| ಗಂಗಾಧರ್ ಬೈರಾಪಟ್ಟಣ ರಾಮನಗರ
ರಾಜ್ಯ ರಾಜಕಾರಣದಲ್ಲಿ ಹೈವೋಲ್ಟೇಜ್ ಕ್ಷೇತ್ರ ಎನಿಸಿರುವ ರಾಮನಗರ ಜಿಲ್ಲೆಯಲ್ಲೀಗ ತೋರಿಕೆಯ ಮೈತ್ರಿ ಧರ್ಮ ಪಾಲನೆ ಕಳಚಿ ಬಿದ್ದಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂತಸ ಮನೆಮಾಡಿದೆ. ಉಭಯ ಪಕ್ಷಗಳ ಮುಖಂಡರಲ್ಲಿದ್ದ ಅಸಮಾಧಾನದ ಲಾಭ ಪಡೆಯಲು ಯೋಜಿಸಿದ್ದ ಬಿಜೆಪಿ ಲೆಕ್ಕಾಚಾರವೀಗ ಉಲ್ಟಾ ಆಗಿದೆ.
2018ರಲ್ಲಿ ಬಿಜೆಪಿಗೆ ರಾಜ್ಯದ ಚುಕ್ಕಾಣಿ ತಪ್ಪಿಸುವ ಸಲುವಾಗಿ ಜೆಡಿಎಸ್ ಅಪ್ಪಿಕೊಂಡು ಅಧಿಕಾರ ನೀಡಿದ್ದ ಕಾಂಗ್ರೆಸ್ ಇದೀಗ ತೆನೆ ಹೊತ್ತ ಮಹಿಳೆಯನ್ನು ದೂರ ಮಾಡಿಕೊಂಡಿದ್ದು, ರಾಜ್ಯ ರಾಜಕಾರಣದ ಚಿತ್ರಣ ಬದಲಿಸಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಸಂಬಂಧ ಕಳೆದುಕೊಂಡಿರುವ ಬಗ್ಗೆ ಎರಡೂ ಪಕ್ಷಗಳ ನಾಯಕರ ಮಟ್ಟದಲ್ಲಿ ವಾಗ್ವಾದವೂ ನಡೆಯುತ್ತಿದೆ. ಆದರೆ, ಈ ಬೆಳವಣಿಗೆ ಜಿಲ್ಲೆಯ ಸ್ಥಳೀಯ ಕಾರ್ಯಕರ್ತರ ಮಟ್ಟದಲ್ಲಿ ಮಾತ್ರ ಸಂತಸ ತಂದಿದ್ದು, ಇನ್ನಾದರೂ ತಮ್ಮ ಪಾಡಿಗೆ ತಾವು ರಾಜಕಾರಣ ಮಾಡಬಹುದು ಎನ್ನುವಂತೆ ಮಾಡಿದೆ.
ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ರಾಜ್ಯಮಟ್ಟದಲ್ಲಿ ಮೈತ್ರಿ ಆದಾಗ ಎರಡೂ ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಹೌಹಾರಿದ್ದರು. ಜೆಡಿಎಸ್ಗೆ ಅಧಿಕಾರ ಸಿಕ್ಕಿದ್ದು ಪಕ್ಷದ ಕಾರ್ಯಕರ್ತರಿಗೆ ಖುಷಿ ವಿಷಯವಾದರೂ ಕಾಂಗ್ರೆಸ್ ಜತೆ ಹೊಂದಾಣಿಕೆ ಸಂಕಟವಾಗಿತ್ತು. ಪಕ್ಷದ ನಾಯಕರು ಬಂದಾಗ ಒಂದಿಷ್ಟು ಮೇಲ್ಮಟ್ಟದ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತೋರಿಕೆಯ ಮೈತ್ರಿ ಧರ್ಮ ಪಾಲಿಸುತ್ತಿದ್ದರಷ್ಟೆ.
ಇದನ್ನೂ ಓದಿರಿ ಈ ವರ್ಷದ 2ನೇ ಚಂದ್ರಗ್ರಹಣ ಹೀಗಿತ್ತು ನೋಡಿ..!
