ಸ್ಕೂಲ್​ನಲ್ಲಿ ಮಾಸ್ಕ್​ ಮಾರಾಟ, ಕರೊನಾ ಹೆಸರಲ್ಲಿ ಸುಲಿಗೆ? ಫೋಟೋ ವೈರಲ್​...

mask-viral photo 1
Published on

ಬೆಂಗಳೂರು: ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ಮುನ್ನೆಚ್ಚರಿಕೆಯಾಗಿ ಮಾಸ್ಕ್​ ಧರಿಸಬೇಕು ಎಂಬುದನ್ನೇ ಖಾಸಗಿ ಶಾಲೆಗಳು ಬಂಡವಾಳ ಮಾಡಿಕೊಂಡಿವೆ. ತಮ್ಮದೇ ಬ್ರಾಂಡ್​ನಡಿ ಮುಖಗವಸು ತಯಾರಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಮೂಲಕ ವಿದ್ಯಾರ್ಥಿಗಳಿಂದ ಹಣ ಸುಲಿಗೆ ಮಾಡುವ ದಂಧೆಗೆ ಇಳಿದಿವೆ..!

ಹೌದು, ಇಂತಹದ್ದೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕರೊನಾ ನೆಪದಲ್ಲಿ ಖಾಸಗಿ ಶಾಲೆಯೊಂದು ಮಾಸ್ಕ್​ ಬಿಸಿನೆಸ್​ ಶುರು ಮಾಡಿಕೊಂಡಿದೆ. ಆ ಮಾಸ್ಕ್​ಗೆ 400 ರೂ. ದರ ನಿಗದಿ ಮಾಡಿ ಪಾಲಕರಿಂದ ಹಣ ಸುಲಿಗೆ ಮಾಡುತ್ತಿದೆ ಎಂದು 'ಡೆಲ್ಲಿ ಪಬ್ಲಿಕ್​ ಸ್ಕೂಲ್'​(ಡಿಪಿಎಸ್) ಲೋಗೋವುಳ್ಳ ಮಾಸ್ಕ್​ವೊಂದರ ಚಿತ್ರ ಎಲ್ಲೆಡೆ ಹರಿದಾಡುತ್ತಿದೆ.

ಶಾಲೆಯ ಲೋಗೋವುಳ್ಳ ಮಾಸ್ಕ್​ನ ಚಿತ್ರ ನೋಡಿದ ಸಾರ್ವಜನಿಕರು ಹೌಹಾರಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬೆಂಗಳೂರಿನ 'ಡೆಲ್ಲಿ ಪಬ್ಲಿಕ್​ ಸ್ಕೂಲ್​' ಆಡಳಿತ ಮಂಡಳಿ, ವಿದ್ಯಾರ್ಥಿಗಳಿಗೆ ಯಾವುದೇ ಮಾಸ್ಕ್​ಗಳನ್ನು ನೀಡಿಲ್ಲ ಎಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಶಾಲೆ ಹೆಸರಲ್ಲಿ ಹರಿದಾಡುತ್ತಿರುವ ಮಾಸ್ಕ್ ಪೋಟೋ ಕುರಿತು ಡೆಲ್ಲಿ ಪಬ್ಲಿಕ್​ ಶಾಲೆ ನಿಡಿರುವ ಸ್ಪಷ್ಟನೆ.​

''ಆತ್ಮೀಯ ಪೋಷಕರೆ, ಕೆಲವು ಏಜೆನ್ಸಿಗಳು ಶಾಲೆಯ ಹೆಸರು ಮತ್ತು ಲೋಗೋ ಬಳಸಿಕೊಂಡು ಮಕ್ಕಳಿಗೆ ಮಾಸ್ಕ್​ ಮತ್ತು ಸ್ಯಾನಿಟೈಸರ್​ ಮಾರಾಟ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇಂತಹ ವ್ಯಾಪಾರಸ್ಥರೊಂದಿಗೆ ನಮ್ಮ ಶಾಲೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲ. ಕರೊನಾದಂತಹ ಸಂದಿಗ್ಧ ಪರಿಸ್ಥಿತಿಯನ್ನೇ ಕೆಲವರು ಬಂಡವಾಳ ಮಾಡಿಕೊಂಡು ಶಾಲೆ ಹೆಸರಲ್ಲಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ದಯವಿಟ್ಟು ಈ ಬಗ್ಗೆ ಎಚ್ಚರ ವಹಿಸಿ'' ಎಂದು ಬೆಂಗಳೂರು ಉತ್ತರ 'ಡೆಲ್ಲಿ ಪಬ್ಲಿಕ್​ ಶಾಲೆ'ಯು ತನ್ನ ಅಧಿಕೃತ ಫೇಸ್​ಬುಕ್​ ಖಾತೆಯಲ್ಲಿ ಸ್ಪಷ್ಟಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net