ನ್ಯೂಸ್

ಅಮೆರಿಕಕ್ಕೆ ವೀಸಾ ಇಲ್ಲದೆಯೇ ಹೋಗಲು ಅವಕಾಶ: ಎಲ್ಲಿ, ಯಾರಿಗೆ?

ನವದೆಹಲಿ: ಯುಎಸ್​ ಡಿಪಾರ್ಟ್​ಮೆಂಟ್ ಆಫ್ ಹೋಮ್​ಲ್ಯಾಂಡ್ ಸೆಕ್ಯುರಿಟಿ (ಡಿಎಚ್​​ಎಸ್​) ಹೊಸ ಘೋಷಣೆಯೊಂದನ್ನು ಮಾಡಿದ್ದು, ಅಮೆರಿಕಕ್ಕೆ ವೀಸಾ ಇಲ್ಲದೆಯೇ ಬರಲು ಅವಕಾಶ ನೀಡಿದೆ. ಮೂರು ತಿಂಗಳ ಅವಧಿಗೆ ಅನ್ವಯಿಸುವಂತೆ ಇಂಥದ್ದೊಂದು ಘೋಷಣೆಯನ್ನು ಮಾಡಿದೆ. ಇಂಥ ಅವಕಾಶ ಎಲ್ಲಿ ಯಾರಿಗೆ ಎಂಬ ಕುರಿತು ವಿವರ ಇಲ್ಲಿದೆ.

ಹಮಾಸ್ ಉಗ್ರರ ದಾಳಿಯಿಂದ ತತ್ತರಿಸಿರುವ ಇಸ್ರೇಲ್​ನ ಅರ್ಹ ಪ್ರಜೆಗಳಿಗೆ ಅಮೆರಿಕ ಈ ಅವಕಾಶ ನೀಡಿದೆ. ತನ್ನ ವೀಸಾ ಮನ್ನಾ ಕಾರ್ಯಕ್ರಮದ ಅಂಗವಾಗಿ ಡಿಎಚ್​ಎಸ್ ಈ ಘೋಷಣೆಯನ್ನು ಮಾಡಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ನ. 30ರಿಂದ ಆರಂಭವಾಗುವಂತೆ ಈ ಅವಕಾಶವನ್ನು ನೀಡಲಾಗಿದೆ. ಕಳೆದ ತಿಂಗಳು ಯುಎಸ್ ಅಧ್ಯಕ್ಷ ಜೋ ಬೈಡೆನ್​ ವೀಸಾ ಮನ್ನಾ ಕಾರ್ಯಕ್ರಮದಲ್ಲಿ ಇಸ್ರೇಲ್​ ದೇಶವನ್ನೂ ಒಳಗೊಳ್ಳುವಂತೆ ಮಾಡುವುದಾಗಿ ಭರವಸೆ ನೀಡಿದ್ದ ಬೆನ್ನಿಗೇ ಈ ಘೋಷಣೆ ಹೊರಬಿದ್ದಿದೆ.

ಯುಎಸ್​ ಕಸ್ಟಮ್ಸ್ ಆ್ಯಂಡ್ ಬಾರ್ಡರ್​ ಪ್ರೊಟೆಕ್ಷನ್ ಮತ್ತು ಎಲೆಕ್ಟ್ರಾನಿಕ್ ಸಿಸ್ಟಮ್​ ಫಾರ್ ಟ್ರಾವೆಲ್ ಆಥರೈಸೇಷನ್​ ಮೂಲಕ ಆನ್​ಲೈನ್​ನಲ್ಲಿ ಪರಿಶೀಲನೆಗೆ ಒಳಪಡಿಸಿ ನೋಂದಣಿ ಮಾಡಿಕೊಳ್ಳುವಂತೆಯೂ ಸೂಚಿಸಲಾಗಿದೆ. ಬಯೋಮೆಟ್ರಿಕಲಿ ಎನೇಬ್ಲ್ಡ್ ಪಾಸ್​ಪೋರ್ಟ್ ಮತ್ತು 90 ದಿನಗಳ ತಂಗುವಿಕೆ ಕುರಿತ ಯೋಜನೆಗಳ ವಿವರ ನೀಡಿದವರು ಇದಕ್ಕೆ ಅರ್ಹರಾಗುತ್ತಾರೆ ಎಂದೂ ತಿಳಿಸಲಾಗಿದೆ.