೂಟ್ ಸೆಲೆಕ್ಟ್' ಒಟಿಟಿ ಪ್ಲ್ಯಾಟ್​ಫಾರ್ಮ್​ನಲ್ಲಿ ಬಿಡುಗಡೆಯಾಗಲಿದೆ.

ಶಂಕರ್ ಗುರು ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ರೊಮ್ಯಾಂಟಿಕ್ ಡ್ರಾಮಾ ಸಿನಿಮಾದಲ್ಲಿ ಧನಂಜಯ್, ಅಮೃತಾ ಅಯ್ಯಂಗಾರ್, ರಂಗಾಯಣ ರಘು ಹಾಗೂ ತಾರಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸ್ವರ್ಶ ರೇಖಾ, ನಾಗಭೂಷಣ್, ಪೂರ್ಣಚಂದ್ರ ಮತ್ತು ಮಾಸ್ತಿ ಮಂಜು ಕೂಡ ನಟಿಸಿದ್ದಾರೆ.

ಶ್ರೀಮಂತ ರಾಜಕಾರಣಿಯ ಮಗಳು ಸಂಗೀತಾ (ಅಮೃತ) ಮತ್ತು ಮಧ್ಯಮ ವರ್ಗ ಕುಟುಂಬದ ಶಂಕರ್ (ಧನಂಜಯ್) ನಡುವೆ ಪ್ರೇಮ ಬೆಳೆದು ಹಲವು ತಿರುವು ಪಡೆಯುವ ಪ್ರೇಮಕಥೆ ಹಾಗೂ ಜೀವನದ ಕುರಿತು ಹಲವು ವಿಚಾರ ಹೊಂದಿರುವ ಈ ಚಿತ್ರ ಈಗಾಗಲೇ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡು ಜನರಿಂದ ಮೆಚ್ಚುಗೆ ಪಡೆದಿದೆ. ಇದೀಗ ಒಟಿಟಿ ಮೂಲಕ ಪ್ರತಿಯೊಬ್ಬರ ಮನೆಗೂ ಈ ಸಿನಿಮಾ ಬರಲಿದೆ.

'ಈ ಚಿತ್ರ ನನಗೆ ಎರಡು ಕಾರಣಗಳಿಂದ ಬಹಳ ಹತ್ತಿರವೆನಿಸುತ್ತದೆ. ಒಂದು ಚಿತ್ರ ತಂಡ, ಮತ್ತೊಂದು ಈ ಚಿತ್ರದಲ್ಲಿನ ಕಥೆ. ಬಡತನದ ಸೂಕ್ಷ್ಮತೆಯನ್ನು ತೋರಿಸುವಲ್ಲಿ ಈ ಚಿತ್ರತಂಡ ಯಶಸ್ವಿಯಾಗಿದೆ. ಒಬ್ಬ ಸಾಮಾನ್ಯ ಮನುಷ್ಯ ತನ್ನ ಕನಸುಗಳನ್ನು ಹೇಗೆ ನನಸಾಗಿಸಿಕೊಳ್ಳುತ್ತಾನೆ. ಜೊತೆಗೆ ಪ್ರೀತಿಯನ್ನೂ ಬಿಟ್ಟುಕೊಡದೆ ಹೇಗೆಲ್ಲ ಕಷ್ಟ ಪಡುತ್ತಾನೆ ಎಂಬುದನ್ನು ಅತಿ ಭಾವನಾತ್ಮಕವಾಗಿ ತೋರಿಸಲಾಗಿದೆ' ಎನ್ನುತ್ತಾರೆ ನಾಯಕ ನಟ ಧನಂಜಯ.

ಲಾಕ್‌ಡೌನ್‌ನಿಂದಾಗಿ ಸಾಕಷ್ಟು ಜನರು ಥಿಯೇಟರ್‌ಗೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ನಮ್ಮ ಚಿತ್ರವೇ ನಿಮ್ಮ ಮನೆಗೆ ಬರಲು ಸಿದ್ಧವಾಗಿದೆ. ಪ್ರತಿಯೊಬ್ಬರೂ ವೂಟ್‌ ಸೆಲೆಕ್ಟ್​​ನಲ್ಲಿ ಈ ಚಿತ್ರವನ್ನು ವೀಕ್ಷಿಸಿ ಎಂದು ಮನವಿ ಮಾಡಿದರು. ಈ ಚಿತ್ರವು ಐಎಂಡಿಬಿನಲ್ಲಿ 9.4 ರೇಟಿಂಗ್ ಹೊಂದಿದ್ದು, ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.