ನ್ಯೂಸ್

ಕಚ್ಚತಿವು ದ್ವೀಪ, ವಿವಾದದ ಕೂಪ..; ಸ್ವಾಧೀನದ ಕೂಗು ತಮಿಳುನಾಡು ರಾಜಕೀಯದಲ್ಲಿನ್ನೂ ಜೀವಂತ..

ಇಂದಿರಾ ಗಾಂಧಿಯವರು 1974ರಲ್ಲಿ ಕಚ್ಚತಿವು ದ್ವೀಪ ಪ್ರದೇಶದ ಮೇಲಿನ ಭಾರತದ ಹಕ್ಕು ಪ್ರತಿಪಾದನೆಯನ್ನು ಬಿಟ್ಟುಕೊಟ್ಟರು. ಹೀಗಿದ್ದರೂ ಶ್ರೀಲಂಕಾದಿಂದ ಈ ದ್ವೀಪವನ್ನು ಭಾರತದ ಸ್ವಾಧೀನಕ್ಕೆ ಪಡೆದುಕೊಳ್ಳಬೇಕೆಂಬ ಕೂಗು ತಮಿಳುನಾಡಿನ ರಾಜಕೀಯದಲ್ಲಿ ಇನ್ನೂ ಜೀವಂತವಾಗಿ ಉಳಿದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್​ 10ರಂದು ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ತಮ್ಮ ಭಾಷಣದಲ್ಲಿ ಕಚ್ಚತಿವು ದ್ವೀಪದ ಬಗ್ಗೆ ಪ್ರಸ್ತಾಪಿಸಿದರು. ಇದೀಗ ಭಾರತ ಮಾತಾ ಹೇಳಿಕೆ ನೀಡಿದ ರಾಹುಲ್​ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ ಅವರು 1974ರಲ್ಲಿ ಶ್ರೀಲಂಕಾಕ್ಕೆ ಕಚ್ಚತಿವು ದ್ವೀಪವನ್ನು ಬಿಟ್ಟುಕೊಟ್ಟಿದ್ದು ಇಂದಿರಾ ಗಾಂಧಿ ಸರ್ಕಾರ ಎಂದು ಹೇಳಿದರು.

"ಕಚ್ಚತಿವು ದ್ವೀಪವು ತಮಿಳುನಾಡು ಮತ್ತು ಶ್ರೀಲಂಕಾ ನಡುವಿನ ದ್ವೀಪವಾಗಿದೆ. ಇದನ್ನು ಯಾರೋ ಬೇರೆ ದೇಶಕ್ಕೆ ಬಿಟ್ಟುಕೊಟ್ಟಿದ್ದಾರೆ. ಇಂದಿರಾ ಗಾಂಧಿ ನಾಯಕತ್ವದಲ್ಲಿ ಇದು ನಡೆದಿದೆ. ಇದು ತಾಯಿ ಭಾರತಿಯ ಭಾಗವಾಗಿರಲಿಲ್ಲವೇ' ಎಂದು ಪ್ರಧಾನಿ ಪ್ರಶ್ನಿಸಿದರು. ಈಗ ಶ್ರೀಲಂಕಾದ ಒಂದು ಭಾಗವಾಗಿರುವ ಕಚ್ಚತಿವು ದ್ವೀಪವು ತಮಿಳುನಾಡಿನಲ್ಲಿ ರಾಜಕಾರಣಿಗಳಿಗೆ ವಿವಾದದ ರಾಜಕೀಯ ಸಮಸ್ಯೆಯಾಗಿ ಉಳಿದಿದೆ. ಇತ್ತೀಚೆಗಷ್ಟೇ ಶ್ರೀಲಂಕಾದ ಅಧ್ಯ ರನಿಲ್​ ವಿಕ್ರಮಸಿಂ ಅವರು ನವದೆಹಲಿಗೆ ಭೇಟಿ ನೀಡುವ ಮುನ್ನ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ದ್ವೀಪವನ್ನು ಹಿಂಪಡೆಯುವಂತೆ ಮನವಿ ಮಾಡಿದ್ದರು.

