ನ್ಯೂಸ್

ಈವರೆಗೆ 13 ಲಕ್ಷ ಹೋಟೆಲ್​ ಬುಕಿಂಗ್​ ರದ್ದು... ಪಹಲ್ಗಾಮ್ ಉಗ್ರ​ ದಾಳಿಯಿಂದ ಕಾಶ್ಮೀರ ಟೂರಿಸಂಗೆ ಭಾರೀ ನಷ್ಟ! Jammu Kashmir Tourism

Jammu Kashmir Tourism : ಕಾಶ್ಮೀರದ ಪಹಲ್ಗಾಮ್ ಮೇಲೆ ಏಪ್ರಿಲ್​ 22ರಂದು ನಡೆದ ಭಯೋತ್ಪಾದಕ ದಾಳಿಯು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಭೀಕರ ಘಟನೆಯು ಅನೇಕ ಕುಟುಂಬಗಳಿಗೆ ಅಪಾರ ದುಃಖವನ್ನುಂಟು ಮಾಡಿದೆ. ತಮ್ಮ ಕಣ್ಣುಗಳ ಮುಂದೆಯೇ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳು ಇನ್ನೂ ಆ ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕನಸಿನಲ್ಲೂ ಆ ಕ್ರೂರ ಉಗ್ರರ ಅಟ್ಟಹಾಸ ಕಾಡುತ್ತಿದೆ. ಆ ಪಾಪಿಗಳು ಬದುಕಿನ ಭರವಸೆಯನ್ನೇ ಕಿತ್ತುಕೊಂಡಿದ್ದಾರೆ. ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಹೋಗಿದ್ದ ಪ್ರವಾಸಿಗರನ್ನೇ ಗುರಿಯಾಗಿಸಿಕೊಂಡು, ಗುಂಡಿನ ಮಳೆ ಸುರಿಸುವ ಮೂಲಕ ಉಗ್ರರು ನೆತ್ತರು ಹರಿಸಿದ್ದಾರೆ. ಇದೀಗ ಆ ರಕ್ತದ ಕಲೆ ಕಾಶ್ಮೀರವನ್ನು ಅಂಟಿಕೊಂಡಿದ್ದು, ಶಾಪವಾಗಿ ಕಾಡುತ್ತಿದೆ. ಹೌದು, ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಈ ಭೀಕರ ದಾಳಿ ಪರಿಣಾಮ ಬೀರಿದೆ.

ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯು 26 ಜನರನ್ನು ಬಲಿ ತೆಗೆದುಕೊಂಡಿದ್ದಲ್ಲದೆ, ಜಮ್ಮು ಮತ್ತು ಕಾಶ್ಮೀರದ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುವ ಪ್ರವಾಸೋದ್ಯಮದ ಮೇಲೆ ದೀರ್ಘಕಾಲೀನ ಪರಿಣಾಮ ಬೀರಿದೆ. ಕಾಶ್ಮೀರದಲ್ಲಿ ಇದುವರೆಗೂ ನಡೆದ ಒಂದೇ ದಾಳಿಯಲ್ಲಿ ಇಷ್ಟೊಂದು ಪ್ರವಾಸಿಗರು ಒಟ್ಟಿಗೆ ಸಾವಿಗೀಡಾಗಿರಲಿಲ್ಲ. ಇದೀಗ ಆ ದುರ್ಘಟನೆ ಘಟಿಸಿದೆ. ಈ ಭಯೋತ್ಪಾದಕ ದಾಳಿಯ ಬಳಿಕ ಪ್ರವಾಸಿಗರು ಭಯದಿಂದ ನಡುಗುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಹೆಸರು ಕೇಳಿದ ತಕ್ಷಣ ಎದೆಯಲ್ಲಿ ನಡುಕ ಶುರುವಾಗುತ್ತಿದೆ. ಭಯೋತ್ಪಾದಕ ದಾಳಿಯಿಂದಾಗಿ ಕಾಶ್ಮೀರದ ಎಲ್ಲ ಪ್ರವಾಸಿ ತಾಣಗಳು ಖಾಲಿಯಾಗುತ್ತಿವೆ. ವಿವಿಧ ಸ್ಥಳಗಳಿಗೆ ಭೇಟಿ ನೀಡಲು ಬಂದಿದ್ದ ಸಾವಿರಾರು ಪ್ರವಾಸಿಗರು ಭಯದಿಂದ ಹಿಂತಿರುಗುತ್ತಿದ್ದಾರೆ. ಭಯೋತ್ಪಾದಕ ದಾಳಿಯ ಕೆಲವೇ ಗಂಟೆಗಳಲ್ಲಿ ಸಾವಿರಾರು ಜನರು ಶ್ರೀನಗರವನ್ನು ತೊರೆದರು.

