ನ್ಯೂಸ್

'ನಿಮ್ಮ ಚಿತ್ರದಲ್ಲಿ ನನಗೆ ಯಾವುದೇ ಪಾತ್ರ ಕೊಡಬೇಡಿ'! 'ಅನಿಮಲ್' ನಿರ್ದೇಶಕನ ಆಫರ್​ ಕೈಬಿಡಲು ಕಂಗನಾ ಕೊಟ್ಟ ಕಾರಣವಿದು

ಮುಂಬೈ: ಸದಾ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಚಾರಗಳಿಂದ ಸುದ್ದಿಯಾಗಿ ಸದ್ದು ಮಾಡುವ ಬಾಲಿವುಡ್​ನ ಹಾಟ್​ ಬೆಡಗಿ, ನಟಿ ಕಂಗನಾ ರಣಾವತ್​, ಇತ್ತೀಚೆಗಷ್ಟೇ ತಮ್ಮ 'ತೇಜಸ್' ಚಿತ್ರ ಬಾಕ್ಸ್​ ಆಫೀಸ್​ ಜತೆಗೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ಪಡೆಯುವ ಮೂಲಕ ಭಾರೀ ಸೋಲನ್ನು ಕಂಡಿತು. ಇದರಿಂದ ತೀವ್ರ ಬೇಸರಗೊಂಡ ನಟಿ, 'ಎಕ್ಸ್'​ ಖಾತೆಯಲ್ಲಿ ಅಸಮಾಧಾನ ಹೊರಹಾಕಿದ್ದರು. ಇದೀಗ ಮತ್ತೊಮ್ಮೆ ಸುದ್ದಿಗೆ ಬಂದಿರುವ ಕಂಗನಾ, ಈ ಬಾರಿ ಅನಿಮಲ್ ನಿರ್ದೇಶಕನ ಹೇಳಿಕೆಗೆ ಉತ್ತರಿಸುವ ಮುಖೇನ ಪರೋಕ್ಷವಾಗಿ ಚಿತ್ರರಂಗದ ಕೆಲವರಿಗೆ ಟಾಂಗ್ ಕೊಟ್ಟಿದ್ದಾರೆ.

ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಭಾಗಿಯಾಗಿ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, "ನನಗೆ ಕಂಗನಾ ರಣಾವತ್​ ಅವರೊಂದಿಗೆ ಕೆಲಸ ಮಾಡಲು ಬಹಳ ಆಸೆಯಿದೆ. ಯಾಕಂದ್ರೆ, ನಟಿಯ 'ಕ್ವೀನ್' ಮತ್ತು 'ತನು ವೆಡ್ಸ್ ಮನು' ಚಿತ್ರಗಳಲ್ಲಿ ಅವರ ಅಭಿನಯ ಕಂಡು ತುಂಬ ಇಷ್ಟವಾಯಿತು. ಅವರಿಗೆ ಮೊದಲು ಕಥೆ ವಿವರಿಸುವ, ಇಷ್ಟವಾದರೆ ಖಂಡಿತ ಸಿನಿಮಾ ಮಾಡ್ತೀನಿ" ಎಂದು ಹೇಳಿದರು.

ಸಂದೀಪ್ ಸಂದರ್ಶನದಲ್ಲಿ ನೀಡಿದ ಆ ಪ್ರತ್ಯೇಕ ಹೇಳಿಕೆಯ ಕ್ಲಿಪ್ ಶೇರ್ ಮಾಡಿದ ಕಂಗನಾ, "ನನಗೆ ಎಂದಿಗೂ, ಯಾವ ಪಾತ್ರಗಳನ್ನು ನೀಡಬೇಡಿ. ಯಾವುದೇ ಪ್ರಾಜೆಕ್ಟ್​ ಮಾಡಲು ನಾನು ಇಚ್ಚಿಸುವುದಿಲ್ಲ. ವಿಮರ್ಶೆ ಒಂದೇ ಅಲ್ಲ, ಪ್ರತಿಯೊಂದು ರೀತಿಯ ಕಲೆಯನ್ನು ಪರಿಶೀಲಿಸಬೇಕು ಮತ್ತು ಚರ್ಚಿಸಬೇಕು. ಇದು ಸಾಮಾನ್ಯ ಸಂಗತಿ. ನನ್ನ ವಿಮರ್ಶೆಯನ್ನು ನೋಡಿ ಕಿರುನಗೆಯ ಬೀರುವ ಮೂಲಕ ಸಂದೀಪ್ ಅವರು ನನಗೆ ಗೌರವವನ್ನು ತೋರಿದ ರೀತಿ ಮೆಚ್ಚುವಂತದ್ದು, ಕೇವಲ ಸಿನಿಮಾ ಮಾಡೋದಲ್ಲ, ಅವರ ವರ್ತನೆ ಕೂಡ ಅಷ್ಟೇ ಒಳ್ಳೆಯದಾಗಿದೆ, ಧನ್ಯವಾದಗಳು ಸರ್" ಎಂದು ಹೇಳಿದ್ದಾರೆ.

"ದಯವಿಟ್ಟು ನನಗೆ ಯಾವುದೇ ಪಾತ್ರವನ್ನು ನೀಡಬೇಡಿ. ಹಾಗೆ ಮಾಡಿದರೆ ನಿಮ್ಮ ಸಿನಿಮಾಗಳು ಸಹ ಸೋಲಿನ ಹಾದಿ ಹಿಡಿಯಲಿದೆ. ನೀವು ಬ್ಲಾಕ್‌ಬಸ್ಟರ್‌ಗಳನ್ನು ಮಾಡುತ್ತಿದ್ದೀರಿ, ಚಿತ್ರರಂಗಕ್ಕೆ ನಿಮ್ಮ ಅಗತ್ಯವಿದೆ" ಎಂದು ಹೇಳುವ ಮೂಲಕ ಪರೋಕ್ಷವಾಗಿ ಚಿತ್ರರಂಗದ ಕೆಲವರಿಗೆ ಟಾಂಗ್ ನೀಡಿದ್ದಾರೆ,(ಏಜೆನ್ಸೀಸ್).