ರಾಜ್ಯ ಸರ್ಕಾರದ ಒಪ್ಪಿಗೆಯಿಲ್ಲದೆ ಕೇಂದ್ರ ಸರ್ಕಾರವು ಶ್ರೀಲಂಕಾಕ್ಕೆ ಕಚ್ಚತಿವು ದ್ವೀಪವನ್ನು ವರ್ಗಾಯಿಸಿದ್ದು, ತಮಿಳುನಾಡು ಮೀನುಗಾರರ ಹಕ್ಕುಗಳನ್ನು ಕಸಿದುಕೊಂಡಿದೆ. ಅಲ್ಲದೆ, ಅವರ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಸ್ಟಾಲಿನ್​ ಪತ್ರದಲ್ಲಿ ತಿಳಿಸಿದ್ದಾರೆ.

ಏನಿದರ ಇತಿಹಾಸ?

ಭೌಗೋಳಿಕ ಕಾಲಮಾನದ ಪ್ರಕಾರ, ಈ ದ್ವೀಪವು ತುಲನಾತ್ಮಕವಾಗಿ ಹೊಸದು. 14ನೇ ಶತಮಾನದಲ್ಲಿ ಜ್ವಾಲಾಮುಖಿ ಸ್ಫೋಟದಿಂದ ಕಚ್ಚತಿವು ದ್ವೀಪವು ನಿರ್ಮಾಣವಾಗಿದೆ. ಆರಂಭಿಕ ಮಧ್ಯಕಾಲೀನ ಅವಧಿಯಲ್ಲಿ ಇದು ಶ್ರೀಲಂಕಾದ ಜಾಫ್ನಾ ಸಾಮ್ರಾಜ್ಯದಿಂದ ನಿಯಂತ್ರಿಸಲ್ಪಟ್ಟಿತು. 17ನೇ ಶತಮಾನದಲ್ಲಿ ರಾಮೇಶ್ವರಂನಿಂದ ವಾಯವ್ಯಕ್ಕೆ ಅಂದಾಜು 55 ಕಿಮೀ ದೂರದಲ್ಲಿರುವ ರಾಮನಾಥಪುರಂ ಮೂಲದ ರಾಮನಾಡ್​ ಜಮೀನ್ದಾರಿಗೆ ನಿಯಂತ್ರಣವನ್ನು ನೀಡಲಾಯಿತು. ಇದು ಬ್ರಿಟಿಷರ ಕಾಲದಲ್ಲಿ ಮದ್ರಾಸ್​ ಪ್ರೆಸಿಡೆನ್ಸಿಯ ಭಾಗವಾಯಿತು. ಆದರೆ, ಬ್ರಿಟಿಷ್​ ವಸಾಹತುಗಳಾಗಿದ್ದ ಸಮಯದಲ್ಲಿ 1921ರಲ್ಲಿ ಭಾರತ ಮತ್ತು ಶ್ರೀಲಂಕಾ ಎರಡೂ ಮೀನುಗಾರಿಕೆ ಗಡಿಗಳನ್ನು ನಿರ್ಧರಿಸುವ ಸಲುವಾಗಿ ಕಚ್ಚತಿವು ಮೇಲೆ ತಮ್ಮ ಹಕ್ಕನ್ನು ಪ್ರತಿಪಾದಿಸಿದವು. ಒಂದು ಸಮೀೆಯು ಶ್ರೀಲಂಕಾದಲ್ಲಿ ಕಚ್ಚ ತೀವು ದ್ವೀಪವನ್ನು ಗುರುತಿಸಿತು. ಆದರೆ, ಭಾರತದ ಬ್ರಿಟಿಷ್​ ನಿಯೋಗವು ಇದನ್ನು ಪ್ರಶ್ನಿಸಿತು. ರಾಮನಾಡ್​ ಸಾಮ್ರಾಜ್ಯವು ದ್ವೀಪದ ಮಾಲೀಕತ್ವವನ್ನು ಹೊಂದಿತ್ತು ಎಂಬುದನ್ನು ಉಲ್ಲೆಖಿಸಿತು. ಈ ವಿವಾದವು 1974ರವರೆಗೂ ಇತ್ಯರ್ಥವಾಗಲಿಲ್ಲ.

