ಹೆಂಡತಿಯನ್ನು ಭುಜದ ಮೇಲೆ ಹೊತ್ತಿರುವ ಗಂಡ 
ವಿದೇಶ

ಗಂಡ ಪ್ರೀತಿಯಿಂದ ಕೊಡಿಸಿದ ಐಫೋನ್ ಮಾರಲು ಮುಂದಾದ ಹೆಂಡತಿ! ಸಿಟ್ಟಿಗೆದ್ದ ಪತಿ ಮಾಡಿದ್ದೇನು ಗೊತ್ತೇ? I Phone

ಪ್ರಮುಖ ಮುಖ್ಯಾಂಶಗಳು

  • ಹೆಂಡತಿಗೆ ಪ್ರೀತಿಯಿಂದ ಐ ಫೋನ್​ ಕೊಡಿಸಿದ್ದ ಗಂಡ
  • ಗಂಡ ಕೊಡಿಸಿದ್ದ ಐ ಫೋನ್​ನ್ನು ಮಾರಲು ಮುಂದಾದ ಪತ್ನಿ
  • ಮಾಲ್​ನಲ್ಲಿ ಸಾರ್ವಜನಿಕರ ಎದುರೇ ಭುಜದ ಮೇಲೆ ಹೊತ್ತೊಯ್ದ ಪತಿರಾಯ
ಬೀಜಿಂಗ್: ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ಜಗಳಗಳು ನಡೆಯುವುದು ಸಾಮಾನ್ಯ. ಆದರೆ ಚೀನಾದ ಶಾಪಿಂಗ್ ಮಾಲ್‌ವೊಂದರಲ್ಲಿ ನಡೆದ ಈ ಘಟನೆ ಮಾತ್ರ ಈಗ ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ. ಹೆಂಡತಿಗಾಗಿ ಕಷ್ಟಪಟ್ಟು ಕಂತುಗಳಲ್ಲಿ ಐ ಫೋನ್ (I Phone) ಖರೀದಿಸಿದ ಗಂಡನಿಗೆ ಅವಳು ನೀಡಿದ ಸರ್ಪ್ರೈಸ್ ಅಕ್ಷರಶಃ ಆಘಾತ ತಂದಿದೆ.

ನಡೆದಿದ್ದೇನು?

ಚೀನಾದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಖುಷಿಪಡಿಸಲು ಹೊಸ ಮೊಬೈಲ್ ಫೋನ್ ಒಂದನ್ನು ಖರೀದಿಸಿದ್ದನು. ಆರ್ಥಿಕ ಪರಿಸ್ಥಿತಿ ಅಷ್ಟಕ್ಕಷ್ಟೇ ಇದ್ದರೂ, ಪ್ರತಿ ತಿಂಗಳು ಕಂತು ಪಾವತಿಸುವ ಭರವಸೆಯ ಮೇಲೆ ಅವಳಿಗೆ ಉಡುಗೊರೆ ನೀಡಿದ್ದನು. ಆದರೆ, ಆ ಹೆಂಡತಿಗೆ ಗಂಡ ನೀಡಿದ ಫೋನ್ ಇಷ್ಟವಾಗಲಿಲ್ಲ. ಅದನ್ನು ಅವನಿಗೆ ನೇರವಾಗಿ ಹೇಳುವ ಬದಲು, ಗಂಡನಿಗೆ ತಿಳಿಯದಂತೆ ರಹಸ್ಯವಾಗಿ ಮಾರಾಟ ಮಾಡಿ ಹಣ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದಳು.

ಮಾಲ್‌ನಲ್ಲಿ ರೆಡ್ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಪತ್ನಿ!

