ಚೆನ್ನೈ: ಹಿರಿಯ ನಟ ಕಮಲ್ ಹಾಸನ್ ಇಂದು 67ನೇ ಹುಟ್ಟಿದಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಚಿತ್ರರಂಗದ ಗಣ್ಯರಿಂದ ಹಾಗೂ ಅಭಿಮಾನಿಗಳಿಂದ ಅವರಿಗೆ ಶುಭಾಶಯಗಳು ಹರಿದುಬರುತ್ತಿವೆ. ಈ ಸಂದರ್ಭಕ್ಕೆ ಅವರು ತಮ್ಮ ಅಭಿಮಾನಿಗಳಿಂದ ಒಂದು ವಿಶೇಷ ಉಡುಗೊರೆಯನ್ನು ಕೇಳಿದ್ದಾರೆ.
ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ 2015 ರ ನಂತರದ ಅತಿ ಹೆಚ್ಚು ಪ್ರಮಾಣದ ಮಳೆ ಸುರಿಯುತ್ತಿದೆ. ಭಾನುವಾರದಂದು ಸ್ಥಳೀಯ ಆಡಳಿತ ಜನರಿಗೆ ಪ್ರವಾಹದ ಎಚ್ಚರಿಕೆಯನ್ನೂ ನೀಡಿದೆ. ಹೀಗಿರುವಾಗ, ಪ್ರವಾಹಗಳಿಂದಾಗಿ ನರಳುತ್ತಿರುವ ಬಡವರಿಗೆ ಮತ್ತು ಅಗತ್ಯವಿರುವ ಜನರಿಗೆ ಸಹಾಯ ಮಾಡಿ ಎಂದು ಕಮಲ್ ಟ್ವಿಟರ್ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಇದೇ ನನಗೆ ನೀವು ನೀಡಬಲ್ಲ ಅತ್ಯುತ್ತಮ ಉಡುಗೊರೆ ಎಂದೂ ಹೇಳಿದ್ದಾರೆ.
ಪ್ರಸ್ತುತ ಲೋಕೇಶ್ ಕನಕರಾಜ್ ನಿರ್ದೇಶನದ ವಿಕ್ರಮ್ ಚಿತ್ರದಲ್ಲಿ ನಟಿಸುತ್ತಿರುವ ಕಮಲ್, ಆ್ಯಕ್ಷನ್ ಹೀರೋ ಪಾತ್ರ ವಹಿಸುತ್ತಿದ್ದಾರೆ. ಅವರ ಜನ್ಮದಿನಕ್ಕೆ ಪುಟ್ಟ ಉಡುಗೊರೆ ಎಂದು ಹೇಳಿ ಶನಿವಾರ ಆ ಚಿತ್ರದ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ. ರಾಜ್ ಕಮಲ್ ಫಿಲಂಸ್ ಇಂಟರ್ನ್ಯಾಷನಲ್ ನಿರ್ಮಿಸುತ್ತಿರುವ ಈ ಚಿತ್ರ 2022 ರಲ್ಲಿ ತೆರೆ ಕಾಣಲಿದೆ. (ಏಜೆನ್ಸೀಸ್)