ಯುದ್ಧ ಮಾಡಲೇಬೇಕು...: "ಕಚ್ಚತಿವು ದ್ವೀಪವು 1974ರ ಒಪ್ಪಂದದ ಮೂಲಕ ಶ್ರೀಲಂಕಾಕ್ಕೆ ಹೋಗಿದೆ. ಅದನ್ನು ಇಂದು ಹೇಗೆ ಹಿಂಪಡೆಯಬಹುದು? ಕಚ್ಚತಿವು ಮರಳಿ ಬೇಕೆಂದರೆ ಅದನ್ನು ವಾಪಸ್​ ಪಡೆಯಲು ನೀವು ಯುದ್ಧ ಮಾಡಲೇಬೇಕು'. ಅಂದಿನ ಅಟಾರ್ನಿ ಜನರಲ್​ ಮುಕುಲ್​ ರೋಹ್ಟಗಿ ಅವರು 2014ರಲ್ಲಿ ಸುಪ್ರೀಂ ಕೋರ್ಟ್​ನಲ್ಲಿ ಹೀಗೆ ಹೇಳಿದ್ದರು.

ಎಲ್ಲಿದೆ ಈ ದ್ವೀಪ?

ಭಾರತ ಮತ್ತು ಶ್ರೀಲಂಕಾ ನಡುವಿನ ಪಾಕ್​ ಜಲಸಂಧಿಯಲ್ಲಿದೆ ಕಚ್ಚತಿವು ದ್ವೀಪ. 285 ಎಕರೆ ವಿಸ್ತಾರವುಳ್ಳ ಈ ಪ್ರದೇಶವು ಜನವಸತಿರಹಿತವಾಗಿದೆ. ಇದರ ಉದ್ದ 1.6 ಕಿಮೀಗಿಂತ ಹೆಚ್ಚೇನೂ ಇಲ್ಲ. ಇದರ ವಿಶಾಲವಾದ ಬಿಂದುವಿನಲ್ಲಿ 300 ಮೀಟರ್​ನಷ್ಟು ಅಗಲವಿದೆ. ಇದು ಭಾರತದ ಕರಾವಳಿಯಿಂದ ಅಂದಾಜು 33 ಕಿಮೀ ದೂರದಲ್ಲಿ ರಾಮೇಶ್ವರಂನ ಈಶಾನ್ಯದಲ್ಲಿದೆ. ಇದು ಶ್ರೀಲಂಕಾದ ಉತ್ತರ ತುದಿಯಲ್ಲಿ ಜಾಫ್ನಾದಿಂದ ಅಂದಾಜು 62 ಕಿಮೀ ನೈಋತ್ಯದಲ್ಲಿದೆ. ಶ್ರೀಲಂಕಾಕ್ಕೆ ಸೇರಿದ ಜನವಸತಿ ದ್ವೀಪವಾದ ಡೆಲ್ಫ್​ ನಿಂದ 24 ಕಿಮೀ ಅಂತರದಲ್ಲಿದೆ. ದ್ವೀಪದಲ್ಲಿರುವ ಏಕೈಕ ಕಟ್ಟಡವೆಂದರೆ 20ನೇ ಶತಮಾನದ ಆರಂಭದಲ್ಲಿ ನಿರ್ಮಾಣಗೊಂಡ ಕ್ಯಾಥೋಲಿಕ್​ ದೇವಾಲಯವಾದ ಸೇಂಟ್​ ಆಂಥೋನಿ ಚರ್ಚ್​. ವಾರ್ಷಿಕ ಉತ್ಸವದ ಸಮಯದಲ್ಲಿ, ಭಾರತ ಮತ್ತು ಶ್ರೀಲಂಕಾ ದೇಶಗಳ ಕ್ರಿಶ್ಚಿಯನ್​ ಪಾದ್ರಿಗಳು ಇಲ್ಲಿ ಸೇವೆ ನಡೆಸುತ್ತಾರೆ. ಎರಡೂ ದೇಶಗಳ ಭಕ್ತರು ತೀರ್ಥಯಾತ್ರೆ ಮಾಡುತ್ತಾರೆ. ಈ ವರ್ಷ 2,500 ಭಾರತೀಯರು ಉತ್ಸವಕ್ಕಾಗಿ ರಾಮೇಶ್ವರಂನಿಂದ ಕಚ್ಚತಿವುಗೆ ಪ್ರಯಾಣಿಸಿದ್ದರು. ದ್ವೀಪದಲ್ಲಿ ಕುಡಿಯುವ ನೀರಿನ ಮೂಲವಿಲ್ಲದ ಕಾರಣ ಕಚ್ಚತಿವು ಶಾಶ್ವತ ನೆಲೆಗೆ ಸೂಕ್ತವಾಗಿಲ್ಲ.

