ಟೊಕಿಯೋ: ತನ್ನ ಬಾಯ್ಫ್ರೆಂಡ್ ನೋಡಲು ಮೂರು ವರ್ಷದ ಮಗುವನ್ನು ಮನೆಯಲ್ಲೇ ಬಿಟ್ಟು ಹೋದ ತಾಯಿ ಮರಳಿ ಬರುವಷ್ಟರಲ್ಲಿ ಮಗು ಹಸಿವಿನಿಂದ ಅಸುನೀಗಿರುವ ಅಮಾನವೀಯ ಘಟನೆ ದೂರದ ಜಪಾನ್ನಲ್ಲಿ ನಡೆದಿದೆ.
ಜಪಾನ್ ರಾಜಧಾನಿ ಟೊಕಿಯೋ ನಿವಾಸಿ ಸಕಿ ಕಕಿಹಸಿ (24) 600 ಮೈಲಿ ದೂರದಲ್ಲಿರುವ ಬಾಯ್ಫ್ರೆಂಡ್ ನೋಡುವ ಆಸೆಗೆ ತನ್ನ ಮಗಳಾದ ನೊಹಾಳನ್ನೇ ಬಲಿ ಪಡೆದುಕೊಂಡಿದ್ದಾಳೆ. ಮಗು ಗಂಭೀರವಾದ ನಿರ್ಜಲೀಕರಣ ಮತ್ತು ಹಸಿವಿನಿಂದ ಮೃತಪಟ್ಟಿರುವುದಾಗಿ ಜಪಾನ್ ಪೊಲೀಸರು ತಿಳಿಸಿದ್ದಾರೆ.
ಮೊದಲೇ ವಿಚ್ಛೇದನ ಪಡೆದಿದ್ದ ತಾಯಿ ಮಗುವನ್ನು ಒಟಾ ನಗರದ ಅಪಾರ್ಟ್ಮೆಂಟ್ನಲ್ಲಿ ಬಿಟ್ಟು ಹೊರಡಲು ಇದೇ ಒಳ್ಳೆಯ ಸಮಯವೆಂದು ತಿಳಿದು, ಜಪಾನ್ನ ಕ್ಯುಶು ದ್ವೀಪದ ಕಾಗೋಶಿಮಾ ಪ್ರಾಂತ್ಯದಲ್ಲಿರುವ ತನ್ನ ಲವರ್ ಭೇಟಿ ಮಾಡಲು ತೆರಳಿದ್ದಾಳೆ. ಅಂದಹಾಗೆ ಜಪಾನ್ನ ದಕ್ಷಿಣದ ಅತ್ಯಂತ ತುತ್ತ ತುದಿಯಾಗಿರುವ ಕ್ಯುಶು ದ್ವೀಪಕ್ಕೆ ತೆರಳಲು ಅಂದಾಜು ಎರಡು ಗಂಟೆ ವಿಮಾನ ಪ್ರಯಾಣ ಬೇಕು.
ಮಗುವನ್ನು ಒಂಟಿಯಾಗಿ ಬಿಟ್ಟು ಹೋಗಲು ತಾಯಿಗೆ ಹೇಗಾದರೂ ಮನಸ್ಸು ಬಂತೋ? ಅಥವಾ ಹೋಗಿ ಬಾಯ್ಫ್ರೆಂಡ್ ಭೇಟಿ ಮಾಡಿ ಆದಷ್ಟು ಬೇಗ ಬಂದಿದ್ದರೆ ಮಗುವಿನ ಜೀವವಾದ್ರೂ ಉಳಿಯುತ್ತಿತ್ತು. ಉದ್ದೇಶ ಪೂರ್ವಕವಾಗಿ ಮಾಡಿದಳೋ ಅಥವಾ ತಿಳಿಯದೇ ಮಾಡಿದಳೋ ಬರೋಬ್ಬರಿ 8 ದಿನಗಳ ಬಳಿಕ ಮನೆಗೆ ಮರಳಿದ್ದಾಳೆ. ಆದರೆ, ಅಷ್ಟರಲ್ಲಾಗಲೇ ಮಗು ಹಸಿವಿನಿಂದ ಕೊನೆಯುಸಿರೆಳೆದಿದೆ.
ಕಕೆಹಸಿಯನ್ನು ಮಂಗಳವಾರ ಬಂಧಿಸಲಾಯಿತು. ಜೂನ್ 8ರಂದು ಮನೆಗೆ ಮರಳಿದ ಆಕೆ ಮಗು ಪ್ರಜ್ಞೆ ಇಲ್ಲದೇ ಅಪಾರ್ಟ್ಮೆಂಟ್ನಲ್ಲಿ ಬಿದ್ದಿರುವುದನ್ನು ನೋಡಿದ್ದಾಳೆ. ತಕ್ಷಣ ತುರ್ತುಸೇವೆಗೆ ಕರೆ ಮಾಡಿ, ನೋಹಾ ಉಸಿರಾಡುತ್ತಿಲ್ಲ ಎಂದು ತಿಳಿಸಿದ್ದಾಳೆ. ಅನೇಕ ದಿನಗಳಿಂದ ಮಗುವಿನ ನಾಪ್ಕಿನ್ ಬದಲಾವಣೆ ಮಾಡದಿದ್ದರಿ ಮಗುವಿನ ಕೆಳಮೈಯಲ್ಲಿ ಗುಳ್ಳೆಗಳ ರೀತಿಯ ಗಾಯಗಳಾಗಿರುವುದು ಕಂಡುಬಂದಿದೆ. ಅಲ್ಲದೆ, ಅಪಾರ್ಟ್ಮೆಂಟ್ ಕೂಡ ಕಸದ ರಾಶಿಯಿಂದ ತುಂಬಿತ್ತು.
ಮಗು ಸಾವಿಗೀಡಾಗಿರುವ ಬಗ್ಗೆ ದೃಢವಾದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದಾಗ ಮಗುವಿನ ಹೊಟ್ಟೆ ಖಾಲಿ ಇದ್ದುದ್ದು ತಿಳಿದುಬಂದಿದೆ. ಅಲ್ಲದೆ, ಮಗು ಥೈಮಿಕ್ ಅಟ್ರೋಫೈ ಎಂಬ ಮಕ್ಕಳ ದೌರ್ಜನ್ಯದಂತಹ ವಿಲಕ್ಷಣತೆಯಿಂದ ಬಳಲಿರುವುದು ಗೊತ್ತಾಗಿದೆ.
ಈ ಬಗ್ಗೆ ಕಕೆಹಸಿಯನ್ನು ಪ್ರಶ್ನಿಸಿದಾಗ ಮಗು ಹಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿತ್ತು. ಅವಳಿಗೆ ಚಿಕಿತ್ಸೆ ಕೊಡಿಸಲು ನನ್ನ ಬಳಿ ಹಣವಿರಲಿಲ್ಲ ಎಂದಿದ್ದಾಳೆ. ಆದರೆ, ಪೊಲೀಸರು ಅನುಮಾನಗೊಂಡು ಮತ್ತಷ್ಟು ಪ್ರಕರಣವನ್ನು ಕೆದಕಿದಾಗ ಕೊನೆಗೆ ತಪ್ಪೊಪ್ಪಿಕೊಂಡಿದ್ದಾಳೆ. (ಏಜೆನ್ಸೀಸ್)