ತನ್ನ ಮುದ್ದಿನ ನಾಯಿಯೊಂದಿಗೆ ಮಂಜಿತ್ ಸಂಘಾ 
ವಿದೇಶ

ನಾಯಿ ನೆಕ್ಕಿದ್ದಕ್ಕೆ ಮಹಿಳೆಯ ಕೈಕಾಲು ಕಟ್! ಏನಿದು ಸೆಪ್ಸಿಸ್ ರೋಗ? ನಾಯಿ ಸಾಕುವವರು ಓದಲೇಬೇಕಾದ ಸುದ್ದಿ | Dog Owner Alert

ಪ್ರಮುಖ ಮುಖ್ಯಾಂಶಗಳು

  • ನಾಯಿ ನೆಕ್ಕಿ ಕೈಕಾಲು ಕಳೆದುಕೊಂಡ ಯುವತಿ
  • ಶನಿವಾರ ನಾಯಿ ಜೊತೆ ಆಟ, ಭಾನುವಾರ ಆಸ್ಪತ್ರೆ, ಸೋಮವಾರ ಅಂಗವಿಕಲತೆಗೆ ತುತ್ತಾದ ಮಹಿಳೆ
  • ನಾಯಿ ಸಾಕುವವರು ಓದಲೇ ಬೇಕಾದ ಸುದ್ದಿ
ಲಂಡನ್: ಹಿಂದೊಂದು ಕಾಲವಿತ್ತು, ಮನೆಯಲ್ಲಿ ಎಷ್ಟು ಜನ ಇರುತ್ತಾರೋ ಅಷ್ಟೇ ಸಂಖ್ಯೆಯ ದನ-ಕರುಗಳು ಕೊಟ್ಟಿಯೆಯಲ್ಲಿ ಇರುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ ಹಿಂದೆ ಹಸುಗಳು ಪಡೆದುಕೊಂಡಿದ್ದ ಸ್ಥಾನವನ್ನು ನಾಯಿಗಳು ಆಕ್ರಮಿಸಿಕೊಂಡಿದೆ.
ಮನುಷ್ಯರು ಈಗ ನಾಯಿಯನ್ನು ತಾವು ಹೆತ್ತ ಮಕ್ಕಳಿಕ್ಕಿಂತ ಹೆಚ್ಚಾಗಿ ಸಾಕುವುದನ್ನು ನಾವು ನೋಡಿರುತ್ತೇವೆ, ಆದರೆ ಲಂಡನ್ನಿನಲ್ಲಿ ಸಾಕಿದ ನಾಯಿಯೊಂದು ಮನೆಯೊಡತಿಯನ್ನು ನೆಕ್ಕಿದ ಪರಿಣಾಮ ಆಕೆ ತನ್ನ ಕೈಕಾಲುಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ (Dog Owner Alert) ಎದುರಾಗಿದೆ ಎಂದರೆ ನೀವು ನಂಬಲೇ ಬೇಕು.

ಆಗಿದ್ದೇನು?

ಲಂಡನ್​ನಲ್ಲಿ ವಾಸವಿರುವ ಮಂಜಿತ್ ಸಂಘ ಎಂಬ ಮಹಿಳೆ ಪ್ರೀತಿಯಿಂದ ಒಂದು ನಾಯಿಯನ್ನು ಮನೆಯಲ್ಲಿ ಸಾಕಿದ್ದಳು. ಆ ನಾಯಿ ಕೂಡ ಇವಳ ಜತೆಗೆ ಆಡವಾಡುತ್ತಾ, ಹಾಕಿದನ್ನು ತಿಂದುಕೊಂಡು ಮನೆಯವರ ಮುದ್ದಿನ ಮಗನಂತೆ ಇತ್ತು. ಅದರೆ ಒಂದು ದಿನ ಮಂಜಿತ್ ಸಂಘಾಳಿಗೆ ಇದ್ದಕ್ಕಿದಂತೆ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯ ಹದಗೆಟ್ಟ ಪರಿಣಾಮ ನಾಲ್ಕು ಬಗೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಕೈ ಮತ್ತು ಕಾಲನ್ನು ಕಳೆದುಕೊಂಡಿದ್ದಾರೆ.

