ನ್ಯೂಸ್

ಸಿಕ್ಕ ಅವಕಾಶಗಳನ್ನು ಸಂಭ್ರಮಿಸಿ; ಕಮಲ್ ಹಾಸನ್ ಕರೆ

ಚೆನ್ನೈ: ಕಲ್ಕಿ ಕೃಷ್ಣಮೂರ್ರಿ ಅವರ ಕಾದಂಬರಿಯನ್ನಾಧರಿಸಿ ಎರಡು ಭಾಗಗಳಲ್ಲಿ ನಿರ್ಮಾಣವಾಗಿರುವ 'ಪೊನ್ನಿಯನ್ ಸೆಲ್ವನ್ 2' ಚಿತ್ರದಲ್ಲಿ ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಸಹ ನಟಿಸಬೇಕಿತ್ತಂತೆ. ಆದರೆ, ಅದು ಸಾಧ್ಯವಾಗದೆ, ಈಗ ಅವರು ಚಿತ್ರಕ್ಕೆ ಧ್ವನಿಯಾಗಿದ್ದಾರೆ. ಹಾಗಂತ ಅವರೇ ಈ ವಿಷಯವನ್ನು ಹೇಳಿಕೊಂಡಿದ್ದಾರೆ.

ಮಣಿರತ್ನಂ ನಿರ್ದೇಶನದ 'ಪೊನ್ನಿಯನ್ ಸೆಲ್ವನ್ 2' ಚಿತ್ರದ ಟ್ರೇಲರ್, ಬುಧವಾರ ಬಿಡುಗಡೆಯಾಗಿದೆ. ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ನಡೆದ ಭರ್ಜರಿ ಸಮಾರಂಭದಲ್ಲಿ ಕಮಲ್ ಹಾಸನ್ ಟ್ರೇಲರ್ ಬಿಡುಗಡೆ ಮಾಡಿ, ಈ ಚಿತ್ರದಲ್ಲಿ ನಟಿಸಬೇಕಿದ್ದ ವಿಷಯವನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ಚಿತ್ರರಂಗದಲ್ಲಿನ ನನ್ನ ಸುಧೀರ್ಘ ಪಯಣದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದೇನೆ. ಹಲವು ಚಿತ್ರಗಳನ್ನು ಕಳೆದುಕೊಂಡಿದ್ದೇನೆ. ಅದರಲ್ಲಿ ‘ಪೊನ್ನಿಯನ್ ಸೆಲ್ವನ್' ಸಹ ಒಂದು. ಈ ಚಿತ್ರದಲ್ಲೂ ನಾನು ನಟಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಈಗ ಈ ಚಿತ್ರಕ್ಕೆ ಧ್ವನಿ ನೀಡಿದ್ದೇನೆ ಎಂದು ಹೇಳಿದರು.

ತಮಗೆ ಮಣಿರತ್ನಂ ಅವರನ್ನು ಕಂಡರೆ ಹೊಟ್ಟೆಉರಿ ಆಗುತ್ತದೆ ಎಂದು ಕಮಲ್, ‘ಇಂಥದ್ದೊಂದು ದೊಡ್ಡ ಚಿತ್ರ ಮಾಡುವುದು ಸುಲಭವಲ್ಲ. ಅವರು ಅಂದುಕೊಂಡಿದ್ದನ್ನು ತೆರೆಯ ಮೇಲೆ ಅದ್ಭುತವಾಗಿ ತರುತ್ತಾರೆ. ಇತ್ತೀಚೆಗಷ್ಟೇ, ಎ.ಆರ್. ರೆಹಮಾನ್ ಅವರ ಮೂಲಕ ಚಿತ್ರದ ಹಾಡುಗಳನ್ನು ಕೇಳುವ ಅವಕಾಶ ಸಿಕ್ಕಿತು. ನಿಜಕ್ಕೂ ಇವರೆಲ್ಲ ಸೇರಿ ಮ್ಯಾಜಿಕ್ ಮಾಡಿದ್ದಾರೆ. ಅದನ್ನು ಕೇಳಿ ನನಗೆ ಮಾತುಗಳೇ ಹೊರಡುತ್ತಿಲ್ಲ. ಬದುಕು ಚಿಕ್ಕದು. ಚಿತ್ರಗಳಲ್ಲಿ ಅವಕಾಶ ಸಿಗುವುದು ಇನ್ನೂ ಕಡಿಮೆಯೇ. ಹಾಗಾಗಿ ಸಿಕ್ಕ ಅವಕಾಶಗಳನ್ನು ನಾವು ಸಂಭ್ರಮಿಸಬೇಕು. ಹೊಟ್ಟೆಉರಿ ಪಡುವಂತಹ ಸಮಯ ಇದಲ್ಲ' ಎಂದು ಹೇಳಿದರು.

'ಪೊನ್ನಿಯನ್ ಸೆಲ್ವನ್ 2' ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ಮತ್ತು ಮದರಾಸ್ ಟಾಕೀಸ್ ಜಂಟಿಯಾಗಿ ನಿರ್ಮಿಸಿವೆ. ಈಗಾಗಲೇ ಮೊದಲ ಭಾಗ ಕಳೆದ ವರ್ಷ ಬಿಡುಗಡೆಯಾಗಿ ಜಾಗತಿಕ ಬಾಕ್ಸ್ಆಫೀಸ್ನಲ್ಲಿ 500 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಮಾಡಿದೆ. ಎರಡನೆಯ ಭಾಗವು ಏ. 28ರಂದು ಜಗತ್ತಿನಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.