ಲಖನೌ: ಐಸ್ಕ್ರೀಂನಲ್ಲಿ ವೀರ್ಯಬೆರೆಸಿ ಮಾರಾಟ ಮಾಡುತ್ತಿದ್ದ ದುಷ್ಕರ್ಮಿಯನ್ನು ಇತ್ತೀಚೆಗೆ ತೆಲಂಗಾಣದ ವರಾಂಗಲ್ನಲ್ಲಿ ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಅವಿವೇಕಿಯೊಬ್ಬ ಕಬ್ಬಿನ ಜ್ಯೂಸ್ಗೆ ಮೂತ್ರಬೆರೆಸಿ ಜನರಿಗೆ ಮಾರಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ. ಆರೋಪಿಯನ್ನು ಅಮೀರ್ ಎಂದು ಗುರುತಿಸಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ಗಾಜಿಯಾಬಾದ್ ನ ಜ್ಯೂಸ್ ಸೆಂಟರ್‌ನಲ್ಲಿ ಅಮೀರ್ ಹಣ್ಣು ಮತ್ತು ಕಬ್ಬಿನ ಜ್ಯೂಸ್‌ನಲ್ಲಿ ಮೂತ್ರ ಬೆರೆಸುತ್ತಿರುವುದು ಸ್ಥಳೀಯರಿಗೆ ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜನರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನ ಜೊತೆ ಅವನ ತಂದೆನ್ನೂ ಬಂಧಿಸಲಾಗಿದೆ.
ಈ ಹೇಯ ಘಟನೆ ನಡೆಸಿದ ಜ್ಯೂಸ್ ಸ್ಟಾಲ್ ಅನ್ನು ಶೋಧಿಸಿ ಮೂತ್ರ ತುಂಬಿದ ಪ್ಲಾಸ್ಟಿಕ್ ಚೀಲ ಮತ್ತು ಕಬ್ಬನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸಿಪಿ ಅಂಕುರ್ ವಿಹಾರ್ ಭಾಸ್ಕರ್ ವರ್ಮಾ ತಿಳಿಸಿದ್ದಾರೆ. ಬಾಲಕನ ತಂದೆಯನ್ನು ವಿಚಾರಿಸಿದಾಗ ಅಸಮಂಜಸ ಉತ್ತರ ನೀಡುತ್ತಿದ್ದ ಎಂದು ವಿಹಾರ್ ಭಾಸ್ಕರ್ ಹೇಳಿದ್ದಾರೆ. ಬಳಿಕ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ.
ನಗರೀಕರಣಗೊಂಡಂತೆ ಪ್ರತಿಯೊಬ್ಬರೂ ಹೊರಗೆ ತಿನ್ನಲು ಇಷ್ಟಪಡುತ್ತಾರೆ. ಆದರೆ ಹಲವು ಮಾರಣಾಂತಿಕ ರಾಸಾಯನಿಕಗಳು, ಎಂಜಲು ಮೆತ್ತಿ ಹಣ್ಣು, ಆಹಾರ ನೀಡುವುದು, ಕಾಲುಗಳಿಂದ ಮೈದಾ ಹಿಟ್ಟು ತುಳಿದು ಆಹಾರ ಸಿದ್ಧಪಡಿಸುವುದು, ಮೂತ್ರ ಬೆರೆಸಿ ಆಹಾರ, ಜ್ಯೂಸ್ ನೀಡುವುದು, ರಸ್ತೆ ಬದಿಯಲ್ಲೇ ನೊಣಗಳು ಮುತ್ತಿಕೊಂಡ ಮಾಂಸ ಮತ್ತಿತರ ಆಹಾರ ಮಾರುವುದು ಕರ್ನಾಟಕವೂ ಸೇರಿದಂತೆ ಎಲ್ಲೆಡೆ ನಡೆಯುತ್ತಿದೆ. ಇಂತಹ ಘಟನೆಗಳ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಹೀಗಾಗಿ ಹೊರಗಿನ ಆಹಾರ ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ಎಲ್ಲರೂ ಯೋಚಿಸಬೇಕಾಗಿದೆ.