ನ್ಯೂಸ್

ಬಾಲ್ಯವಿವಾಹ ತಡೆಗಟ್ಟಲು ಕಲಬುರಗಿಯ "ಮಿಷನ್​ ಸುರಕ್ಷಾ" ಯೋಜನೆ ಜಾರಿ..|Mission Suraksha

Mission Suraksha : ಅಪ್ರಾಪ್ತ ವಯಸ್ಕರ ವಿವಾಹಗಳು, ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಗಳಂತಹ ಮಕ್ಕಳ ಮೇಲೆ ಆಗುತ್ತಿರುವ ದೋರಣೆಗಳನ್ನು ತಡೆಗಟ್ಟಲು ಕಲಬುರಗಿ ಜಿಲ್ಲಾಡಳಿತ "ಮಿಷನ್​ ಸುರಕ್ಷಾ" ಎಂಬ ಯೋಜನೆಯನ್ನು ರಾಜ್ಯಾದ್ಯಂತ ಶಿಘ್ರದಲ್ಲೇ ಜಾರಿಗೆ ತರಲಿದೆ ಎಂದು ತಿಳಿಸಿದೆ.

ಕರ್ನಾಟಕವನ್ನು ಬಾಲ್ಯವಿವಾಹದಿಂದ ಮುಕ್ತವಾಗಿಸುವ ಉದ್ದೇಶದಿಂದ ಮಕ್ಕಳ ನಿದೇರ್ಶನವು ಸುತ್ತೋಲೆ ಹೊರಡಿಸಿದ್ದು, ಅಂಗನವಾಡಿಗಳು, ಶಾಲೆಗಳು, ತಾಲೂಕು ಹಾಗೂ ಜಿಲ್ಲಾಮಟ್ಟದಿಂದ ಅಭಿಯಾನದ ಯಶಸ್ಸಿಗೆ ಅಳವಡಿಸಿಕೊಳ್ಳಬೇಕಾದ ಏಳು ಹಂತಗಳನ್ನು ಪಟ್ಟಿ ಮಾಡಿ, ಮಕ್ಕಳಿಗೆ ಶಿಕ್ಷಣ ನೀಡಲು ಸಂಪನ್ಮೂಲ ವ್ಯಕ್ತಿಗಳು ಮತ್ತು ತರಬೇತುದಾರರ ಗುಂಪನ್ನು ರಚಿಸಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳಿಗೆ ತಿಳಿಸಲಾಗಿದೆ.

ಜಿಲ್ಲಾಡಳಿತವು 11 ಇಲಾಖೆಗಳ 450 ಸರ್ಕಾರಿ ನೌಕರರ ತಂಡವನ್ನು ಮಾಸ್ಟರ್ ತರಬೇತುದಾರರನ್ನಾಗಿ ರಚಿಸಿದೆ. ಇನ್ನು ಮಿಷನ್ ಸುರಕ್ಷಾವನ್ನು ಆಗಸ್ಟ್ 2023 ರಲ್ಲಿ ಪ್ರಾರಂಭಿಸಿ, ಶಾಲೆಗಳಿಗೆ ಭೇಟಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ಬಗ್ಗೆ ಶಿಕ್ಷಣ ನೀಡಲು ಈ ಯೋಜನೆಯನ್ನು ಪ್ರಾರಂಭಿಸಿದರು.

ಮಕ್ಕಳಿಗೆ ತರಬೇತಿ ನೀಡಲು ರಚಿಸಿದ ಗುಂಪಿನಲ್ಲಿ ಪೊಲೀಸ್ ಸಿಬ್ಬಂದಿ, ಶಾಲಾ ಶಿಕ್ಷಕರು, ಉಪನ್ಯಾಸಕರು, ಮೇಲ್ವಿಚಾರಕರು, ಆರೋಗ್ಯ ಮತ್ತು ಕಾರ್ಮಿಕ ಇಲಾಖೆಗಳ ಸಲಹೆಗಾರರನ್ನು ಒಳಗೊಂಡಿರುತ್ತಾರೆ. ಇನ್ನು ಈ ಅಭಿಯಾನದ ವೆಚ್ಚವನ್ನು ದಾನಿಗಳು ಮತ್ತು ಸ್ವಯಂಸೇವಕರು ಭರಿಸಲಿರುವುದರಿಂದ ಶೂನ್ಯ ಬಜೆಟ್​ನೊಂದಿಗೆ ನಡೆಸಲಾಗುತ್ತಿದೆ.

ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಪ್ರತಿಕ್ರಿಯೆ ಏನು?

ಮಿಷನ್ ಸುರಕ್ಷಾ ಕಾರ್ಯಕ್ರಮ ಆರಂಭವಾಗುವ ಮೊದಲು ಅಪ್ರಾಪ್ತ ವಯಸ್ಸಿನ ವಿವಾಹಗಳು ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳು ಬಹಳ ಕಡಿಮೆ ಸಂಖ್ಯೆಯಲ್ಲಿ ವರದಿಯಾಗುತ್ತಿದ್ದವು. ಆದರೆ ಈ ಕಾರ್ಯಕ್ರಮ ವರದಿಗಾರಿಕೆಯನ್ನು ಹೆಚ್ಚಿಸಲು ಸಹಾಯ ಮಾಡಿದೆ. 2023-24 ರಲ್ಲಿ ಒಟ್ಟು 156 ಪ್ರಕರಣಗಳು ಹಾಗೂ 2024-25 ರಲ್ಲಿ 159 ಪ್ರಕರಣಗಳನ್ನು ಪೋಷಕರು ಹಾಗೂ ಮಕ್ಕಳ ಸಹಾಯವಾಣಿ ಮೂಲಕ ದಾಖಲಿಸಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮಂಜುಳಾ ಪಾಟೀಲ್​ ತಿಳಿಸಿದ್ದಾರೆ.

ಶಾಲಾ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕ್ರಮಗಳು, ಲೈಂಗಿಕ ಕಿರುಕುಳ ಪ್ರಕರಣಗಳನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳುವುದು ಮತ್ತು ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸುವುದನ್ನು ಖಚಿತಪಡಿಸಿಕೊಳ್ಳುವುದು ಈ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯೋಜನೆ ಬಗ್ಗೆ ಜಿಲ್ಲಾಧಿಕಾರಿ ಪ್ರತಿಕ್ರಿಯೆ ಏನು?

ಕಳೆದ ಎರಡು ವರ್ಷಗಳಲ್ಲಿ ಈ ತಂಡವು ಶಾಲಾ ಮಕ್ಕಳು, ಪೋಷಕರು ಮತ್ತು ಶಿಕ್ಷಕರೊಂದಿಗೆ 8,200 ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದೆ. ಇನ್ನು ಜಿಲ್ಲೆಯಲ್ಲಿ ಪೋಕ್ಸೊ ಪ್ರಕರಣಗಳು ಹೆಚ್ಚಾಗಿದ್ದರಿಂದ ಹೆಣ್ಣು ಮಕ್ಕಳನ್ನು ರಕ್ಷಿಸಲು ನಾವು ಮಿಷನ್ ಸುರಕ್ಷಾವನ್ನು ಪ್ರಾರಂಭಿಸಿದ್ದೇವೆ. ಈ ಹಿಂದೆ, ಲೈಂಗಿಕ ಕಿರುಕುಳ ಮತ್ತು ಅಪ್ರಾಪ್ತ ವಯಸ್ಕರ ವಿವಾಹಗಳು ವರದಿಯಾಗುತ್ತಿರಲಿಲ್ಲ. ಈಗ, ತರಬೇತಿ ಮೂಲಕ ಜಾಗೃತಿ ಮೂಡಿಸಿದ ನಂತರ ಹೆಚ್ಚಿನ ಮಕ್ಕಳು ಸ್ವತಃ ಅವರೇ ದೂರು ನೀಡಲು ಬರುತ್ತಿದ್ದು, ಪೋಷಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತಿಳಿಸಿದ್ದಾರೆ.( ಏಜೆನ್ಸೀಸ್​)