ನ್ಯೂಸ್

ಕೆಲಸಕ್ಕಾಗಿ ಅರ್ಜಿ ಹಾಕಿದ ಒಂದೇ ನಿಮಿಷಕ್ಕೆ ರಿಜೆಕ್ಟ್​: ಕಂಪನಿ ಕೊಟ್ಟ ಕಾರಣ ಕೇಳಿ ದಂಗಾದ ಉದ್ಯೋಗಾಕಾಂಕ್ಷಿ! Job Application Reject

Job Application Reject : ಉದ್ಯೋಗಕ್ಕೆಂದು ಅರ್ಜಿಗಳನ್ನು ಸಲ್ಲಿಸಿದಾಗ ಅವುಗಳನ್ನು ಪರಿಶೀಲಿಸಲು ಕೆಲ ಕಂಪನಿಗಳು ಹಲವು ವಾರಗಳ ಸಮಯ ತೆಗೆದುಕೊಳ್ಳಬಹುದು. ಇನ್ನು ಕೆಲ ಕಂಪನಿಗಳು ಕೆಲವೇ ದಿನಗಳಲ್ಲಿ ಪ್ರತಿಕ್ರಿಯೆ ನೀಡಬಹುದು. ಆದರೆ, ಇಲ್ಲೊಬ್ಬ ಅಭ್ಯರ್ಥಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ ಒಂದೇ ನಿಮಿಷದಲ್ಲಿ ಅರ್ಜಿ ತಿರಸ್ಕೃತವಾಗಿರುವುದನ್ನು ತಿಳಿದು ದಂದಾಗಿದ್ದಾನೆ.

ಅರ್ಜಿ ತಿರಸ್ಕೃತಗೊಂಡ ವಿಚಾರವನ್ನು ಸಾಮಾಜಿಕ ಜಾಲತಾಣ ವೇದಿಕೆ ರೆಡ್ಡಿಟ್‌ನಲ್ಲಿ ಹಂಚಿಕೊಂಡಿರುವ ವ್ಯಕ್ತಿ, ಕೇವಲ ಒಂದು ನಿಮಿಷದಲ್ಲಿ ಬಹಳಷ್ಟು ಬದಲಾಗಬಹುದು ಎಂದು ಬರೆದುಕೊಂಡಿದ್ದಾರೆ. ನನ್ನ ಅರ್ಹತೆಗಳು, ಅನುಭವ, ಸ್ಥಳ, ಯುಎಸ್‌ನಲ್ಲಿ ಕೆಲಸ ಮಾಡುವುದನ್ನು ಸೇರಿ ಎಲ್ಲ ಮಾಹಿತಿಗಳನ್ನು ಪರಿಶೀಲಿಸಿದ್ದಾರೆ. ಆದರೂ ಅವರು ಒಂದೇ ನಿಮಿಷದಲ್ಲಿ ನನ್ನ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಇದಕ್ಕೆ ಇಮೇಲ್‌ನಲ್ಲಿ ಕಾರಣ ಸಹ ನೀಡಿರುವ ಕಂಪನಿ, ಈಗಾಗಲೇ ಹುದ್ದೆ ಭರ್ತಿಯಾಗಿದೆ ಎಂದು ಹೇಳಿದೆ. ಆದರೆ, ಕೆಲಸ ಲಭ್ಯವಿಲ್ಲದಿದ್ದರೆ ಅರ್ಜಿಯನ್ನು ಏಕೆ ಸ್ವೀಕರಿಸಿದರು? ಎಂದು ಪ್ರಶ್ನಿಸುವ ಮೂಲಕ ಆ ವ್ಯಕ್ತಿ ಅಸಮಾಧಾನ ಹೊರಹಾಕಿದ್ದಾರೆ.

ಇನ್ನು ಈ ಘಟನೆಯಿಂದ ಆಘಾತಕ್ಕೊಳಗಾಗಿರುವ ಅಭ್ಯರ್ಥಿ, ತನ್ನ ಇಮೇಲ್ ಇನ್‌ಬಾಕ್ಸ್‌ನ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬೆಳಗ್ಗೆ 11.54ಕ್ಕೆ ತನ್ನ ಅರ್ಜಿಯನ್ನು ಸ್ವೀಕರಿಸಲಾಗಿದೆ ಎಂದು ತಿಳಿಸುವ ಇಮೇಲ್ ಬಂದಿತ್ತು. ಇದಾದ ಒಂದು ನಿಮಿಷದ ನಂತರ ಅಂದರೆ, ಬೆಳಗ್ಗೆ 11.55ಕ್ಕೆ ನೀವು ಅರ್ಜಿ ಸಲ್ಲಿಸಿದ ಹುದ್ದೆ ಭರ್ತಿಯಾಗಿದೆ. ಆದ್ದರಿಂದ, ಈ ಸಮಯದಲ್ಲಿ ನಾವು ನಿಮ್ಮ ಅರ್ಜಿಯನ್ನು ಪರಿಶೀಲಿಸಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ಖಾಲಿ ಹುದ್ದೆ ಇದ್ದರೆ ನಾವು ನಿಮ್ಮ ರೆಸ್ಯೂಮ್ ಅನ್ನು ಪರಿಶೀಲಿಸುತ್ತೇವೆ. ನಿಮ್ಮ ವೃತ್ತಿ ಹುಡುಕಾಟಕ್ಕೆ ಶುಭಾಶಯಗಳು ಎಂದು ವಾಪಸ್​ ಮೇಲ್​ ಕಳುಹಿಸಿದ್ದಾರೆ ಎಂದು ಅಭ್ಯರ್ಥಿ ಬೇಸರ ಹೊರಹಾಕಿದ್ದಾರೆ.

ಅಭ್ಯರ್ಥಿ ಶೇರ್​ ಮಾಡಿಕೊಂಡಿರುವ ಈ ಪೋಸ್ಟ್‌ಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಅಂತಹ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಮೆಂಟ್ ಮಾಡುತ್ತಿದ್ದರೆ, ಇನ್ನು ಕೆಲವರು ನಿರುದ್ಯೋಗಿಗಳ ಭರವಸೆಯನ್ನು ಹುಸಿಗೊಳಿಸುತ್ತಿದ್ದಾರೆ ಎಂದು ಕಟುವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇನ್ನು ಕೆಲವರು ನಮಗೂ ಇದೇ ರೀತಿಯ ಘಟನೆಗಳು ಸಂಭವಿಸಿವೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್​)