ಕ್ಷಿಪಣಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾದ ಸರ್ವೋಚ್ಛ ನಾಯಕ ಅಥವಾ ಸರ್ವಾಧಿಕಾರಿ ಕಿಮ್ ಜಾಂಗ್​ ಉನ್ 
ವಿದೇಶ

ದಾಳಿಯಿಂದ ಬಚಾವ್‌ ಆಗಲು ಬೇರೆ ದಾರಿಯೇ ಇಲ್ಲ... ವಿಶ್ವ ನಾಯಕರಿಗೆ ನಡುಕ ಹುಟ್ಟಿಸಿದ ಉತ್ತರ ಕೊರಿಯಾದ ಹೊಸ ಎಐ ಅಸ್ತ್ರ..! Kim Jong Un

ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮವಾಗಿರುವ 'ಕೆಸಿಎನ್ಎ' (KCNA) ಮಾಡಿರುವ ವರದಿ ಪ್ರಕಾರ, ಈ ಐತಿಹಾಸಿಕ ಕ್ಷಿಪಣಿ ಪರೀಕ್ಷೆಯ ವೀಕ್ಷಣೆಯ ವೇಳೆ ಕಿಮ್ ಅವರೊಂದಿಗೆ ಅವರ ಪುತ್ರಿ ಕಿಮ್ ಜು ಆ ಕೂಡ ಉಪಸ್ಥಿತರಿದ್ದರು. ಕ್ಷಿಪಣಿ ಗಗನಕ್ಕೆ ಚಿಮ್ಮುವ ದೃಶ್ಯವನ್ನು ನೋಡಿ ಕಿಮ್ ಕುಟುಂಬವು ಹರ್ಷ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.

ಪ್ಯೊಂಗ್ಯಾಂಗ್ : ಜಗತ್ತಿನ ನಿಗೂಢ ದೇಶಗಳಲ್ಲಿ ಒಂದಾಗಿರುವ ಉತ್ತರ ಕೊರಿಯಾವು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಅತ್ಯಾಧುನಿಕ ಕ್ಷಿಪಣಿಯೊಂದನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ದೇಶದ ಸರ್ವೋಚ್ಛ ನಾಯಕ ಅಥವಾ ಸರ್ವಾಧಿಕಾರಿ ಕಿಮ್ ಜಾಂಗ್​ ಉನ್ ( Kim Jong Un ) ಅವರು ಸ್ವತಃ ಈ ಪರೀಕ್ಷೆಯ ಮೇಲ್ವಿಚಾರಣೆಯನ್ನು ವಹಿಸಿದ್ದರು ಎಂದು ವರದಿಯಾಗಿದೆ.

ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮವಾಗಿರುವ 'ಕೆಸಿಎನ್ಎ' (KCNA) ಮಾಡಿರುವ ವರದಿ ಪ್ರಕಾರ, ಈ ಐತಿಹಾಸಿಕ ಕ್ಷಿಪಣಿ ಪರೀಕ್ಷೆಯ ವೀಕ್ಷಣೆಯ ವೇಳೆ ಕಿಮ್ ಅವರೊಂದಿಗೆ ಅವರ ಪುತ್ರಿ ಕಿಮ್ ಜು ಆ ಕೂಡ ಉಪಸ್ಥಿತರಿದ್ದರು. ಕ್ಷಿಪಣಿ ಗಗನಕ್ಕೆ ಚಿಮ್ಮುವ ದೃಶ್ಯವನ್ನು ನೋಡಿ ಕಿಮ್ ಕುಟುಂಬವು ಹರ್ಷ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.

ಕ್ಷಿಪಣಿಯ ವಿಶೇಷತೆಗಳ ಕುರಿತು ಮಾಹಿತಿ ನೀಡಿರುವ ಕಿಮ್ ಜಾಂಗ್​ ಉನ್ ಸಹೋದರಿ ಕಿಮ್ ಯೋ ಜಾಂಗ್, ಕೃತಕ ಬುದ್ಧಿಮತ್ತೆಯ ನೆರವಿನಿಂದ ಈ ಕ್ಷಿಪಣಿಯು ಕಡಿಮೆ ಎತ್ತರದಲ್ಲಿ ಹಾರುವಾಗಲೂ ತನ್ನ ಪಥವನ್ನು ಬದಲಾಯಿಸಬಲ್ಲದು ಎಂದು ತಿಳಿಸಿದ್ದಾರೆ. ಈ ನೂತನ ತಂತ್ರಜ್ಞಾನದಿಂದಾಗಿ ಶತ್ರು ರಾಷ್ಟ್ರಗಳು ಈ ಕ್ಷಿಪಣಿಯ ದಾಳಿಯನ್ನು ತಪ್ಪಿಸುವುದು ಅಥವಾ ತಡೆಗಟ್ಟುವುದು ಅತ್ಯಂತ ಕಷ್ಟಕರವಾಗಲಿದೆ ಎಂದು ಎಚ್ಚರಿಸಿದ್ದಾರೆ. ಬಿಡುಗಡೆಗೊಂಡ ಚಿತ್ರಗಳಲ್ಲಿ ಕಿಮ್ ಜಾಂಗ್ ಉನ್ ನಗುಮುಖದಿಂದ ನಿಂತಿರುವುದು ಹಾಗೂ ಅವರ ಕುಟುಂಬ ಸದಸ್ಯರು ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿರುವುದು ಕಂಡುಬಂದಿದೆ.