ಒಪ್ಪಂದ ಏರ್ಪಟ್ಟರೂ ಅನಿಶ್ಚಿತತೆ

1974ರಲ್ಲಿ ಇಂದಿರಾ ಗಾಂಧಿ ಅವರು ಭಾರತ ಮತ್ತು ಶ್ರೀಲಂಕಾ ನಡುವಿನ ಸಮುದ್ರ ಗಡಿಯನ್ನು ಶಾಶ್ವತವಾಗಿ ಪರಿಹರಿಸಲು ಪ್ರಯತ್ನಿಸಿದರು. ಭಾರತ & ಶ್ರೀಲಂಕಾದ ಸಾಗರ ಒಪ್ಪಂದ ಎಂದು ಕರೆಯಲ್ಪಡುವ ಈ ಒಪ್ಪಂದದ ಭಾಗವಾಗಿ, ಇಂದಿರಾ ಗಾಂಧಿ ಅವರು ಕಚ್ಚತಿವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟರು. ಆ ಸಮಯದಲ್ಲಿ ದ್ವೀಪವು ಹೆಚ್ಚು ಆಯಕಟ್ಟಿನ ಮೌಲ್ಯವನ್ನು ಹೊಂದಿಲ್ಲ ಎಂದು ಇಂದಿರಾ ಗಾಂಧಿ ಭಾವಿಸಿದ್ದರು. ಅಲ್ಲದೆ, ದ್ವೀಪದ ಮೇಲಿನ ಭಾರತದ ಹಕ್ಕನ್ನು ಬಿಟ್ಟುಕೊಡುವುದರಿಂದ ದಣದ ನೆರೆಹೊರೆಯವರೊಂದಿಗೆ ಭಾರತದ ಸಂಬಂಧ ವರ್ಧಿಸುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿತ್ತು. ಇದಲ್ಲದೆ, ಒಪ್ಪಂದದ ಪ್ರಕಾರ ಭಾರತೀಯ ಮೀನುಗಾರರು ಕಚ್ಚತಿವುಗೆ ಇಲ್ಲಿಯವರೆಗೆ ಪ್ರವೇಶಿಸಲು ಇನ್ನೂ ಅನುಮತಿಸಲಾಗಿದೆ. ಆದರೆ, ಮೀನುಗಾರಿಕೆ ಹಕ್ಕುಗಳ ಸಮಸ್ಯೆಯು ಈ ಒಪ್ಪಂದದಿಂದ ಇತ್ಯರ್ಥವಾಗಿಲ್ಲ. ಶ್ರೀಲಂಕಾವು ಕಚ್ಚತಿವು ಪ್ರವೇಶಿಸುವ ಭಾರತೀಯ ಮೀನುಗಾರರ ಹಕ್ಕನ್ನು "ವಿಶ್ರಾಂತಿ, ಬಲೆಗಳನ್ನು ಒಣಗಿಸುವುದು ಮತ್ತು ವೀಸಾ ಇಲ್ಲದೆ ಕ್ಯಾಥೋಲಿಕ್​ ದೇಗುಲಕ್ಕೆ ಭೇಟಿ ನೀಡಲು ಸೀಮಿತವಾಗಿದೆ' ಎಂದು ವ್ಯಾಖ್ಯಾನಿಸಿದೆ. 1976ರಲ್ಲಿ ಭಾರತದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಂಡಿದ್ದ ಅವಧಿಯಲ್ಲಿ ಮಾಡಿಕೊಳ್ಳಲಾದ ಮತ್ತೊಂದು ಒಪ್ಪಂದದ ಪ್ರಕಾರ, ಎರಡೂ ದೇಶಗಳು ಇತರರ ವಿಶೇಷ ಆರ್ಥಿಕ ವಲಯದಲ್ಲಿ (ಇಇಝಡ್​) ಮೀನುಗಾರಿಕೆ ಕೈಗೊಳ್ಳುವುದನ್ನು ನಿಷೇಧಿಸಲಾಯಿತು. ಮತ್ತೆ, ಕಚ್ಚತಿವು ದ್ವೀಪವು ಎರಡೂ ದೇಶದ ಇಇಝಡ್​ಗಳ ಅಂಚಿನಲ್ಲಿಯೇ ಇದ್ದು, ಈ ಪ್ರದೇಶದಲ್ಲಿ ಮೀನುಗಾರಿಕೆ ಹಕ್ಕುಗಳಿಗೆ ಸಂಬಂಧಿಸಿದಂತೆ ಅನಿಶ್ಚಿತತೆಯು ಮುಂದುವರಿಯಿತು.

