ನ್ಯೂಸ್

ತಂಗಿಗಾಗಿ ಅಕ್ಕನನ್ನೇ ನಗ್ನಗೊಳಿಸಿದ! ಸಹಾಯಕ್ಕೆ ಕೇಳಿ ಬರಲಿ ಎಂದು ಕಾದಿದ್ದವನಿಗೆ ಕಾದಿತ್ತು ದೊಡ್ಡ ಶಾಕ್​!

ಗಾಂಧಿನಗರ: ಟಿವಿ ಮತ್ತು ಮೊಬೈಲ್​ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧನಗಳು. ಅದೇ ರೀತಿ ಮೊಬೈಲ್​ ಮತ್ತು ಟಿವಿಯಲ್ಲಿ ಕ್ರೈಂ ಶೋಗಳನ್ನು ನೋಡುತ್ತಿದ್ದ ಒಬ್ಬ ಯುವಕ ಪ್ರೀತಿಗಾಗಿ ಮಾಡಿದ ಕೆಲಸ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರ.

ಗುಜರಾತ್​ನ ಸೂರತ್​ ನಿವಾಸಿ ಸುಮಿತ್​ ಅಘೇರಾ (18) ಹೆಸರಿನ ಯುವಕ ಹೈ ಸ್ಕೂಲ್​ನಲ್ಲಿರುವಾಗ ಕರೀಶ್ಮಾ ಹೆಸರಿನ ಬಾಲಕಿಯನ್ನು ಪ್ರೀತಿಸುತ್ತಿದ್ದನಂತೆ. ಒನ್​ ವೇ ಲವ್​ ಆಗಿದ್ದ ಇದರ ಬಗ್ಗೆಗ ಕರೀಶ್ಮಾಗೆ ಯಾವುದೇ ಮಾಹಿತಿ ಗೊತ್ತಿರಲಿಲ್ಲ. ಪಿಯುಸಿ ಮುಗಿದ ಮೇಲೆ ಅವರಿಬ್ಬರೂ ಬೇರೆ ಬೇರೆ ಕಾಲೇಜುಗಳಿಗೆ ಸೇರಿಕೊಂಡಿದ್ದಾರೆ. ಸುಮಿತ್​ ಐಟಿ ಕ್ಷೇತ್ರದಲ್ಲಿ ಉದ್ಯಮಿಯಾಗುವ ಕನಸು ಹೊಂದಿದ್ದು, ಬಿಎಸ್ಸಿ ಐಟಿ ಶಿಕ್ಷಣವನ್ನೇ ಆಯ್ಕೆ ಮಾಡಿಕೊಂಡಿದ್ದಾನೆ.

ಕಾಲೇಜು ಸೇರಿದ ಮೇಲೂ ಸುಮಿತ್​ಗೆ ಕರೀಶ್ಮಾ ಬಗ್ಗೆ ಇದ್ದ ಪ್ರೀತಿ ಕಡಿಮೆಯಾಗಿಲ್ಲ. ಹೇಗಾದರೂ ಮಾಡಿ ಆಕೆಯನ್ನು ಒಪ್ಪಿಸಿ, ಮದುವೆಯಾಗಬೇಕು ಎಂದು ಕನಸು ಕಂಡಿದ್ದನಂತೆ. ಅದಕ್ಕೆಂದು ಆತ ಒಂದು ದಾರಿಯನ್ನೂ ಹುಡುಕಿಕೊಂಡಿದ್ದಾನೆ. ಇನ್​ಸ್ಟಾಗ್ರಾಂನಲ್ಲಿ ಮೂರು ನಕಲಿ ಖಾತೆಗಳನ್ನು ತೆರೆದಿದ್ದಾನೆ. ನಂತರ ಕರೀಶ್ಮಾಳ ಅಕ್ಕ ಕಿಂಜಲ್​ಳ ಫೋಟೋಗಳನ್ನು ಎಡಿಟ್​ ಮಾಡಿ ನಗ್ನಗೊಳಿಸಿದ್ದಾನೆ. ಆ ಫೋಟೋಗಳನ್ನು ನಕಲಿ ಖಾತೆಗಳಿಂದ ಕರೀಶ್ಮಾ ಮತ್ತು ಕಿಂಜಲ್​ಗೆ ಕಳುಹಿಸಿ ಅದನ್ನು ವೈರಲ್​ ಮಾಡುವುದಾಗಿ ಬೆದರಿಸಿದ್ದಾನೆ.

ತಾನು ಐಟಿ ವಿದ್ಯಾರ್ಥಿಯಾಗಿದ್ದರಿಂದ ಕರೀಶ್ಮಾ ಈ ವಿಚಾರದಲ್ಲಿ ತನ್ನದೇ ಸಹಾಯ ಕೇಳಿ ಬರಬಹುದೆಂಬ ಭ್ರಮೆಯಲ್ಲಿ ಸುಮಿತ್​ ಈ ಕೃತ್ಯವೆಸಗಿದ್ದಾನೆ. ಆದರೆ ಈತನ ಬಳಿ ಬಾರದ ಅಕ್ಕ ತಂಗಿಯರು ನೇರವಾಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಕೈಗೆ ಸಿಕ್ಕಿಬಿದ್ದ ಸುಮಿತ್​, ಕರೀಶ್ಮಾಳ ಪ್ರೀತಿ ಪಡೆಯುವುದಕ್ಕಾಗಿ ಈ ರೀತಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಕ್ರೈ ಶೋಗಳನ್ನು ನೋಡಿ ಅದರಿಂದ ಈ ಐಡಿಯಾ ಮಾಡಿದ್ದಾಗಿಯೂ ಆತ ಹೇಳಿದ್ದಾನೆ. (ಏಜೆನ್ಸೀಸ್​)