ನ್ಯೂಸ್

1 ಕಿ.ಮೀ​ ಎತ್ತರ, ಬಿನ್​ ಲಾಡೆನ್​ ತಮ್ಮನ ಸಂಸ್ಥೆಯ ನಿರ್ಮಾಣ! ಮತ್ತೆ ಕೆಲ್ಸ ಶುರು, ಮರೆಯಾಗಲಿದೆ ಬುರ್ಜ್ ಖಲೀಫಾ ಹೆಸರು | Jeddah tower

ಜೆಡ್ಡಾ: ಅಬ್ಬಬ್ಬಾ! ಬರೋಬ್ಬರಿ 1 ಸಾವಿರ ಮೀಟರ್ ಅಥವಾ 1 ಕಿಲೋಮೀಟರ್ ಎತ್ತರವಿರುವ ಕಟ್ಟಡ. ಅಂದರೆ ಈವರೆಗೆ ಜಗತ್ತಿನ ಅತ್ಯಂತ ಎತ್ತರದ ಕಟ್ಟಡವೆಂಬ ಖ್ಯಾತಿ ಗಳಿಸಿರುವ ಬುರ್ಜ್ ಖಲೀಫಾ ( Burj Khalifa ) ಕ್ಕಿಂತಲೂ ಇದು ದೊಡ್ಡದು. ವಿಶ್ವದ ಅತಿದೊಡ್ಡ ಮಾನವ ನಿರ್ಮಿತ ಕಟ್ಟಡ ಎನಿಸಿಕೊಳ್ಳಲಿದೆ. ಅಷ್ಟಕ್ಕೂ ಯಾವುದು ಆ ಕಟ್ಟಡ? ಎಲ್ಲಿ ನಿರ್ಮಿಸಲಾಗಿದೆ? ಕಟ್ಟಡದ ವಿಶೇಷತೆ ಏನು? ಎಂಬುದನ್ನು ನಾವೀಗ ತಿಳಿಯೋಣ.

ಅಂದಹಾಗೆ ಬುರ್ಜ್ ಖಲೀಫಾ ಕಟ್ಟಡವನ್ನು 830 ಮೀಟರ್‌ಗಳಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ 163 ಮಹಡಿಗಳಿವೆ. ಆದರೆ, ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಿರ್ಮಾಣವಾಗುತ್ತಿರುವ ಜೆಡ್ಡಾ ಟವರ್ ( Jeddah tower ) ​ನ ಎತ್ತರ ಸಾವಿರ ಮೀಟರ್. ಅಂದರೆ, ಬರೋಬ್ಬರಿ 1 ಕಿಲೋಮೀಟರ್​. ಇದು ದುಬೈನಲ್ಲಿರುವ ಬುರ್ಜ್ ಖಲೀಫಾಕ್ಕಿಂತ 170 ಮೀಟರ್ ಎತ್ತರವಿರಲಿದೆ. ಕಟ್ಟಡದ ನಿರ್ಮಾಣವನ್ನು 2028 ರಲ್ಲಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ.

ಇನ್ನು ಏಳು ವರ್ಷಗಳ ನಂತರ ಜೆಡ್ಡಾ ಟವರ್ ನಿರ್ಮಾಣ ಪುನರಾರಂಭಗೊಂಡಿದೆ. ಈ ಕಟ್ಟಡವನ್ನು ಜೆಡ್ಡಾ ಎಕನಾಮಿಕ್ ಕಂಪನಿ (ಜೆಇಸಿ) ನಿರ್ಮಿಸುತ್ತಿದೆ. ಕಟ್ಟಡದ ನಿರ್ಮಾಣವು ಹಲವು ವರ್ಷಗಳ ಹಿಂದೆಯೇ ಪ್ರಾರಂಭಿಸಲಾಯಿತು. ಆದರೆ, ಸೌದಿ ಅರೇಬಿಯಾ ಸರ್ಕಾರದ ಭ್ರಷ್ಟಾಚಾರ ವಿರೋಧಿ ಚಟುವಟಿಕೆಗಳ ನಂತರ ಅದನ್ನು ನಿಲ್ಲಿಸಲಾಯಿತು. 2017ರಲ್ಲಿ ನಿರ್ಮಾಣವು ತ್ವರಿತ ಗತಿಯಲ್ಲಿ ಸಾಗುತ್ತಿರುವಾಗ, ಜೆಡ್ಡಾ ಟವರ್​ ನಿರ್ಮಾಣದ ಹಿಂದೆ ಕೆಲಸ ಮಾಡುವ ಏಳು ಪ್ರಮುಖ ಜನರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಸೌದಿ ಸರ್ಕಾರವು ಬಂಧಿಸಿತು.

ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನವಾಗಿದ್ದರೂ, ಒಂದು ವರ್ಷದವರೆಗೆ ನಿರ್ಮಾಣ ಕಾರ್ಯವು ಅಡೆತಡೆಯಿಲ್ಲದೆ ಮುಂದುವರೆಯಿತು. ನಂತರ, ಆರ್ಥಿಕ ಹಿಂಜರಿತ ಮತ್ತು ಕೋವಿಡ್ ಸಾಂಕ್ರಾಮಿಕದ ಕಾಳಜಿಯಿಂದಾಗಿ ನಿರ್ಮಾಣವನ್ನು ನಿಲ್ಲಿಸಬೇಕಾಯಿತು. 157 ಅಂತಸ್ತಿನ ಕಟ್ಟಡದ 63 ಮಹಡಿಗಳ ನಿರ್ಮಾಣ ಈಗಾಗಲೇ ಪೂರ್ಣಗೊಂಡಿದೆ. ಇದರ ನಿರ್ಮಾಣದ ಗುತ್ತಿಗೆ ಬರೋಬ್ಬರಿ 15,969 ಕೋಟಿ ರೂಪಾಯಿ.

ಸೌದಿ ಅರೇಬಿಯಾದ ಪ್ರಮುಖ ನಿರ್ಮಾಣ ಕಂಪನಿಯಾದ ಬಿನ್ ಲಾಡೆನ್ ಗ್ರೂಪ್ ಗೋಪುರದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದೆ. ಬಿನ್ ಲಾಡೆನ್ ಗುಂಪಿನ ಅಧ್ಯಕ್ಷ ಬಕರ್ ಬಿನ್ ಲಾಡೆನ್ ಅವರನ್ನು 2017ರ ಭ್ರಷ್ಟಾಚಾರ ವಿರೋಧಿ ಅಭಿಯಾನದಲ್ಲಿ ಬಂಧಿಸಲಾಯಿತು. ಮೂರು ವರ್ಷಗಳ ನಂತರ ಅವರು ಜೈಲಿನಿಂದ ಬಿಡುಗಡೆಯಾದರು. ಬಕರ್ ಭಯೋತ್ಪಾದಕ ಸಂಘಟನೆ ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್​ನ ಮಲಸಹೋದರ. ಹಲವು ವರ್ಷಗಳ ಬಳಿಕ ಇದೀಗ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಶೀಘ್ರದಲ್ಲೇ ಬುರ್ಜ್ ಖಲೀಫಾ ದಾಖಲೆಯನ್ನು ಮುರಿಯಲಿದೆ. (ಏಜೆನ್ಸೀಸ್)