ಅಂತರ್ಯುದ್ಧದ ಪ್ರಭಾವ

1983 ಮತ್ತು 2009 ರ ನಡುವೆ ಶ್ರೀಲಂಕಾದಲ್ಲಿ ರಕ್ತಸಿಕ್ತ ಅಂತರ್ಯುದ್ಧವು ಉಲ್ಬಣಗೊಂಡಿದ್ದರಿಂದ ಗಡಿ ವಿವಾದವು ಹಾಗೆಯೇ ಉಳಿದುಕೊಂಡಿತು. ಪ್ರತ್ಯೇಕ ತಮಿಳು ರಾಷ್ಟ್ರಕ್ಕಾಗಿ ಎಲ್​ಟಿಟಿಇ ಸಶಸ್ತ್ರ ಹೋರಾಟ ನಡೆಸಿತ್ತು. ಆಗ, ಶ್ರೀಲಂಕಾದ ನೌಕಾ ಪಡೆಗಳು ಜಾಫ್ನಾದಿಂದ ಹೊರಗಿರುವ ಎಲ್​ಟಿಟಿಇಯ ಸರಬರಾಜು ಮಾರ್ಗಗಳನ್ನು ಕಡಿತಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರಿಂದ, ಶ್ರೀಲಂಕಾದ ನೀರಿನಲ್ಲಿ ಭಾರತೀಯ ಮೀನುಗಾರರ ಅತಿಕ್ರಮಣಗಳು ಸಾಮಾನ್ಯವಾಗಿದ್ದವು. ಭಾರತದ ದೊಡ್ಡ ಮೀನುಗಾರಿಕೆ ದೋಣಿಗಳು ಅತಿಯಾದ ಮೀನುಗಾರಿಕೆ ಮಾಡುತ್ತಿದ್ದುದಲ್ಲದೆ, ಶ್ರೀಲಂಕಾದ ಮೀನುಗಾರಿಕೆ ಬಲೆಗಳು ಮತ್ತು ದೋಣಿಗಳನ್ನು ಹಾನಿಗೊಳಿಸುತ್ತಿದ್ದುದು ಅಸಮಾಧಾನಕ್ಕೆ ಕಾರಣವಾಗಿತ್ತು. 2009ರಲ್ಲಿ ಎಲ್​ಟಿಟಿಇ ವಿರುದ್ಧದ ಶ್ರೀಲಂಕಾ ಯುದ್ಧವು ಕೊನೆಗೊಂಡ ನಂತರ ಎಲ್ಲವೂ ನಾಟಕೀಯವಾಗಿ ಬದಲಾಯಿತು. ಶ್ರೀಲಂಕಾ ತನ್ನ ಕಡಲ ರಣೆಯನ್ನು ಹೆಚ್ಚಿಸುವ ಮೂಲಕ ಭಾರತೀಯ ಮೀನುಗಾರರ ಅತಿಕ್ರಮಣದತ್ತ ಗಮನಹರಿಸಿತು. ಭಾರತದ ಭಾಗದಲ್ಲಿ ಸಮುದ್ರ ಸಂಪನ್ಮೂಲಗಳ ಕೊರತೆ ಎದುರಿಸಿದ ತಮಿಳುನಾಡಿನ ಮೀನುಗಾರರು ಅನೇಕ ವರ್ಷಗಳಿಂದ ಮಾಡುತ್ತಿದ್ದಂತೆಯೇ ಶ್ರೀಲಂಕಾದ ನೀರನ್ನು ಆಗಾಗ್ಗೆ ಪ್ರವೇಶಿಸಿದಾಗ ಶ್ರೀಲಂಕಾ ನೌಕಾಪಡೆಯು ಅವರನ್ನು ಬಂಧಿಸತೊಡಗಿತು. ಬಂಧಿಸಿದ ಮೀನುಗಾರರಿಗೆ ಚಿತ್ರಹಿಂಸೆ ನೀಡಿದ ಹಾಗೂ ಸಾವು ಸಂಭವಿಸಿದ ಆರೋಪಗಳು ಕೇಳಿಬಂದಿವೆ. ಇಂತಹ ಪ್ರಕರಣಗಳು ನಡೆದಾಗಲೆಲ್ಲ, ಕಚ್ಚತಿವು ಮೇಲೆ ಹಕ್ಕು ಪ್ರತಿಪಾದನೆ ಬೇಡಿಕೆ ಕೇಳಿಬರುತ್ತದೆ.

ತಮಿಳುನಾಡು ನಿಲುವೇನು?