ಮತ್ತೊಂದೆಡೆ, ಶೀಘ್ರದಲ್ಲೇ ಕಾಶ್ಮೀರಕ್ಕೆ ಭೇಟಿ ನೀಡಲು ವ್ಯವಸ್ಥೆ ಮಾಡಿಕೊಂಡಿದ್ದವರು ಸಹ ತಮ್ಮ ಪ್ರಯಾಣ ಟಿಕೆಟ್‌ಗಳು ಮತ್ತು ಹೋಟೆಲ್ ಬುಕಿಂಗ್‌ಗಳನ್ನು ರದ್ದುಗೊಳಿಸುತ್ತಿದ್ದಾರೆ. ಭಯೋತ್ಪಾದಕ ದಾಳಿ ನಡೆದ ಒಂದು ದಿನದೊಳಗೆ ಜಮ್ಮು ಮತ್ತು ಕಾಶ್ಮೀರಕ್ಕೆ 90 ರಷ್ಟು ಬುಕಿಂಗ್‌ಗಳು ರದ್ದಾಗಿರುವುದು ಅಲ್ಲಿನ ಸದ್ಯದ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಇಲ್ಲಿಯವರೆಗೆ ಒಟ್ಟು 13 ಲಕ್ಷ ಬುಕಿಂಗ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಮಾತನಾಡಿರುವ ಹೋಟೆಲ್​ ಮಾಲೀಕ ಜಾವೇದ್ ಅಹ್ಮದ್, ಏಪ್ರಿಲ್ 21 ರವರೆಗೆ ಪಹಲ್ಗಾಮ್‌ನಲ್ಲಿರುವ ತನ್ನ 20 ಕೋಣೆಗಳ ಹೋಟೆಲ್‌ ಸಂಪೂರ್ಣ ಬುಕಿಂಗ್‌ ಆಗಿತ್ತು. ಆದರೆ, ಏಪ್ರಿಲ್ 22 ರಂದು ಬೈಸರನ್ ಕಣಿವೆಯಲ್ಲಿ ಬಂದೂಕುಧಾರಿಗಳು ದಾಳಿ ಮಾಡಿದ ಬಳಿಕ ಪರಿಸ್ಥಿತಿ ಇದ್ದಕ್ಕಿದ್ದಂತೆ ಬದಲಾಯಿತು. ಹೋಟೆಲ್ ಖಾಲಿಯಾಯಿತು. ಕೊಠಡಿಗಳನ್ನು ಬುಕ್ ಮಾಡಿದ್ದವರು ತಮ್ಮ ಬುಕಿಂಗ್‌ಗಳನ್ನು ರದ್ದುಗೊಳಿಸಿದರು. ಅವರಿಗೆ ಹಣವನ್ನು ಮರುಪಾವತಿಸಲಾಗಿದೆ. ಈ ದಾಳಿಯಿಂದ ಭಾರಿ ನಷ್ಟ ಅನುಭವಿಸುವಂತಾಗಿದೆ ಎಂದು ಬೇಸರ ಹೊರಹಾಕಿದರು.

ಜಾವೇದ್ ಅವರು ಪಹಲ್ಗಾಮ್ ಬೆಟ್ಟದ ರೆಸಾರ್ಟ್‌ನಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಅವರ ಹೋಟೆಲ್ ಬೈಸರನ್ ಕಣಿವೆಯಿಂದ 5 ಕಿ.ಮೀ ದೂರದಲ್ಲಿದೆ. ಈ ಹೋಟೆಲ್​ ಜಾವೇದ್​ ಅವರ ಜೀವನೋಪಾಯವಾಗಿದೆ. ಮೇ ವರೆಗೆ ಮುಂಗಡ ಬುಕಿಂಗ್‌ಗಳನ್ನು ಹೊಂದಿದ್ದರು. ಸಾಮಾನ್ಯವಾಗಿ ನಾವು ವೆಚ್ಚದ ಶೇ. 25 ರಷ್ಟು ಹಣವನ್ನು ಮುಂಚಿತವಾಗಿ ತೆಗೆದುಕೊಳ್ಳುತ್ತೇವೆ. ಈಗ ದಾಳಿಯ ನಂತರ, ಪರಿಸ್ಥಿತಿ ತಲೆಕೆಳಗಾಗಿದೆ. ಮೇ ತಿಂಗಳೊಳಗೆ ನಾವು ಸುಮಾರು 4 ಲಕ್ಷ ರೂ.ಗಳನ್ನು ಮರುಪಾವತಿಸಬೇಕಿದೆ ಎಂದು ಜಾವೇದ್​ ಹೇಳಿದ್ದಾರೆ.

ಕಳೆದ ವಾರ ನಡೆದ ಭಯೋತ್ಪಾದಕ ದಾಳಿಯು ಜನರನ್ನು ಕೊಲ್ಲುವುದಲ್ಲದೆ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ ಎಂದು ಹೋಟೆಲ್ ಮಾಲೀಕರು ದೂರುತ್ತಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯ ಟಿಕೆಟ್‌ಗಳನ್ನು ರದ್ದುಗೊಳಿಸಿದ್ದಾರೆ. ಇದು ಮುಂಗಡ ಬುಕಿಂಗ್‌ಗಳ ಮೇಲೆ ಪರಿಣಾಮ ಬೀರಿದೆ. ಆಗಸ್ಟ್‌ನಲ್ಲಿ ಕಣಿವೆಯಾದ್ಯಂತ ನಿಗದಿಯಾಗಿದ್ದ ಕನಿಷ್ಠ 13 ಲಕ್ಷ ಬುಕಿಂಗ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಸಂಘದ ಅಧ್ಯಕ್ಷ ಬಾಬರ್ ಚೌಧರಿ ಹೇಳಿದ್ದಾರೆ.

