ಭೋಪಾಲ್: ಮುಂಬರುವ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಕಾಂಗ್ರೆಸ್ಗೆ ಯಾಕೋ ಎಲ್ಲಾ ಅಂದುಕೊಂಡಂತೆ ಆಗಿ ಬರುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಹಿರಿಯ ನಾಯಕರು ಪಕ್ಷಕ್ಕೆ ಗುಡ್ ಬೈ ಹೇಳುತ್ತಿದ್ದು, ಇದೀಗ ಮತ್ತೊಬ್ಬ ಹಿರಿಯ ನಾಯಕ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದು, ಕಾಂಗ್ರೆಸ್ ನಾಯಕತ್ವದ ಕುರಿತು ಅಸಮಾಧಾನ ಹೊರಹಾಕಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ಹಾಗೂ ಅವರ ಪುತ್ರ ಛಿಂದ್ವಾರ ಕ್ಷೇತ್ರದ ಸಂಸದ ನಕುಲ್ನಾಥ್ ಅವರು ತಮ್ಮ ಎಕ್ಸ್ ಬಯೋದಿಂದ ಕಾಂಗ್ರೆಸ್ ಅನ್ನು ತೆಗೆದುಹಾಕಿರುವುದು ಇವರ ಬಿಜೆಪಿ ಸೇರ್ಪಡೆ ವದಂತಿ ಕುರಿತು ಮತ್ತಷ್ಟು ಪುಷ್ಠಿ ನೀಡಿದೆ.
ಇದನ್ನೂ ಓದಿ: ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮನೆಯಲ್ಲಿ ಕಳ್ಳತನ; ಕಾಣೆಯಾದ ನಗದು, ಚಿನ್ನಾಭರಣ ಮೌಲ್ಯ ಎಷ್ಟು ಗೊತ್ತಾ?
ಈಗಾಗಲೇ ಮಧ್ಯಪ್ರದೇಶದ ಛಿಂದ್ವಾರ ಕ್ಷೇತ್ರದ ಮತದಾರರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿರುವ ಕಮಲ್ನಾಥ್ ಹಾಗೂ ಅವರ ಪುತ್ರನಿಗೆ ಬಿಜೆಪಿ ಸೇರುವುದು ಸೂಕ್ತ ಎಂದು ಅಲ್ಲಿನ ಜನರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದಲ್ಲದೆ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಳಿಕ ಕಮಲ್ನಾಥ್ ಅವರನ್ನು ಮೂಲೆಗುಂಪು ಮಾಡಲಾಗಿದ್ದು, ಇದು ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ದೆಹಲಿಯಲ್ಲಿರುವ ಕಮಲ್ನಾಥ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ಕಮಲ್ನಾಥ್ ಪಕ್ಷ ತ್ಯಜಿಸಿದ್ದಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ಗೆ ದೊಡ್ಡ ಹೊಡೆತ ಬೀಳಲಿದ್ದು, ಇದನ್ನು ನಾಯಕರು ಹೇಗೆ ನಿಭಾಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.