ಚಿತ್ರದುರ್ಗ: ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ನಟ ದರ್ಶನ್ (Darshan), ಪವಿತ್ರಾ ಗೌಡ (Pavithra Gowda) ಸೇರಿದಂತೆ 7 ಮಂದಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಆರೋಪಿಗಳಿಗೆ ಸದ್ಯಕ್ಕೆ ರಿಲೀಫ್ ಸಿಕ್ಕಿದಂತಾಗಿದೆ. ಇನ್ನೂ ಆರೋಪಿಗಳಿಗೆ ಜಾಮೀನು ಸಿಕ್ಕಿರುವ ಬಗ್ಗೆ ರೇಣುಕಸ್ವಾಮಿ ತಂದೆ ಕಾಶೀನಾಥಯ್ಯ ಪ್ರತಿಕ್ರಿಯಿಸಿದ್ದು, ದೇವರ ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಕ್ಕೇಸಿಗುತ್ತದೆ ಎಂದು ಹೇಳಿದ್ದಾರೆ.
ನಗರದಲ್ಲಿ ಈ ಬಗ್ಗೆ ಮಾತನಾಡುದ ಕಾಶೀನಾಥಯ್ಯ, ನ್ಯಾಯಾಂಗ ವ್ಯವಸ್ಥೆ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಜಾಮೀನು ಮಂಜೂರು ಬಗ್ಗೆ ಮಾಧ್ಯಮಗಳಿಂದ ತಿಳಿದಿದೆ. ವಿಚಾರಣೆ ಬಳಿಕ ಸೂಕ್ತ ನ್ಯಾಯ ಸಿಗುವ ನಂಬಿಕೆಯಿದೆ. ತಾತ್ಕಾಲಿಕವಾಗಿ ಆರೋಪಿಗಳಿಗೆ ಜಾಮೀನು ಆಗಿರಬಹುದು. ಆದರೆ ಅಂತಿಮವಾಗಿ ಆರೋಪಿಗಳಿಗೆ ಶಿಕ್ಷೆ ಆಗುವ ನಂಬಿಕೆಯಿದೆ. ದೇವರ ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಕ್ಕೇಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದರ್ಶನ್ ನಮ್ಮ ಜತೆ ಮಾತುಕತೆಗೆ ಬರುವ ವಿಚಾರ ಇಲ್ಲ. ದರ್ಶನ್ ಜತೆ ಮಾತನಾಡುವಂಥದ್ದು ಏನೂ ಇಲ್ಲ. ನಾವು ಮಗನ ಕಳೆದುಕೊಂಡು ದುಖ:ದಲ್ಲಿದ್ದೇವೆ. ನಮಗೆ ಮಗ ಬೇಕೆ ಹೊರತು ಮಾತುಕತೆ ಏನೂ ಬೇಕಿಲ್ಲ. ಸೊಸೆಗೆ ಸರ್ಕಾರಿ ನೌಕರಿ ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸುವ ಆಪ್ತರ ಜೊತೆ ಚರ್ಚಿಸುತ್ತೇವೆ. ಸರ್ಕಾರ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಮೊರೆ ಹೋಗಿದೆ. ಜಾಮೀನು ಪ್ರಶ್ನಿಸಿ ಸಹ ಸುಪ್ರೀಂ ಮೊರೆ ಹೋಗುವ ವಿಶ್ವಾಸವಿದೆ. ಸಿಎಂ ಹಾಗೂ ಸರ್ಕಾರದ ಮೇಲೆ ಒತ್ತಡ ಹಾಕಲ್ಲ, ಯೋಚಿಸುತ್ತೇವೆ ಎಂದು ರೇಣುಕಸ್ವಾಮಿ ತಂದೆ ಕಾಶೀನಾಥಯ್ಯ ಹೇಳಿದ್ದಾರೆ.
ರೇಣುಕಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ತಯಾರಿ ನಡೆಸಿದೆ ಎಂದು ಹೇಳಲಾಗಿದೆ. ಆರೋಪಿಗಳಿಗೆ ಜಾಮೀನು ದೊರೆತರು ಸಂಕಷ್ಟ ತಪ್ಪಿಲ್ಲ ಎಂಬ ಮಾತು ಕೇಳಿ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.