ನ್ಯೂಸ್

ಇಸ್ರೋ ಉಡಾಯಿಸಿದ 101ನೇ ಉಪಗ್ರಹ EOS-09 ವಿಫಲ: 3ನೇ ಹಂತದ ಕಕ್ಷೆ ಪ್ರವೇಶಿಸುವಲ್ಲಿ ಫೇಲ್! ISRO ​

ISRO: ಭಾರತದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C61) ಮಿಷನ್ ಭಾನುವಾರ (ಮೇ 18) ಮುಂಜಾನೆ ಹಿನ್ನಡೆಯನ್ನು ಅನುಭವಿಸಿತು. ಅದರ ಮೂರನೇ ಹಂತದ ಪ್ರೊಪಲ್ಷನ್ ಸಿಸ್ಟಮ್‌ನಲ್ಲಿನ ತಾಂತ್ರಿಕ ದೋಷದ ಪರಿಣಾಮ ಮೋಡ ಕವಿದ ವಾತಾವರಣ ಹಾಗೂ ರಾತ್ರಿ ವೇಳೆಯೂ ಕಾಣಲು ನೆರವಾಗುವ ಕಣ್ಗಾವಲು ಸಾಮರ್ಥ್ಯದ ಬೇಹುಗಾರಿಕೆ ಉಪಗ್ರಹವಾಗಿರುವ EOS-09 ಉದ್ದೇಶಿತ ಕಕ್ಷೆಗೆ ಸೇರುವಲ್ಲಿ ವಿಫಲವಾಯಿತು.

ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಮುಂಜಾನೆ 5.59ಕ್ಕೆ ಉಡಾವಣೆ ಮಾಡಲಾಯಿತು. ಆದರೆ, PS3 ಸಾಲಿಡ್​ ರಾಕೆಟ್​ ಮೋಟರ್​ ಹಂತದಲ್ಲಿ ಪಥದಿಂದ ವಿಮುಖವಾದ ಪರಿಣಾಮ ಇಸ್ರೋ ಕಾರ್ಯಾಚರಣೆಯನ್ನು ಕೊನೆಗೊಳಿಸಬೇಕಾಯಿತು.

1,696 ಕೆಜಿ ತೂಕದ ಇಒಎಸ್-9 ರೇಡಾರ್ ಇಮೇಜಿಂಗ್ ಉಪಗ್ರಹವು ಭೂಮಿಯ ಮೇಲ್ಮೈಯಿಂದ ಉದ್ದೇಶಿತ 524 ಕಿಮೀ ದೂರದ ಸೂರ್ಯ-ಸಿಂಕ್ರೋನಸ್ ಧ್ರುವ ಕಕ್ಷೆಯನ್ನು ತಲುಪಲು ವಿಫಲವಾಗಿದೆ.

ಆರಂಭಿಕ ಟೆಲಿಮೆಟ್ರಿ ದತ್ತಾಂಶವು ಹೈಡ್ರಾಕ್ಸಿಲ್-ಟರ್ಮಿನೇಟೆಡ್ ಪಾಲಿಬ್ಯುಟಾಡೀನ್ (HTPB) ಪ್ರೊಪೆಲ್ಲಂಟ್ ಅನ್ನು ಬಳಸುವ ಮೂರನೇ ಹಂತದ ಮೋಟಾರ್, ಹಾರಾಟದ 203 ಸೆಕೆಂಡುಗಳಲ್ಲಿ ಕಳಪೆ ಪ್ರದರ್ಶನ ನೀಡಿತು. ಹೀಗಾಗಿ ಈ ಮಿಷನ್​ ವಿಫಲವಾಗಿದ್ದು, ಇದು PSLV ಕಾರ್ಯಕ್ರಮದ 63 ಉಡಾವಣೆಗಳಲ್ಲಿ ಮೂರನೇ ಪೂರ್ಣ ವೈಫಲ್ಯ ಮತ್ತು 2017ರ ನಂತರದ ಮೊದಲನೆಯದಾಗಿದೆ. ಉಡಾವಣೆಯಾದ ಸ್ವಲ್ಪ ಸಮಯದ ನಂತರ ಇಸ್ರೋ ಮುಖ್ಯಸ್ಥ ವಿ. ನಾರಾಯಣನ್ ಅವರು ನೇರಪ್ರಸಾರದಲ್ಲಿ ಈ ಸಮಸ್ಯೆಯನ್ನು ದೃಢಪಡಿಸಿದರು.

