ನ್ಯೂಸ್

ಅಕ್ಷಯ್​ ನೀಡಿದ್ದ ಆಫರ್​ ತಿರಸ್ಕರಿಸಿ ನಿಮಗೂ ಮಗಳಿದ್ದಾಳೆ ಅರ್ಥಮಾಡಿಕೊಳ್ಳಿ ಎಂದಿದ್ದೆ; ಕಂಗನಾ ಹೀಗೆಳಿದ್ದೇಕೆ?

ಮುಂಬೈ: ಸಿನಿಮಾ ಮತ್ತು ರಾಜಕಾರಣ ಎರಡರಲ್ಲೂ ಸಕ್ರಿಯರಾಗಿರುವ ಬಿಟೌನ್​​ ಕ್ವೀನ್​ ಕಂಗನಾ ರಣಾವತ್​ ಸದ್ಯ ತಮ್ಮ ಮುಂಬರುವ ಸಿನಿಮಾ ಎಮರ್ಜೆನ್ಸಿ ಪ್ರಚಾರದಲ್ಲಿ ಬಿಸಿಯಾಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಕಂಗನಾ ಸಲ್ಮಾನ್ ಖಾನ್, ರಣಬೀರ್ ಕಪೂರ್ ಅವರೊಂದಿಗಿನ ಚಿತ್ರಗಳನ್ನು ತಿರಸ್ಕರಿಸಿದ್ದಾಗಿ ಹೇಳಿದ್ದರು. ಫಿಲ್ಟರ್​ ಮಾಡದೆ ಬೋಲ್ಡ್​​ ಆಗಿ ಮಾತನಾಡುವ ಕಂಗನಾ ಹಲವು ಬಾರಿ ಒಂದಲ್ಲ ಒಂದು ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಆಗಿದ್ದಾರೆ.

ಅಂದ್ಹಾಗೆ ಬಾಲಿವುಡ್​ ಕಿಲಾಡಿ ಆಫರ್​ ಮಾಡಿದ್ದ ಸಿನಿಮಾವನ್ನು ತಿರಸ್ಕರಿಸಿದ್ದಾಗಿ ಕಂಗನಾ ರಣಾವತ್​ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಅಕ್ಷಯ್​ ಕುಮಾರ್​ ಕೂಡ ತನಗೆ ಹಲವು ಸಿನಿಮಾಗಳಿಗೆ ಆಫರ್​ ಮಾಡಿದ್ದರು. ಅವರ ಎಲ್ಲಾ ಸಿನಿಮಾಗಳನ್ನು ನಾನು ನಿರಾಕರಿಸಿದೆ ಎಂದು ತಿಳಿಸಿದರು.

ಅಕ್ಷಯ್ ತನ್ನನ್ನು ಸಿಂಗ್ ಈಸ್ ಬ್ಲಿಂಗ್‌ ಚಿತ್ರದಲ್ಲಿ ಅಭಿನಯಿಸಲು ಆಫರ್​ ನೀಡಿದ್ದರು. ಆದರೆ ನಾನು ನಯವಾಗಿ ಆಗುವುದಿಲ್ಲ ಎಂದು ಹೇಳಿದೆ. ಅವರು ನನ್ನನ್ನು ಕೇಳಿದಾಗ ದಯವಿಟ್ಟು ನಿಮಗೂ ಒಬ್ಬ ಮಗಳಿದ್ದಾಳೆ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದು ಹೇಳಿದೆ ಎಂದಿದ್ದಾರೆ. ಹೀಗೆ ಕೆಲ ಸಿನಿಮಾಗಳನ್ನು ತ್ಯಜಿಸಿದ ಬಳಿಕ ಅಕ್ಷಯ್​ ನನ್ನನ್ನು,ಕಂಗನಾ ನಿಮಗೆ ನನ್ನಿಂದ ಏನಾದರೂ ಸಮಸ್ಯೆ ಇದೆಯೇ?’ ಎಂದು ಕೇಳಿದರು. ‘ಸರ್, ನನಗೆ ನಿಮ್ಮೊಂದಿಗೆ ಯಾವುದೇ ಸಮಸ್ಯೆ ಇಲ್ಲ’ ಎಂದು ಹೇಳಿದೆ.

ಆಗ ಅವರು ಹಾಗಾದರೆ ಏಕೆ? ನಾನು ನಿಮಗೆ ಅಂತಹ ಒಳ್ಳೆಯ ಪಾತ್ರಗಳನ್ನು ನೀಡುತ್ತಿದ್ದೇನೆ ಎಂದು ನಿರಾಕರಿಸಿದ್ದಕ್ಕೆ ಕಾರಣ ಕೇಳಿದರು. ಆಗ ನಾನು ಹೇಳಿದೆ ದಯವಿಟ್ಟು ಅರ್ಥಮಾಡಿಕೊಳ್ಳಿ, ನಿನಗೂ ಮಗಳಿದ್ದಾಳೆ. ನಾವು ಮಹಿಳೆಯರಿಗೆ ಪ್ರಾಮಾಣಿಕತೆಯನ್ನು ಬಯಸುತ್ತೇವೆ ಎಂದು ಹೇಳಿದೆ ಎಂದರು. ಹಾಗೆ ವಿವರಿಸುತ್ತಾ ಅಕ್ಷಯ್ ತನಗೆ ಯಾವುದೇ ಗೌರವಾನ್ವಿತ ಪಾತ್ರವನ್ನು ನೀಡದ ಕಾರಣ ನಾನು ಅವರೊಂದಿಗೆ ಕೆಲಸ ಮಾಡಲು ನಿರಾಕರಿಸಿದೆ ಎಂದು ಕಂಗನಾ ಹೇಳಿದ್ದಾರೆ.

ಸ್ಟಾರ್​ ಸೆಲಿಬ್ರಿಟಿಗಳ ಕೆಲ ಸಿನಿಮಾಗಳಲ್ಲಿ ಏಕೆ ಭಾಗಿಯಾಗಲಿಲ್ಲ ಎಂಬುದನ್ನು ಕಂಗನಾ ಹೇಳಿದ್ದಾರೆ. ಈ ನಟರು ನಟಿಸಿದ ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ಮಹಿಳೆಯರು ಕೆಲವೇ ದೃಶ್ಯಗಳು ಮತ್ತು ಒಂದೆರಡು ಹಾಡುಗಳಿಗೆ ಸೀಮಿತವಾಗಿರುತ್ತಾರೆ. ಅಂತಹ ಪಾತ್ರಗಳನ್ನು ನಿರ್ವಹಿಸಲು ಅವರು ಆಸಕ್ತಿ ಹೊಂದಿಲ್ಲ ಎಂದು ತಿಳಿಸಿದರು.

ಕಂಗನಾ ಅವರ ಮುಂದಿನ ಸಿನಿಮಾ ಎಮರ್ಜೆನ್ಸಿ, ದೇಶದಲ್ಲಿನ ತುರ್ತು ಪರಿಸ್ಥಿತಿ ಹೇರಿದ ಅವಧಿಯನ್ನು ಆಧರಿಸಿದೆ. ಕಂಗನಾ ರಣಾವತ್​ ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ 2024 ಸೆಪ್ಟೆಂಬರ್​​ 6ರಂದು ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​​)