ರಾಮನಗರ ವಿಧಾನಸಭೆ ಉಪಚುನಾವಣೆ ವೇಳೆ ಅನಿವಾರ್ಯವಾಗಿ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ಗೆ ಬೆಂಬಲ ನೀಡಬೇಕಾಗಿ ಬಂತು. ಒಂದು ಹಂತದಲ್ಲಿ ಬಿಜೆಪಿ ಅಭ್ಯರ್ಥಿ ಕಣದಲ್ಲಿ ಇದ್ದಿದ್ದರೆ ಜೆಡಿಎಸ್ನ ಅನಿತಾ ಕುಮಾರಸ್ವಾಮಿ ಅವರಿಗೆ ಹೆಚ್ಚಿನ ಮತ ಸಿಗುತ್ತಿರಲಿಲ್ಲ. ಇನ್ನು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮನಃಪೂರ್ವಕವಾಗಿ ಕೆಲಸ ಮಾಡದ ಪರಿಣಾಮ ಡಿ.ಕೆ. ಸುರೇಶ್ಗೆ ನಿರೀಕ್ಷಿತ ಮತಗಳ ಅಂತರದ ಗೆಲುವು ಲಭಿಸಲಿಲ್ಲ.
ಒಂದು ವೇಳೆ ಕರೊನಾ ಲಾಕ್ಡೌನ್ ಇಲ್ಲದೆ ಗ್ರಾಪಂ ಚುನಾವಣೆ ನಡೆದಿದ್ದರೆ ಇದು ಎರಡೂ ಪಕ್ಷಗಳ ಕಾರ್ಯಕರ್ತರನ್ನು ಕೆರಳಿಸಿ ದೂರಾಗುವ ಸಾಧ್ಯತೆ ಹೆಚ್ಚಿತ್ತು. ಆದರೀಗ ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನವೇ ಪಕ್ಷಗಳ ಸಂಬಂಧದಲ್ಲಿ ಬಿರುಕು ಮೂಡಿರುವುದು ಉಭಯ ಪಕ್ಷಗಳ ಕಾರ್ಯಕರ್ತರಿಗೆ ಸಂತಸ ತಂದಿದೆ.
ಬಿಜೆಪಿ ಲೆಕ್ಕಾಚಾರ ಉಲ್ಟಾ!: ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಮೈತ್ರಿ ಸ್ಥಳೀಯ ಮಟ್ಟದ ಕಾರ್ಯಕರ್ತರಿಗೆ ಇಷ್ಟವಿಲ್ಲದರ ಲಾಭ ಪಡೆದುಕೊಳ್ಳುವ ಪ್ರಯತ್ನದಲ್ಲಿ ಬಿಜೆಪಿ ಇತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲೇ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಫಲಿತಾಂಶದ ವೇಳೆ ಪಕ್ಷಕ್ಕೆ ಹೆಚ್ಚು ಮತ ಬರುವಂತೆ ಮಾಡಬೇಕು ಎಂಬ ಕನಸನ್ನೂ ಕಂಡಿತ್ತು. ಆದರೆ, ಅಭ್ಯರ್ಥಿಯೇ ಕಣದಿಂದ ಹಿಂದೆ ಸರಿದದ್ದು ನುಂಗಲಾರದ ತುತ್ತಾಗಿತ್ತು. ಇದಾದ ನಂತರವೂ ಎರಡೂ ಪಕ್ಷಗಳಲ್ಲಿ ಇದ್ದ ಅತೃಪ್ತರನ್ನು ಸೆಳೆಯುವ ಪ್ರಯತ್ನ ನಿರಂತರವಾಗಿ ನಡೆದೇ ಇತ್ತು. ಆದರೀಗ ಉಭಯ ಪಕ್ಷಗಳ ಮೈತ್ರಿ ಮುರಿದಿರುವುದು ಬಿಜೆಪಿ ಸಂಘಟನೆಗೆ ತೊಡಕಾಗಿದೆ.