Iran vs Israel : ಇಸ್ರೇಲ್ ಮೇಲೆ ಆರು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ಮಾಡಿದ ಬೆನ್ನಲ್ಲೇ ಉಭಯ ದೇಶಗಳ ನಡುವೆ ಕದನ ವಿರಾಮ ಜಾರಿಗೆ ಬಂದಿದೆ ಎಂದು ಟೆಹ್ರಾನ್ ಖಚಿತ ಪಡಿಸಿದೆ. ಇದರೊಂದಿಗೆ ಕಳೆದ 12 ದಿನಗಳಿಂದ ನಡೆದ ಭೀಕರ ಯುದ್ಧಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಮಂಗಳವಾರ (ಜೂನ್ 24) ಬೆಳಗ್ಗೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ದಕ್ಷಿಣ ಇಸ್ರೇಲ್ ನಗರವಾದ ಬೀರ್ ಶೆವಾದ ವಸತಿ ಕಟ್ಟಡಕ್ಕೆ ಕ್ಷಿಪಣಿ ಅಪ್ಪಳಿಸಿದ ಪರಿಣಾಮ ಕನಿಷ್ಠ ಮೂವರು ಸಾವಿಗೀಡಾಗಿದ್ದಾರೆ. ಸಾಂಪ್ರದಾಯಿಕ ಶತ್ರುಗಳ ನಡುವೆ ಕಳೆದ 12 ದಿನಗಳಿಂದ ನಡೆಯುತ್ತಿದ್ದ ಯುದ್ಧಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಇರಾನ್, ಇಸ್ರೇಲ್ ಮೇಲೆ ಕ್ಷಿಪಣಿಗಳ ದಾಳಿ ನಡೆಸಿದೆ. ಇರಾನಿನ ಕ್ಷಿಪಣಿಯಿಂದ ವಸತಿ ಸಂಕೀರ್ಣ ಸಂಪೂರ್ಣವಾಗಿ ನಾಶವಾಗಿರುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕ್ಷಿಪಣಿ ಅಪ್ಪಳಿಸಿದ ಕಟ್ಟಡದ ಹೊರಗೆ ಸುಟ್ಟುಹೋದ ಕಾರುಗಳು ಮತ್ತು ಮರಗಳ ಅವಶೇಷಗಳು ವಿಡಿಯೋದಲ್ಲಿ ಗೋಚರಿಸುತ್ತದೆ.
ದಕ್ಷಿಣ ಇಸ್ರೇಲ್‌ನಲ್ಲಿ ಇರಾನಿನ ಕ್ಷಿಪಣಿ ದಾಳಿಯಲ್ಲಿ ಮೂವರು ಸಾವಿಗೀಡಾದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಇಸ್ರೇಲಿ ತುರ್ತು ಸೇವೆಗಳು ತಿಳಿಸಿವೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಮತ್ತು ಸೌಮ್ಯ ಗಾಯಗಳಿರುವ ಸುಮಾರು ಆರು ಜನರಿಗೆ ಸ್ಥಳದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಮಧ್ಯಪ್ರಾಚ್ಯದ ಎರಡು ಬದ್ಧ ವೈರಿಗಳ ನಡುವೆ ಕದನ ವಿರಾಮ ಪ್ರಾರಂಭವಾಗುವ ಕೆಲವೇ ಕ್ಷಣಗಳ ಮೊದಲು, ಇರಾನ್, ಇಸ್ರೇಲ್ ಮೇಲೆ ಹೊಸ ಕ್ಷಿಪಣಿಗಳ ಅಲೆಯನ್ನು ಹಾರಿಸಿದೆ ಎಂದು ಇರಾನ್ ರಾಜ್ಯ ಮಾಧ್ಯಮ ಐರಿಬ್ ಹೇಳಿದೆ. ಇರಾನ್‌ನಿಂದ ಇಸ್ರೇಲ್ ಕಡೆಗೆ ಕ್ಷಿಪಣಿಗಳ ನಾಲ್ಕನೇ ದಾಳಿ ಎಂದು ಐರಿಬ್ ಟೆಲಿಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ. ಸದ್ಯ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದು, 12 ದಿನಗಳ ಯುದ್ಧಕ್ಕೆ ಬ್ರೇಕ್ ಬಿದ್ದಿದೆ.