ತಮಿಳುನಾಡು ರಾಜ್ಯ ವಿಧಾನಸಭೆಯನ್ನು ಸಂಪರ್ಕಿ-ಸದೆಯೇ ಶ್ರೀಲಂಕಾಕ್ಕೆ ಕಚ್ಚತಿವುವನ್ನು ಕೊಡಲಾಯಿತು. ದ್ವೀಪದ ಮೇಲೆ ರಾಮನಾಡ್​ ಜಮೀನ್ದಾರಿಯ ಐತಿಹಾಸಿಕ ನಿಯಂ-ತ್ರಣ ಮತ್ತು ಭಾರತೀಯ ತಮಿಳು ಮೀನುಗಾರರ ಸಾಂಪ್ರದಾ-ಯಿಕ ಮೀನುಗಾರಿಕೆ ಹಕ್ಕುಗಳನ್ನು ಉಲ್ಲೆಖಿಸಿ ಆ ಸಮಯದಲ್ಲಿಯೇ ಇಂದಿರಾ ಗಾಂಧಿ ಕ್ರಮದ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆದವು. 1991ರಲ್ಲಿ ಶ್ರೀಲಂಕಾದ ಅಂತರ್ಯುದ್ಧದಲ್ಲಿ ಭಾರತದ ಹಸ್ತೇಪದ ನಂತರ, ತಮಿಳುನಾಡು ವಿಧಾನ-ಸಭೆಯಲ್ಲಿ ಮತ್ತೆ ಕಚ್ಚತಿವು ಹಿಂಪಡೆಯಲು ಮತ್ತು ತಮಿಳು ಮೀನುಗಾರರ ಮೀನು-ಗಾರಿಕೆ ಹಕ್ಕುಗಳನ್ನು ಮರುಸ್ಥಾಪಿಸಲು ಪ್ರಯತ್ನಿಸಲಾಯಿತು. ಅಂದಿನಿಂದ ತಮಿಳು ರಾಜಕೀಯದಲ್ಲಿ ಕಚ್ಚತಿವು ನಿರಂತರವಾಗಿ ಕಾಣಿಸಿಕೊಂಡಿದೆ. 2008ರಲ್ಲಿ ಆಗಿನ ಎಐಎಡಿಎಂಕೆ ಅಧಿನಾಯಕಿ ದಿ. ಜೆ. ಜಯಲಲಿತಾ ಅವರು ಸಾಂವಿಧಾನಿಕ ತಿದ್ದುಪಡಿ-ಯಿಲ್ಲದೆ ಕಚ್ಚತಿವು ದ್ವೀಪವನ್ನು ಬೇರೆ ದೇಶಕ್ಕೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 1974ರ ಒಪ್ಪಂದವು ಭಾರತೀಯ ಮೀನುಗಾರರ ಸಾಂಪ್ರದಾಯಿಕ ಮೀನುಗಾರಿಕೆ ಹಕ್ಕುಗಳು ಮತ್ತು ಜೀವನೋಪಾಯದ ಮೇಲೆ ಪರಿಣಾಮ ಬೀರಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. 