ನ್ಯೂಸ್

ಯೂಟ್ಯೂಬ್​ನಲ್ಲಿ ಲೈಕ್​ ಮಾಡಿ ಹಣ ಗಳಿಸಿ; 49 ಲಕ್ಷ ರೂ. ಕಳೆದುಕೊಂಡ ಟೆಕ್ಕಿ​!

ಪುಣೆ: ದೇಶದಲ್ಲಿ ದಿನದಿಂದ ದಿನಕ್ಕೆ ಸೈಬರ್​ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಎಚ್ಚರಿಕೆಯ ಹೊರತಾಗಿಯೂ ಜನ ಮೋಸ ಹೋಗುತ್ತಿರುವುದು ಮಾತ್ರ ಕಡಿಮೆಯಾಗಿಲ್ಲ.

ಇದೀಗ ಪ್ರಕರಣ ಒಂದರಲ್ಲಿ ಸಾಫ್ಟವೇರ್​ ಇಂಜಿನಿಯರ್​ ಒಬ್ಬರು ಲೈಕ್​ ಮಾಡಿ ಹಣಗಳಿಸಲು ಹೋಗಿ 49 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಲೈಕ್​ ಮಾಡಿ ಹಣಗಳಿಸಿ

ವೃತ್ತಿಯಲ್ಲಿ ಸಾಫ್ಟ್​​ವೇರ್​​ ಇಂಜಿನಿಯರ್​​ ಆಗಿರುವ ಸ್ನೇಹ ಸಿಂಗ್​(35) ಎಂಬುವವರಿಗೆ ವಂಚಕರು ಯೂಟ್ಯೂಬ್​ ವಿಡಿಯೋಗಳನ್ನು ಲೈಕ್​ ಮಾಡಿ ಹಣ ಗಳಿಸಬಹುದು ಎಂದು ಹೇಳಿ ವಾಟ್ಸ್​ಆ್ಯಪ್​ ಮೂಲಕ ಬಲೆ ಬೀಸಿದ್ಧಾರೆ. ಇದನ್ನು ನಂಬಿದ ಮಹಿಳೆ ಅವರು ಹೇಳಿದ ಲಿಂಕ್​ ಮೇಲೆ ಕ್ಲಿಕ್​ ಮಾಡಿ ವಿಡಿಯೋಗಳನ್ನು ಲೈಕ್​ ಮಾಡಲು ಪ್ರಾರಂಭಿಸಿದ್ದಾರೆ.

ಇದಾದ ಕೆಲ ಹೊತ್ತಿನ ಬಳಿಕ ವಂಚಕರು ಸಂತ್ರಸ್ತರ ಖಾತೆಗೆ ಹಣವನ್ನು ವರ್ಗಾಯಿಸಿ ಅವರ ನಂಬಿಕೆಯನ್ನು ಗಳಿಸಿದ್ದಾರೆ. ಬಳಿಕ ಹೆಚ್ಚು ವಿಡಿಯೋಗಳನ್ನು ಲೈಕ್​ ಮಾಡಿದ್ದಲ್ಲಿ ಇನ್ನಷ್ಟು ಹಣ ಗಳಿಸಬಹುದು ಎಂದು ಸಂತ್ರಸ್ತೆಯನ್ನು ನಂಬಿಸಿದ ವಂಚಕರು ಕೆಲ ಹಣ ಹೂಡುವಂತೆ ಹೇಳಿದ್ದಾರೆ. ಹೂಡಿಕೆಯಿಂದ ಬರುವ ಲಾಭಾಂಶದಲ್ಲಿ ಶೇ.30 ರಷ್ಟು ಕೊಡುವುದಾಗಿ ಹೇಳಿ ಮಹಿಳೆ ಬಳಿ ಹಣ ಹೂಡಿಸುತ್ತ ಬಂದಿದ್ದಾರೆ.

49 ಲಕ್ಷ ರೂ.

ಕೆಲ ಹೊತ್ತಿನ ಬಳಿಕ ಮಹಿಳೆಗೆ ಅನುಮಾನ ಬಂದಿದ್ದು, ಈ ಬಗ್ಗೆ ವಿಚಾರಿಸಿದಾಗ ವಂಚಕ ಯಾವುದೇ ಪ್ರತಿಕ್ರಿಯೆ ಬಾರದನ್ನು ನೋಡಿ ತಾವು ಮೋಸ ಹೋಗಿರುವುದಾಗಿ ತಿಳಿದು ಬಂದಿದೆ. ವಂಚಕರ ಮಾತಿಗೆ ಮಾರು ಹೋದ ಮಹಿಳೆ ಯೂಟ್ಯೂಬ್​ ವಿಡಿಯೋಗಳನ್ನು ಲೈಕ್​ ಮಾಡಿ ಹಣ ಗಳಿಸಲು ಹೋಗಿ 49 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದರು.

ಈ ಕುರಿತಾಗಿ ಮಹಿಳೆ ಪುಣೆಯ ಹಿಂಜೇವಾಡಿ ಸೈಬರ್​ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದು, ವಂಚಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.