Bengaluru: ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುವ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಲಾಯರ್ ಜಗದೀಶ್ (Lawyer Jagadish), ಇದೀಗ ಮಾರಣಾಂತಿಕ ಹಲ್ಲೆಗೆ ಸಿಲುಕಿ, ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಟ್ರಂಪ್ ಆದೇಶಕ್ಕೆ ಕೋರ್ಟ್ ತಡೆ; ಜನ್ಮಸಿದ್ಧ ಪೌರತ್ವ ರದ್ದತಿ ಪ್ರಶ್ನಿಸಿ 22 ರಾಜ್ಯಗಳಿಂದ ಅರ್ಜಿ, ಅಕ್ರಮ ವಲಸಿಗರ ಬಂಧನ
ಮೊನ್ನೆಯಷ್ಟೇ (ಜ.23) ಯುವಕರೊಂದಿಗೆ ಜಟಾಪಟಿ ಮಾಡಿಕೊಂಡಿದ್ದ ಜಗದೀಶ್, ನಿನ್ನೆ (ಜ.24) ಕೊಡಿಗೆಹಳ್ಳಿಯಲ್ಲಿರುವ ತಮ್ಮ ನಿವಾಸಕ್ಕೆ ತೆರಳುವ ಮಾರ್ಗವನ್ನು ಅಣ್ಣಮ್ಮ ಕೂರಿಸುವ ಸಲುವಾಗಿ ಯುವಕರು ಬಂದ್ ಮಾಡಿದ್ದನ್ನು ಪ್ರಶ್ನಿಸಿ, ಕಿರಿಕ್ ಮಾಡಿದ್ದಾರೆ. ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಿದ್ದಕ್ಕಾಗಿ ಸ್ಥಳೀಯ ಯುವಕರ ಜತೆಗೆ ವಾಗ್ವಾದಕ್ಕಿಳಿದ ಜಗದೀಶ್, ಯುವಕರ ಗುಂಪಿನೊಂದಿಗೆ ಕೆಲ ಸಮಯ ಮಾತಿನ ಚಕಮಕಿಯಲ್ಲಿ ತೊಡಗಿದ್ದರು. ಈ ವೇಳೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸುತ್ತುವರೆದರು.
ಜಗದೀಶ್ ನಡೆಯಿಂದ ಕುಪಿತಗೊಂಡ ಸ್ಥಳೀಯ ಯುವಕರು ಅವರ ಸ್ಕಾರ್ಪಿಯೋ ಕಾರಿನ ಮೇಲೆ ದಾಳಿ ನಡೆಸಿದ್ದು, ಕಾರನ್ನು ಹೊಡೆದು ಚಿಂದಿ ಮಾಡಿದ್ದಾರೆ. ಈ ಬೆಳವಣಿಗೆಯನ್ನು ಗಮನಿಸಿದ ಜಗದೀಶ್ ಗನ್ಮ್ಯಾನ್ ತಕ್ಷಣವೇ ತಮ್ಮ ಬಳಿಯಿದ್ದ ಬಂದೂಕಿನಿಂದ ಗಾಳಿಯಲ್ಲಿ ಗುಂಡನ್ನು ಹಾರಿಸಿದ್ದಾರೆ. ಗುಂಡಿನ ಶಬ್ದಕ್ಕೆ ಯುವಕರ ಗುಂಪು ಚದುರಿತು. ತದನಂತರ ಜಗದೀಶ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದು ವರದಿಗಳ ಮೂಲಕ ಸ್ಪಷ್ಟವಾಗಿದೆ.
ಜಗದೀಶ್ ಮುಖಕ್ಕೆ ಗುದ್ದಿ, ರಕ್ತ ಬರುವಂತೆ ಥಳಿಸಿದ ಪುಂಡರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ. ಮನೆಗೆ ಹಿಂತಿರುಗಿದ ಮೇಲೂ ಕೆಲವರು ಜಗದೀಶ್ ನಿವಾಸದ ಮುಂದೆ ಗಲಾಟೆ ಮಾಡಿ, ಮತ್ತೊಮ್ಮೆ ಅವರನ್ನು ಜಟಾಪಟಿಗೆ ಇಳಿಯುವಂತೆ ಪ್ರಚೋದಿಸಿದ್ದಾರೆ ಎಂದು ಹೇಳಲಾಗಿದೆ.
ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿರುವ ತಮ್ಮ ನಿವಾಸವನ್ನು ಸಂಪರ್ಕಿಸುವ ಮಾರ್ಗವೊಂದರಲ್ಲಿ ಸ್ಥಳೀಯ ಯುವಕರು ಅಣ್ಣಮ್ಮ ಕೂರಿಸುವ ಸಲುವಾಗಿ ರಸ್ತೆಯನ್ನು ಬಂದ್ ಮಾಡಿದ್ದರು. ಇದೇ ವಿಚಾರಕ್ಕೆ ಜಗದೀಶ್ ಮತ್ತು ಅಲ್ಲಿನ ಯುವಕರ ಮಧ್ಯೆ ಗುದ್ದಾಟ ನಡೆದಿತ್ತು (ಜ.23). ಇದರ ವಿಡಿಯೋ ಕೂಡ ಜಾಲತಾಣಗಳಲ್ಲಿ ಹರಿದಾಡಿತ್ತು. ನಿನ್ನೆ (ಜ.24) ರಾತ್ರಿ ಸುಮಾರು 9 ಗಂಟೆಗೆ ಅದೇ ಮಾರ್ಗದಲ್ಲಿ ತನ್ನ ಕಾರಿನಲ್ಲಿ ಬಂದ ಜಗದೀಶ್, ರಸ್ತೆ ಬಂದ್ ಮಾಡಿದ್ದಕ್ಕಾಗಿ ಯುವಕರನ್ನು ತಮ್ಮದೇ ಶೈಲಿಯಲ್ಲಿ ಪ್ರಶ್ನಿಸಿದ್ದಾರೆ. ಈ ವಿಷಯಕ್ಕೆ ಇಬ್ಬರ ನಡುವೆ ಮಾರಾಮಾರಿ ನಡೆದು, ಪುಂಡರು ಜಗದೀಶ್ ಕಾರನ್ನು ಪುಡಿಗಟ್ಟಿ, ಅವರ ಮೇಲೆ ಗಂಭೀರವಾಗಿ ಹಲ್ಲೆಗೈದಿದ್ದಾರೆ.