ತರಬೇತಿಯಲ್ಲಿ ಪತನಗೊಂಡ ಪಾಕ್ ಯುದ್ಧವಿಮಾನ
- ತರಬೇತಿಯಲ್ಲಿ ಪತನಗೊಂಡ ಪಾಕ್ ಯುದ್ಧವಿಮಾನ
- ಬದುಕುಳಿದ ಫೈಲೆಟ್ಗಳು
- ಮುಂದುವರಿದ ತನಿಖೆ
ಪಾಕಿಸ್ತಾನ: ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದಾಗಲೇ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಪಾಕಿಸ್ತಾನದ ತರಬೇತಿ ನಿರತ ‘ಕ್ಸಿಹೊಂಗ್ಡು ಕೆ-8’ (Hongdu JL-8) ಯುದ್ಧವಿಮಾನ (Pakistan Aircraft Crash) ವೊಂದು ಮಿಯಾನ್ವಾಲಿ ವಾಯುನೆಲೆಯ ಸಮೀಪದಲ್ಲಿ ಹಠಾತ್ ಪತನಗೊಂಡಿರುವ ಕುರಿತು ವರದಿಯಾಗಿದೆ.
ನಿಯಂತ್ರಣ ಕಳೆದುಕೊಂಡ ವಿಮಾನ ವೇಗವಾಗಿ ಭೂಮಿಯತ್ತ ನುಗ್ಗಿದೆ. ಆದರೆ ನೆಲಕ್ಕೆ ಅಪ್ಪಳಿಸುವ ಕೆಲವೇ ಸೆಕೆಂಡುಗಳ ಮುನ್ನ ಇಬ್ಬರೂ ಪೈಲಟ್‌ಗಳು ಅತ್ಯಂತ ಚಾಕಚಕ್ಯತೆಯಿಂದ ಎಜೆಕ್ಟ್ ಆಗುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯರು ಈ ಪೈಲಟ್‌ಗಳು ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ಕೆಳಗೆ ಇಳಿಯುವುದನ್ನು ಕಣ್ಣಾರೆ ಕಂಡಿದ್ದು ವಿಡಿಯೋ ಹಂಚಿಕೊಂಡಿದ್ದಾರೆ.
ಅಧಿಕೃತ ಮೌನ, ತನಿಖೆಗೆ ಆದೇಶ
ಅಪಘಾತ ಸಂಭವಿಸಿದ ತಕ್ಷಣವೇ ಪಾಕಿಸ್ತಾನ ವಾಯುಪಡೆ (PAF) ಹಿರಿಯ ಅಧಿಕಾರಿಗಳ ತಂಡವನ್ನು ಸ್ಥಳಕ್ಕೆ ರವಾನಿಸಿದೆ. ವಿಮಾನ ಪತನಕ್ಕೆ ನಿಖರವಾದ ಕಾರಣವೇನೆಂಬುದು ಇನ್ನು ಅಧಿಕೃತವಾಗಿ ದೃಢಪಟ್ಟಿಲ್ಲ. ಪೈಲಟ್‌ಗಳ ಪ್ರಸ್ತುತ ಆರೋಗ್ಯ ಸ್ಥಿತಿ ಹೇಗಿದೆ ಮತ್ತು ವಿಮಾನ ಬಿದ್ದ ಜಾಗದಲ್ಲಿ ಯಾರಿಗಾದರೂ ಗಾಯಗಳಾಗಿದೆಯೇ ಎಂಬ ಬಗ್ಗೆ ವಾಯುಪಡೆ ಇನ್ನು ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.
ಆದರೆ, ಘಟನೆಯ ಗಂಭೀರತೆಯನ್ನು ಪರಿಗಣಿಸಿ ತಕ್ಷಣವೇ ಉನ್ನತ ಮಟ್ಟದ ತನಿಖಾ ಮಂಡಳಿಯನ್ನು (Board of Inquiry) ರಚಿಸಲಾಗಿದೆ. ತಾಂತ್ರಿಕ ವೈಫಲ್ಯ, ವಿಮಾನದ ನಿರ್ವಹಣೆಯಲ್ಲಿನ ಲೋಪ ಅಥವಾ ಹಾರಾಟದ ವೇಳೆಯ ಮಾನವ ತಪ್ಪುಗಳೇನಾದರೂ ಇವೆಯೇ ಎಂಬ ಎಲ್ಲಾ ಆಯಾಮಗಳಲ್ಲೂ ತನಿಖೆ ಆರಂಭವಾಗಿದೆ.