ಈ ಸಮಸ್ಯೆಯು ಪ್ರೊಪೆಲ್ಲಂಟ್ ಹರಿವಿನ ದೋಷದಿಂದ, ನಳಿಕೆಯ ವೈಪರೀತ್ಯದಿಂದ ಅಥವಾ ರಚನಾತ್ಮಕ ವೈಫಲ್ಯಗಳಿಂದ ಉಂಟಾಗಿದೆಯೇ ಎಂದು ನಿರ್ಧರಿಸಲು ಇಸ್ರೋ ಇಂಜಿನಿಯರ್‌ಗಳು ಹಾರಾಟದ ಡೇಟಾವನ್ನು ವಿಶ್ಲೇಷಿಸುತ್ತಿದ್ದಾರೆ. PS3 ಹಂತದ ಉತ್ಪಾದನಾ ದಾಖಲೆಗಳು ಮತ್ತು ಪರೀಕ್ಷಾ ಪ್ರೋಟೋಕಾಲ್‌ಗಳನ್ನು ಪರಿಶೀಲಿಸಲು ವೈಫಲ್ಯ ವಿಶ್ಲೇಷಣಾ ಸಮಿತಿಯನ್ನು ರಚಿಸಲಾಗಿದೆ.

ಈ ಒಂದು ಹಿನ್ನಡೆಯು SAR ಇಮೇಜಿಂಗ್ ಮೂಲಕ ಗಡಿ ಕಣ್ಗಾವಲು ಮತ್ತು ವಿಪತ್ತು ಪ್ರತಿಕ್ರಿಯೆ ಸಾಮರ್ಥ್ಯಗಳನ್ನು ಹೆಚ್ಚಿಸುವ ಭಾರತದ ಯೋಜನೆಗಳನ್ನು ವಿಳಂಬಗೊಳಿಸಿದೆ.

ಇದು ಇಸ್ರೋ ಹಾರಿಬಿಟ್ಟ 101ನೇ ಉಪಗ್ರಹವಾಗಿತ್ತು. ಆದರೆ, ತಾಂತ್ರಿಕ ದೋಷದಿಂದ ವಿಫಲವಾಗಿದೆ. ಆರ್​ಐಸ್ಯಾಟ್-1ಬಿ ಎಂದೂ ಪರಿಚಿತವಾದ ಇಒಎಸ್-09 ಉಪಗ್ರಹ ವನ್ನು ಬೆಂಗಳೂರಿನಲ್ಲಿರುವ ಇಸ್ರೋದ ಯು.ಆರ್. ರಾವ್ ಉಪಗ್ರಹ ಕೇಂದ್ರ ವಿನ್ಯಾಸಗೊಳಿಸಿತ್ತು. ಸಿ-ಬ್ಯಾಂಡ್ ಸಿಂಥೆಟಿಕ್ ಅಪಾರ್ಚರ್ ರೇಡಾರ್​ನಿಂದ ಸುಸಜ್ಜಿತಗೊಂಡಿತ್ತು. ಯಾವುದೇ ರೀತಿಯ ವಾತಾವರಣವಿದ್ದರೂ ಹೈ- ರಿಸಲ್ಯೂಷನ್ ಚಿತ್ರಗಳನ್ನು ತೆಗೆಯಲು ಈ ರೇಡಾರ್ ನೆರವಾಗುತ್ತದೆ. ಆಪ್ಟಿಕಲ್ ಕ್ಯಾಮರಾಗಳಂತಲ್ಲದೆ, ಈ ರೇಡಾರ್ ಮೋಡ, ಮಳೆಯ ವಾತಾವರಣ ಮತ್ತು ರಾತ್ರಿ ವೇಳೆಯಲ್ಲೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಉಪಗ್ರಹವು ಸೂರ್ಯ-ಸಮವ್ಯಾಪಕ ಕಕ್ಷೆಯನ್ನು (ಸನ್-ಸಿಂಕ್ರೋನಸ್ ಆರ್ಬಿಟ್) ಪ್ರವೇಶಿಸಬೇಕಿತ್ತು. ಆದರೆ, ವೈಫಲ್ಯ ಅನುಭವಿಸಿದೆ. (ಏಜೆನ್ಸೀಸ್​)