ಪತಿ ಇನ್ನೂ ಫೋನಿನ ಕಂತುಗಳನ್ನು ಕಟ್ಟುತ್ತಿದ್ದರೂ, ಪತ್ನಿ ಆ ಫೋನ್ ಹಿಡಿದು ಶಾಪಿಂಗ್ ಮಾಲ್‌ನಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಳು. ಈ ವಿಷಯ ಹೇಗೋ ಪತಿಗೆ ತಿಳಿದುಬಂದಿದೆ.
ತಕ್ಷಣವೇ ಮಾಲ್‌ಗೆ ದೌಡಾಯಿಸಿದ ಪತಿ, ಹೆಂಡತಿಯನ್ನು ಎದುರಿಸಿದ್ದಾನೆ. ಅಲ್ಲಿ ನಡೆದ ಜಗಳ ವಿಕೋಪಕ್ಕೆ ಹೋಗಿದ್ದು, ಪತಿ ತನ್ನ ಹೆಂಡತಿಯನ್ನು ಎಲ್ಲರ ಮುಂದೆಯೇ ಭುಜದ ಮೇಲೆ ಎತ್ತಿಕೊಂಡು ಮಾಲ್‌ನಿಂದ ಹೊರಗೆ ನಡೆದಿದ್ದಾನೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ, ಮಹಿಳೆಯು ತನ್ನನ್ನು ಬಿಡಿಸಿಕೊಳ್ಳಲು ಹೆಣಗಾಡುತ್ತಿದ್ದರೂ, ಪತಿ ಅವಳನ್ನು ಒಂದು ಚೀಲದಂತೆ ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿರುವುದನ್ನು ನೋಡಬಹುದಾಗಿದೆ.
ಸುತ್ತಮುತ್ತಲಿನ ಜನರು ಆಶ್ಚರ್ಯ ಮತ್ತು ದಿಗಿಲಿನಿಂದ ಈ ದೃಶ್ಯವನ್ನು ತಮ್ಮ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಯಾವುದೇ ರಕ್ತಪಾತ ಅಥವಾ ತೀವ್ರ ದೈಹಿಕ ಹಿಂಸೆ ಕಾಣಿಸದಿದ್ದರೂ, ಮಹಿಳೆಯ ಮುಖದಲ್ಲಿನ ಮುಜುಗರ ಮತ್ತು ಅಸಮಾಧಾನ ಎದ್ದು ಕಾಣುತ್ತಿತ್ತು.

ನೆಟ್ಟಿಗರ ನಡುವೆ ಭಾರಿ ಚರ್ಚೆ!

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ಎರಡು ಭಾಗವಾಗಿ ವಿಭಜನೆಯಾಗಿದ್ದು ಕೆಲವರು ಪತಿ ಮಾಡಿದ್ದು, ಸರಿ ಎಂದರೆ ಇನ್ನು ಕೆಲವರು ಮಹಿಳೆಯ ಬೆಂಬಲಕ್ಕೆ ನಿಂತಿದ್ದಾರೆ.
ಗಂಡ ಪ್ರೀತಿಯಿಂದ ಕೊಟ್ಟಿದ್ದನ್ನು ಮಾರಲು ಹೋಗುವುದು ಎಷ್ಟು ಸರಿ? ಅವಳಿಗೆ ಕೃತಜ್ಞತೆಯೇ ಇಲ್ಲ. ಇಂತಹ ಮಹಿಳೆಯೊಂದಿಗೆ ಸಂಸಾರ ಮಾಡುವುದೇ ಕಷ್ಟ ಎಂದು ಪತಿಯ ಪರ ಕಮೆಂಟ್​ ಮಾಡಿದರೆ, ಸಾರ್ವಜನಿಕವಾಗಿ ಒಬ್ಬ ಮಹಿಳೆಯನ್ನು ಈ ರೀತಿ ಭುಜದ ಮೇಲೆ ಹೊತ್ತುಕೊಂಡು ಅವಮಾನಿಸುವುದು ಸರಿಯಲ್ಲ. ಇದು ಕೇವಲ ದೈಹಿಕ ಬಲದ ಪ್ರದರ್ಶನ ಎಂದು ಮಹಿಳೆ ಪರ ಬ್ಯಾಟ್​ ಬೀಸಿದ್ದಾರೆ. ಇನ್ನೂ ಕೆಲ ಬಳಕೆದಾರರು ಇದೊಂದು ನಾಟಕೀಯ ಸನ್ನಿವೇಶವಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಗಂಡ ಪ್ರೀತಿಯಿಂದ ಕೊಡಿಸಿದ ಉಡುಗೊರೆ ಕೊನೆಗೆ ಬೀದಿಯಲ್ಲಿ ಹೈಡ್ರಾಮಾಕ್ಕೆ ಕಾರಣವಾಗಿದ್ದು ಮಾತ್ರ ವಿಪರ್ಯಾಸ. ಆ ದಂಪತಿಗಳು ಈಗ ಹೇಗಿದ್ದಾರೆ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲವಾದರೂ, ಒಂದು ಫೋನ್​ ಸಂಸಾರವನ್ನು ಬೀದಿ ರಂಪಾಟಕ್ಕೆ ದಾರಿ ಮಾಡಿ ಕೊಟ್ಟಿದಂತು ಸತ್ಯವಾಗಿದೆ,(ಏಜನ್ಸೀಸ್​).