ಗಾಯ ನೆಕ್ಕಿದ ನಾಯಿ

ತನ್ನ ಪತ್ನಿ ಅನುಭವಿಸಿದ ಯಾತನೆಯ ಬಗ್ಗೆ ಮಾತನಾಡಿರುವ ಮಂಜಿತ್ ಸಂಘಾಳ ಪತಿ ಕಮಲಜಿತ್ ಸಂಘ, ನನ್ನ ಹೆಂಡತಿ ಶನಿವಾರ ನಾಯಿ ಜೊತೆ ಆಟವಾಡಿದಳು, ಭಾನುವಾರ ಅಸ್ವಸ್ತಳಾದಳು, ಸೋಮವಾರ ತನ್ನ ಕೈಕಾಲುಗಳನ್ನು ಕಳೆದಿಕೊಂಡಳು ಎಂದು ಹೇಳಿದ್ದಾರೆ.
ಇದಕ್ಕೆ ನಾಯಿ ಹೇಗೆ ಕಾರಣ ಎಂದು ಕೇಳಿದಾಗ, ನನ್ನ ಹೆಂಡತಿ ಕಾಲಿಗೆ ಚಿಕ್ಕ ಗಾಯವಾಗಿತ್ತು. ಆ ಗಾಯವನ್ನು ನಾಯಿ ನೆಕ್ಕಿದಾಗ, ಸೋಂಕು ಉಲ್ಬಣಗೊಂಡಿದೆ. ನಾಯಿಯ ಎಂಜಲಿನಲ್ಲಿದ್ದ ಬ್ಯಾಕ್ಟೀರಿಯಾಗಳು ನನ್ನ ಪತ್ನಿಯ ರಕ್ತವನ್ನು ಸೇರಿ ಸೆಪ್ಸಿಸ್ ರೋಗಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಅವರು ಹೇಳಿದ್ದಾರೆ. ಸೆಪ್ಸಿಸ್ ರೋಗ ನನ್ನಾಕೆಗೆ ತಗುಲಿದ ಕಾರಣ ಆಕೆ ಹೃದಯ ಸ್ತಂಭನದ ಜತೆಗೆ, ತನ್ನ ಎರಡೂ ಕೈ ಕಾಲುಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ದುಃಖವನ್ನು ಹೊರಹಾಕಿದ್ದಾರೆ, (ಏಜನ್ಸೀಸ್​).

ಸೆಪ್ಸಿಸ್ ಎಂದರೇನು?

ಸಾಮಾನ್ಯವಾಗಿ ನಮಗೆ ಗಾಯವಾದಾಗ ಅಥವಾ ಯಾವುದಾದರೂ ಸೋಂಕು ತಗುಲಿದಾಗ, ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯು ಆ ಸೋಂಕಿನ ವಿರುದ್ಧ ಹೋರಾಡುತ್ತದೆ. ಆದರೆ ಸೆಪ್ಸಿಸ್ ಸ್ಥಿತಿಯಲ್ಲಿ, ರೋಗನಿರೋಧಕ ಶಕ್ತಿಯು ಬಿಡುಗಡೆ ಮಾಡುವ ರಾಸಾಯನಿಕಗಳು ಸೋಂಕಿನ ವಿರುದ್ಧ ಹೋರಾಡುವ ಬದಲು ದೇಹದ ಸ್ವಂತ ಅಂಗಾಂಶಗಳು ಮತ್ತು ಅಂಗಗಳ ಮೇಲೆ ದಾಳಿ ಮಾಡಲು ಶುರುಮಾಡುತ್ತವೆ. ಇದನ್ನು 'ಬ್ಲಡ್ ಪಾಯ್ಸನಿಂಗ್' ಅಥವಾ ರಕ್ತದ ವಿಷತ್ವ ಎಂದೂ ಕರೆಯಲಾಗುತ್ತದೆ.