ತರಬೇತಿ ಕಾರ್ಯಾಚರಣೆಗಳನ್ನು ಅತ್ಯಂತ ಕಟ್ಟುನಿಟ್ಟಾದ ಸುರಕ್ಷತಾ ನಿಯಮಗಳ ಅಡಿಯಲ್ಲೇ ನಡೆಸಲಾಗುತ್ತದೆ. ಆದರೂ ಇಂತಹ ಅಪಘಾತ ಸಂಭವಿಸಿರುವುದು ಪಾಕಿಸ್ತಾನ ವಾಯುಪಡೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಪೈಲಟ್‌ಗಳು ಅತ್ಯಂತ ಅನುಭವಿಗಳಾಗಿದ್ದರಿಂದಲೇ ಸಮಯಪ್ರಜ್ಞೆ ಮೆರೆದು ಪ್ರಾಣ ಉಳಿಸಿಕೊಂಡಿದ್ದಾರೆ. ಒಂದು ವೇಳೆ ಅವರು ಹೊಸಬರಾಗಿದ್ದರೆ ಪರಿಸ್ಥಿತಿ ಇನ್ನಷ್ಟು ಭೀಕರವಾಗಿರುತ್ತಿತ್ತು ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನ ವಾಯುಪಡೆಗೆ ಮಿಯಾನ್ವಾಲಿ ವಾಯುನೆಲೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ದಶಕಗಳಿಂದಲೂ ದುರಸ್ವಪ್ನವಾಗಿ ಕಾಡುತ್ತಿವೆ. ಕಳೆದ 20 ವರ್ಷಗಳ ಇತಿಹಾಸವನ್ನು ಕೆದಕಿದರೆ, ಈ ಭಾಗದಲ್ಲಿ ಹತ್ತಾರು ಭೀಕರ ವಿಮಾನ ಅಪಘಾತಗಳು ನಡೆದಿರುವುದು ಬೆಳಕಿಗೆ ಬರುತ್ತದೆ. ವಿಶೇಷವಾಗಿ ಹಳೆಯ ಯುದ್ಧವಿಮಾನಗಳು ಮತ್ತು ತರಬೇತಿ ವಿಮಾನಗಳೇ ಇಲ್ಲಿ ಹೆಚ್ಚಾಗಿ ಪತನಗೊಳ್ಳುತ್ತಿವೆ.
ಇದಕ್ಕೆ ಮುಂಚೆ, ಜನವರಿ 2020 ರಲ್ಲಿ ಇದೇ ಮಿಯಾನ್ವಾಲಿಯ ಎಂ.ಎಂ. ಅಲಂ ವಾಯುನೆಲೆ ಬಳಿ ತರಬೇತಿ ನಿರತ FT-7 ವಿಮಾನವೊಂದು ಪತನಗೊಂಡು ಇಬ್ಬರು ಪೈಲಟ್‌ಗಳು ಸಜೀವ ದಹನವಾಗಿದ್ದರು. ಆ ಸಮಯದಲ್ಲಿ ಹೊರಬಂದ ವರದಿಗಳ ಪ್ರಕಾರ, ಕಳೆದ 18 ವರ್ಷಗಳಲ್ಲಿ ಬರೋಬ್ಬರಿ 14 ಕ್ಕೂ ಹೆಚ್ಚು FT-7 ವಿಮಾನಗಳು ಪಾಕಿಸ್ತಾನದಲ್ಲಿ ಅಪಘಾತಕ್ಕೀಡಾಗಿದ್ದವು.
ಹಾಗೆಯೇ, ಆಗಸ್ಟ್ 2017 ರಲ್ಲೂ ತಾಂತ್ರಿಕ ದೋಷದಿಂದಾಗಿ F-7 ಯುದ್ಧವಿಮಾನವೊಂದು ಮಿಯಾನ್ವಾಲಿ ಬಳಿ ಬಿದ್ದಿತ್ತು. ಆ ದುರಂತದಲ್ಲಿ ವಿಂಗ್ ಕಮಾಂಡರ್ ಮೊಹಮ್ಮದ್ ಶಹಜಾದ್ ಅವರಿಗೆ ವಿಮಾನದಿಂದ ಹೊರಜಿಗಿಯಲು ಸಾಧ್ಯವಾಗದೆ ಅವರು ಸಾವನ್ನಪ್ಪಿದ್ದರು. ಕಳೆದ ಹತ್ತು ವರ್ಷಗಳಲ್ಲಿಯೇ ಸುಮಾರು 10 ಎಫ್-7 ಪಿಜಿ ಮತ್ತು ಎಫ್‌ಟಿ-7 ವಿಮಾನಗಳು ಧ್ವಂಸಗೊಂಡಿವೆ.
ವಯಸ್ಸಾಗುತ್ತಿರುವ ವಿಮಾನಗಳು, ಹೆಚ್ಚುತ್ತಿರುವ ಆತಂಕ
ಕೇವಲ ಸಣ್ಣ ವಿಮಾನಗಳಷ್ಟೇ ಅಲ್ಲ, 2020 ರಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ ಪೂರ್ವಾಭ್ಯಾಸದ ವೇಳೆ ಪಾಕಿಸ್ತಾನದ ಹೆಮ್ಮೆಯ ಎಫ್-16 (F-16) ಯುದ್ಧವಿಮಾನ ಕೂಡ ಪತನಗೊಂಡು ದೊಡ್ಡ ಆಘಾತ ನೀಡಿತ್ತು. ರಕ್ಷಣಾ ತಜ್ಞರ ಪ್ರಕಾರ, ಪಾಕಿಸ್ತಾನ ವಾಯುಪಡೆಯಲ್ಲಿರುವ ಬಹುತೇಕ ವಿಮಾನಗಳು ಹಳೆಯದಾಗಿವೆ.
ನಿರಂತರ ಕಾರ್ಯಾಚರಣೆ, ಬಿಡಿಭಾಗಗಳ ಕೊರತೆ ಮತ್ತು ಕಳಪೆ ತಾಂತ್ರಿಕ ನಿರ್ವಹಣೆಯೇ ಈ ಸರಣಿ ಅಪಘಾತಗಳಿಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಸದ್ಯಕ್ಕೆ ಈ ಕೆ-8 ವಿಮಾನ ಪತನದ ತನಿಖೆಯ ವರದಿ ಬಂದ ನಂತರವಷ್ಟೇ ಪಾಕಿಸ್ತಾನದ ವಾಯುಪಡೆಯ ಅಸಲಿ ಕಥೆ ಏನೆಂಬುದು ಜಗತ್ತಿಗೆ ತಿಳಿಯಬೇಕಿದೆ, (ಏಜನ್ಸೀಸ್).