ನ್ಯೂಸ್

VIDEO| ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನು ಇರಿದು ಕೊಂದ ಪಾಗಲ್​ ಪ್ರೇಮಿ

ಗುರುಗ್ರಾಮ: ಆಘಾತಕಾರಿ ಘಟನೆಯೊಂದರಲ್ಲಿ ಪಾಗಲ್​ ಪ್ರೇಮಿಯೋರ್ವ ಹಾಡಹಗಲೇ ತನ್ನ ಪ್ರೇಯಸಿಯನ್ನು ಆಕೆಯ ತಾಯಿಯ ಕಣ್ಮುಂದೆಯೇ ಬರ್ಬರವಾಗಿ ಇರಿದು ಕೊಲೆ ಮಾಡಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿರುವ ಪಾಲಮ್​ ವಿಹಾರ್​ ಪ್ರದೇಶದಲ್ಲಿ ನಡೆದಿದೆ.

ಬಂಧಿತನನ್ನು ರಾಜ್​ಕುಮಾರ್ ಪಾಲ್​​(23) ಎಂದು ಗುರುತಿಸಲಾಗಿದ್ದು, ಯುವತಿ(19)ಯನ್ನು ಬರ್ಬರವಾಗಿ ಇರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ನಿರಾಕರಿಸಿದ್ದಕ್ಕೆ ಹತ್ಯೆ

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಮೃತ ಯುವತಿ ಹಾಗೂ ಆರೋಪಿ ಇಬ್ಬರು ಉತ್ತರಪ್ರದೇಶ ಮೂಲದ ಬದೌನ್​ ಜಿಲ್ಲೆಯವರು. ಇಬ್ಬರು ಕೆಲಸ ಅರಸಿ ಹರಿಯಾಣದ ಗುರುಗ್ರಾಮಕ್ಕೆ ಕುಟುಂಬ ಸಮೇತರಾಗಿ ವಲಸೆ ಬಂದಿದ್ದರು. ಮೃತ ಯುವತಿಯು ಜೀವನೋಪಾಯಕ್ಕಾಗಿ ಮನೆ ಕೆಲಸ ಮಾಡುತ್ತಿದ್ದಳು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಆರೋಪಿ ರಾಜ್​ಕುಮಾರ್​ನನ್ನು ಮದುವೆಯಾಗಲು ಯುವತಿ ನಿರಾಕರಿಸಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ. ನಾಲ್ಕು ತಿಂಗಳ ಹಿಂದೆ ರಾಜ್​ಕುಮಾರ್​ ಹಾಗೂ ಯುವತಿ ಕುಟುಂಬಸ್ಥರು ಈ ಇಬ್ಬರಿಗೆ ಮದುವೆ ನಿಶ್ವಯ ಮಾಡಿ ಎಂಗೇಜ್​ಮೆಂಟ್​ ಸಹ ಮಾಡಿದ್ದರು. ಕೆಲ ದಿನಗಳ ಹಿಂದೆ ಕಾರಣಾಂತರಗಳಿಂದ ಮದುವೆ ಮುರಿದು ಬಿದ್ದಿತ್ತು.

ಮನಬಂದಂತೆ ಇರಿತ

ಇದರಿಂದ ತೀವ್ರ ಕುಪಿತಗೊಂಡಿದ್ದ ರಾಜ್​ಕುಮಾರ್​ ಸೋಮವಾರ ಮಧ್ಯಾಹ್ನ ಯುವತಿ ಹಾಗೂ ಆಕೆಯ ತಾಯಿ ಪಾಲಮ್​ ವಿಹಾರ್​ ಪ್ರದೇಶದಲ್ಲಿ ಬರುತ್ತಿದ್ದನ್ನು ಗಮನಿಸಿ ಮೊದಲಿಗೆ ಅವರ ಬಳಿ ತೆರಳಿ ಜಗಳ ತೆಗೆದಿದ್ದಾನೆ. ಬಳಿಕ ಮಾತಿಗೆ ಮಾತು ಬೆಳೆದಾಗ ಆರೋಪಿಯು ತನ್ನ ಬಳಿ ಇದ್ದ ಚಾಕುವಿನಿಂದ ಯುವತಿಗೆ ಮನಬಂದಂತೆ ಬರ್ಬರವಾಗಿ ಇರಿದಿದ್ದಾನೆ.

ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಯುವತಿ ಹಾಗೂ ಆಕೆಯ ತಾಯಿಯ ರಕ್ಷಣೆಗೆ ಧಾವಿಸಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಾಳು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.