ಇದು ಮನುಷ್ಯನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಅಂಗಾಂಗ ವೈಫಲ್ಯ

ರಕ್ತನಾಳಗಳಲ್ಲಿ ಸಣ್ಣ ಸಣ್ಣ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಿ, ಕಿಡ್ನಿ, ಲಿವರ್, ಶ್ವಾಸಕೋಶ ಮತ್ತು ಮೆದುಳಿಗೆ ರಕ್ತ ಸಂಚಾರ ಮತ್ತು ಆಮ್ಲಜನಕದ ಪೂರೈಕೆ ಸ್ಥಗಿತಗೊಳ್ಳುತ್ತದೆ.

ರಕ್ತದೊತ್ತಡ ಇಳಿಕೆ

ರಕ್ತದೊತ್ತಡ ತೀವ್ರವಾಗಿ ಕುಸಿಯುತ್ತದೆ. ಇದರಿಂದ ಹೃದಯವು ದುರ್ಬಲಗೊಳ್ಳುತ್ತದೆ. ಇದನ್ನು 'ಸೆಪ್ಟಿಕ್ ಶಾಕ್' ಎನ್ನಲಾಗುತ್ತದೆ, ಇದು ಅತ್ಯಂತ ಅಪಾಯಕಾರಿ.

ಮುನ್ನೆಚ್ಚರಿಕಾ ಕ್ರಮಗಳು

ಸೋಂಕುಗಳನ್ನು ತಡೆಗಟ್ಟಿ

ನಿಮ್ಮ ದೇಹದಲ್ಲಿರುವ ಸಣ್ಣ ಪುಟ್ಟ ಸೋಂಕುಗಳನ್ನು (ಉದಾಹರಣೆಗೆ: ಮೂತ್ರದ ಸೋಂಕು, ನ್ಯುಮೋನಿಯಾ ಅಥವಾ ಚರ್ಮದ ಗಾಯ) ಅಲಕ್ಷಿಸಬೇಡಿ. ತಕ್ಷಣ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಿರಿ.

ಗಾಯಗಳ ಆರೈಕೆ

ದೇಹದ ಮೇಲೆ ಗಾಯಗಳಾದಾಗ ಆ ಜಾಗವನ್ನು ಸ್ವಚ್ಛವಾಗಿಡಿ ಮತ್ತು ಸೋಂಕಾಗದಂತೆ ಬ್ಯಾಂಡೇಜ್ ಅಥವಾ ಔಷಧಿ ಬಳಸಿ.

ಲಸಿಕೆಗಳನ್ನು ಪಡೆಯಿರಿ

ಫ್ಲೂ, ನ್ಯುಮೋನಿಯಾ ಮತ್ತು ಇತರ ಸಾಂಕ್ರಾಮಿಕ ರೋಗಗಳ ವಿರುದ್ಧ ಲಸಿಕೆ ಪಡೆಯುವುದರಿಂದ ಸೋಂಕಿನ ಅಪಾಯ ಕಡಿಮೆಯಾಗುತ್ತದೆ.

ಶುಚಿತ್ವ ಕಾಪಾಡಿಕೊಳ್ಳಿ

ನಿಯಮಿತವಾಗಿ ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳುವುದು ಸೋಂಕು ಹರಡದಂತೆ ತಡೆಯಲು ಇರುವ ಸುಲಭ ಮಾರ್ಗ.

ಸಕಾಲಿಕ ಚಿಕಿತ್ಸೆ

ಸೆಪ್ಸಿಸ್‌ನ ಲಕ್ಷಣಗಳು ಕಂಡ ಕೂಡಲೇ ಸಮಯ ವ್ಯರ್ಥ ಮಾಡದೆ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಾಗಿ. ಪ್ರತಿ ನಿಮಿಷವೂ ಇಲ್ಲಿ ಮುಖ್ಯವಾಗಿರುತ್ತದೆ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಸದಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.