2011ರಲ್ಲಿ ಮುಖ್ಯಮಂತ್ರಿಯಾದ ನಂತರ ಅವರು ರಾಜ್ಯ ವಿಧಾನಸಭೆಯಲ್ಲಿ ರ್ನಿಣಯವನ್ನು ಮಂಡಿಸಿದರು. ಅಲ್ಲದೆ, 2012ರಲ್ಲಿ, ಶ್ರೀಲಂಕಾದಿಂದ ಹೆಚ್ಚುತ್ತಿರುವ ಭಾರತೀಯ ಮೀನುಗಾರರ ಬಂಧನದ ಹಿನ್ನೆಲೆಯಲ್ಲಿ ತಮ್ಮ ಅರ್ಜಿಯನ್ನು ತ್ವರಿತಗೊಳಿಸುವಂತೆ ಸುಪ್ರೀಂ ಕೋರ್ಟ್​ಗೆ ಕೋರಿದರು. ಆದರೂ ಕಚ್ಚತಿವು ಕುರಿತು ಕೇಂದ್ರ ಸರ್ಕಾರದ ನಿಲುವು ಬದಲಾಗಿಲ್ಲ. ದ್ವೀಪವು ಯಾವಾಗಲೂ ವಿವಾದಕ್ಕೊಳಗಾಗಿರುವುದರಿಂದ, ಭಾರತಕ್ಕೆ ಸೇರಿದ ಯಾವುದೇ ಪ್ರದೇಶವನ್ನು ಬಿಟ್ಟುಕೊಡಲಿಲ್ಲ ಅಥವಾ ಸಾರ್ವ ಭೌಮತ್ವವನ್ನು ಬಿಟ್ಟುಕೊಡಲಿಲ್ಲ ಎಂದು ಕೇಂದ್ರ ಸರ್ಕಾರ ವಾದಿಸಿದೆ. ಬಿಜೆಪಿಯ ಪದ ತಮಿಳುನಾಡು ಟಕವು ಕಚ್ಚತಿವು ಹಿಂಪಡೆಯಲು ಆಗ್ರಹಿಸಿ ಧ್ವನಿಯೆತ್ತಿದ್ದರೂ ನರೇಂದ್ರ ಮೋದಿ ಸರ್ಕಾರವು ತಮಿಳು ರಾಜಕಾರಣಿಗಳ ಬೇಡಿಕೆ ಈಡೇರಿಸಲು ಮುಂದಾಗಿದ್ದು ಗೋಚರಿಸಿಲ್ಲ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಸಾಧ್ಯತೆಯೂ ವಿರಳ.