ಇದಕ್ಕೂ ಮುನ್ನ ಇರಾನ್ನ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಘ್ಚಿ ಕದನ ವಿರಾಮದ ಸುಳಿವು ನೀಡಿದ್ದರು. ಇಸ್ರೇಲ್‌ನ ಆಕ್ರಮಣಕ್ಕೆ ತಕ್ಕ ಶಿಕ್ಷೆ ವಿಧಿಸಲು ನಮ್ಮ ಪ್ರಬಲ ಸಶಸ್ತ್ರ ಪಡೆಗಳ ಮಿಲಿಟರಿ ಕಾರ್ಯಾಚರಣೆಗಳು ಕೊನೆಯ ನಿಮಿಷದವರೆಗೆ ಅಂದರೆ, ಬೆಳಗ್ಗೆ 4 ಗಂಟೆಯವರೆಗೂ ಮುಂದುವರೆದವು. ನಮ್ಮ ಪ್ರೀತಿಯ ದೇಶವನ್ನು ತಮ್ಮ ಕೊನೆಯ ರಕ್ತದ ಹನಿಯವರೆಗೂ ರಕ್ಷಿಸಲು ಸಿದ್ಧರಾಗಿರುವ ಮತ್ತು ಶತ್ರುಗಳ ಯಾವುದೇ ದಾಳಿಗೆ ಕೊನೆಯ ಕ್ಷಣದವರೆಗೂ ಪ್ರತಿಕ್ರಿಯಿಸಿದ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳಿಗೆ ಎಲ್ಲ ಇರಾನಿಯನ್ನರೊಂದಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಅಬ್ಬಾಸ್ ಅರಘ್ಚಿ ಹೇಳಿದ್ದಾರೆ.
ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಘೋಷಣೆ ಮಾಡಿದ್ದರು. ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ನಲ್ಲಿ ಬರೆದುಕೊಂಡಿರುವ ಟ್ರಂಪ್, ಎಲ್ಲರಿಗೂ ಅಭಿನಂದನೆಗಳು! ಇಸ್ರೇಲ್ ಮತ್ತು ಇರಾನ್ ನಡುವೆ ಸಂಪೂರ್ಣ ಕದನ ವಿರಾಮ ನಡೆಯಲಿದೆ. ಕದನ ವಿರಾಮಕ್ಕೆ ಎರಡೂ ದೇಶಗಳು ಸಂಪೂರ್ಣವಾಗಿ ಒಪ್ಪಿಕೊಂಡಿವೆ. 12 ದಿನಗಳ ಯುದ್ಧದ ಅಧಿಕೃತ ಅಂತ್ಯವನ್ನು ಜಗತ್ತು ಸ್ವಾಗತಿಸುತ್ತದೆ. ಪ್ರತಿಯೊಂದು ಕದನ ವಿರಾಮದ ಸಮಯದಲ್ಲಿ, ಇನ್ನೊಂದು ಕಡೆಯವರು ಶಾಂತಿಯುತ ಮತ್ತು ಗೌರವಯುತವಾಗಿರುತ್ತಾರೆಂದು ಟ್ರಂಪ್ ಒತ್ತಿ ಹೇಳಿದರು. ಅಲ್ಲದೇ, ಎರಡೂ ದೇಶಗಳನ್ನು ಟ್ರಂಪ್ ಅಭಿನಂದಿಸಿದರು.
ಸಂಘರ್ಷವನ್ನು ಕೊನೆಗೊಳಿಸುವಲ್ಲಿ ಇಸ್ರೇಲ್ ಮತ್ತು ಇರಾನ್ ತೋರಿದ ಸಹಿಷ್ಣುತೆ, ಧೈರ್ಯ ಮತ್ತು ಬುದ್ಧಿವಂತಿಕೆಯನ್ನು ಅಮೆರಿಕ ಅಧ್ಯಕ್ಷರು ಶ್ಲಾಘಿಸಿದರು. ಇದು ವರ್ಷಗಳ ಕಾಲ ನಡೆಯಬಹುದಾದ ಯುದ್ಧ ಮತ್ತು ಇಡೀ ಮಧ್ಯಪ್ರಾಚ್ಯವನ್ನು ನಾಶಮಾಡಬಹುದಿತ್ತು, ಆದರೆ, ಅದು ಆಗಲಿಲ್ಲ ಮತ್ತು ಎಂದಿಗೂ ಆಗುವುದಿಲ್ಲ! ದೇವರು ಇಸ್ರೇಲ್ ಅನ್ನು ಆಶೀರ್ವದಿಸಲಿ, ದೇವರು ಇರಾನ್ ಅನ್ನು ಆಶೀರ್ವದಿಸಲಿ, ದೇವರು ಮಧ್ಯಪ್ರಾಚ್ಯವನ್ನು ಆಶೀರ್ವದಿಸಲಿ, ದೇವರು ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಆಶೀರ್ವದಿಸಲಿ ಮತ್ತು ದೇವರು ಜಗತ್ತನ್ನು ಆಶೀರ್ವದಿಸಲಿ ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ಟ್ರಂಪ್ ಅವರ ಕದನ ವಿರಾಮದ ಹಕ್ಕುಗಳಿಗೆ ಇಸ್ರೇಲ್ ಆಗಿನ್ನೂ ಪ್ರತಿಕ್ರಿಯಿಸಿರಲಿಲ್ಲ. ಅಂತಿಮವಾಗಿ ಇರಾನ್, ಕದನ ವಿರಾಮವನ್ನು ಖಚಿತಪಡಿಸಿದೆ. (ಏಜೆನ್ಸೀಸ್)