ಈ ಸಂಘದ ಆಶ್ರಯದಲ್ಲಿ ಸುಮಾರು 240 ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿವೆ. ಸಾಮಾನ್ಯವಾಗಿ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಸುಮಾರು 25,000 ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡುತ್ತಾರೆ. ಈ ವರ್ಷ, ಅವರಲ್ಲಿ ಶೇ. 90 ರಷ್ಟು ಜನರು ಭಯದಿಂದಾಗಿ ಕಾಶ್ಮೀರಕ್ಕೆ ಭೇಟಿ ನೀಡಲು ಸಾಧ್ಯವಾಗಿಲ್ಲ ಎಂದು ಚೌಧರಿ ಅವರು ಹೇಳಿದರು. ಆಗಸ್ಟ್​ವರೆಗೆ, ವಿದೇಶಗಳಿಂದ ಬಂದವರು ಸೇರಿದಂತೆ ಸುಮಾರು 1.3 ಮಿಲಿಯನ್ ಪ್ರವಾಸಿಗರು ಕಣಿವೆಗೆ ಭೇಟಿ ನೀಡಲು ಸ್ಥಳೀಯ ಹೋಟೆಲ್‌ಗಳು ಮತ್ತು ಅತಿಥಿಗೃಹಗಳಲ್ಲಿ ತಂಗಲು ಮುಂಗಡ ಬುಕಿಂಗ್ ಮಾಡಿದ್ದರು. ಏಪ್ರಿಲ್ 22ರ ಭಯೋತ್ಪಾದಕ ದಾಳಿಯ ನಂತರ, ಪ್ರವಾಸಿಗರು ತಮ್ಮ ಬುಕಿಂಗ್‌ಗಳನ್ನು ರದ್ದುಗೊಳಿಸಲು ಪ್ರಾರಂಭಿಸಿದರು.

ಕಾಶ್ಮೀರದಲ್ಲಿ ವಸಂತಕಾಲ ಇದೀಗ ಆರಂಭವಾಗಿದೆ. ಶ್ರೀನಗರದ ಟುಲಿಪ್ ಉದ್ಯಾನವು ಉದ್ಘಾಟನೆಯಾದಾಗಿನಿಂದ ದಾಳಿಯವರೆಗೆ 26 ದಿನಗಳಲ್ಲಿ 8.5 ಲಕ್ಷ ಪ್ರವಾಸಿಗರನ್ನು ಆಕರ್ಷಿಸಿತ್ತು. ಈ ಬೇಸಿಗೆಯಲ್ಲಿ ಪ್ರವಾಸಿಗರಿಗೆ ಆರಾಮದಾಯಕವಾದ ವಸತಿ ಸೌಕರ್ಯವನ್ನು ಒದಗಿಸಲು ಸಜ್ಜಾಗುತ್ತಿದ್ದೆವು. ಈ ಮಧ್ಯೆ ಈ ದುಷ್ಕೃತ್ಯ ನಡೆದಿದೆ. ಭಯೋತ್ಪಾದಕರು ಜೀವಗಳನ್ನು ಬಲಿ ತೆಗೆದುಕೊಂಡಿರುವುದು ಮಾತ್ರವಲ್ಲದೆ, ನಮ್ಮ ಜೀವನೋಪಾಯವನ್ನೂ ಸಹ ದುಸ್ಥಿತಿಗೆ ದೂಡಿದ್ದಾರೆ ಎಂದು ಹೋಟೆಲ್​ ಮಾಲೀಕರು ಬೇಸರ ಹೊರಹಾಕಿದ್ದಾರೆ.

ಕಾಶ್ಮೀರಕ್ಕೆ ಪ್ರಯಾಣ ಬುಕಿಂಗ್‌ಗಳಲ್ಲಿ ಶೇ.90 ರಷ್ಟು ಭದ್ರತಾ ಕಾರಣಗಳಿಂದ ರದ್ದಾಗಿವೆ ಎಂದು ತಿಳಿಸಿವೆ. 2025ರ ಮೇ ಮತ್ತು ಡಿಸೆಂಬರ್ ನಡುವೆ ಕಾಶ್ಮೀರಕ್ಕೆ ಪ್ರಯಾಣ ಅಥವಾ ತೀರ್ಥಯಾತ್ರೆಗಳನ್ನು ಬುಕ್ ಮಾಡಿದ್ದ ಶೇ.62 ರಷ್ಟು ಕುಟುಂಬಗಳು ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಈಗ ತಮ್ಮ ಯೋಜನೆಗಳನ್ನು ರದ್ದುಗೊಳಿಸುತ್ತಿದ್ದಾರೆಂದು ತಿಳಿದುಬಂದಿದೆ. (ಏಜೆನ್ಸೀಸ್​)