ಹೊಸ ಶಸ್ತ್ರಾಸ್ತ್ರ ವ್ಯವಸ್ಥೆಗಳ ಸಾಮರ್ಥ್ಯವನ್ನು ಪರೀಕ್ಷಿಸುವುದು ಮತ್ತು ಸೈನ್ಯದ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವುದೇ ಈ ಪರೀಕ್ಷೆಯ ಮುಖ್ಯ ಉದ್ದೇಶವಾಗಿತ್ತು ಎಂದು ಉತ್ತರ ಕೊರಿಯಾ ಸ್ಪಷ್ಟಪಡಿಸಿದೆ. ಮತ್ತೊಂದೆಡೆ, ದಕ್ಷಿಣ ಕೊರಿಯಾದ ಸೇನೆಯೂ ಈ ಕ್ಷಿಪಣಿ ಪರೀಕ್ಷೆಯನ್ನು ಅಧಿಕೃತವಾಗಿ ದೃಢಪಡಿಸಿದೆ. ದಕ್ಷಿಣ ಕೊರಿಯಾದ ಪೂರ್ವ ಕರಾವಳಿ ನಗರವಾದ ವೋನ್ಸಾನ್ ಸಮೀಪದಿಂದ ಉಡಾಯಿಸಲಾದ ಈ ಕ್ಷಿಪಣಿಯು ಸುಮಾರು 700 ಕಿಲೋಮೀಟರ್‌ಗಳಿಗೂ ಅಧಿಕ ದೂರವನ್ನು ಕ್ರಮಿಸಿದೆ ಎಂದು ದಕ್ಷಿಣ ಕೊರಿಯಾ ತಿಳಿಸಿದೆ.

ಡಿಮಿಲಿಟರೀಕೃತ ವಲಯದಲ್ಲಿ (DMZ) ಸಂಭವಿಸಿದ ಸ್ಫೋಟದಲ್ಲಿ ದಕ್ಷಿಣ ಕೊರಿಯಾದ ಮೂವರು ಸೈನಿಕರು ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ, ದಕ್ಷಿಣ ಕೊರಿಯಾವು ಉತ್ತರ ಕೊರಿಯಾದಿಂದ ಕ್ಷಮೆಯಾಚನೆಗೆ ಆಗ್ರಹಿಸಿತ್ತು. ಆದರೆ ಉತ್ತರ ಕೊರಿಯಾ ಈ ಆರೋಪವನ್ನು ತಳ್ಳಿಹಾಕಿದ್ದು, ಯಾವುದೇ ಜವಾಬ್ದಾರಿಯನ್ನು ಒಪ್ಪಿಕೊಂಡಿಲ್ಲ. ಅಷ್ಟೇ ಅಲ್ಲದೆ, ದಕ್ಷಿಣ ಕೊರಿಯಾದ ಶಾಂತಿ ಪ್ರಯತ್ನಗಳನ್ನು ಮತ್ತು ರಾಜತಾಂತ್ರಿಕ ಮಾತುಕತೆಗಳ ಪ್ರಸ್ತಾವನೆಗಳನ್ನು ಉತ್ತರ ಕೊರಿಯಾ ಸಂಪೂರ್ಣವಾಗಿ ತಿರಸ್ಕರಿಸುತ್ತಾ ಬಂದಿದೆ.

ಈ ಎಲ್ಲಾ ಉದ್ವಿಗ್ನ ಪರಿಸ್ಥಿತಿಗಳ ನಡುವೆಯೂ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರೊಂದಿಗೆ ಭೇಟಿಯಾಗುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ. ಆದಾಗ್ಯೂ, ಉತ್ತರ ಕೊರಿಯಾದ ಇತ್ತೀಚಿನ ಕ್ಷಿಪಣಿ ಪರೀಕ್ಷೆಗಳು ಅಮೆರಿಕದ ಸಿಬ್ಬಂದಿ, ಪ್ರಾಂತ್ಯಗಳು ಅಥವಾ ಮಿತ್ರರಾಷ್ಟ್ರಗಳಿಗೆ ಯಾವುದೇ ತಕ್ಷಣದ ಬೆದರಿಕೆಯನ್ನು ಒಡ್ಡುತ್ತಿಲ್ಲ ಎಂದು ಕಳೆದ ತಿಂಗಳು ಯುಎಸ್ ಪೆಸಿಫಿಕ್ ಕಮಾಂಡ್ ತನ್ನ ಅಧಿಕೃತ ಹೇಳಿಕೆಯಲ್ಲಿ ಸ್ಪಷ್ಟಪಡಿಸಿತ್ತು, (ಏಜೆನ್ಸೀಸ್​).