ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣದ ಚಿತ್ರ, ಟ್ರಂಪ್ ಹತ್ಯೆ ಸಂಚು ಪ್ರಕರಣದಲ್ಲಿ ಪಾಕಿಸ್ತಾನಿ ಪ್ರಜೆಗೆ 27.5 ವರ್ಷ ಜೈಲು ಶಿಕ್ಷೆ 
ವಿದೇಶ

ಡೊನಾಲ್ಡ್ ಟ್ರಂಪ್ ಹತ್ಯೆ ಸಂಚು: ಇರಾನ್ ಪರ ಕೆಲಸ ಮಾಡಿದ್ದ ಪಾಕಿಸ್ತಾನಿ ಏಜೆಂಟ್‌ಗೆ 27.5 ವರ್ಷಗಳ ಜೈಲು ಶಿಕ್ಷೆ ಪ್ರಕಟ! Asif Merchant

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಸರ್ಕಾರದ ಉನ್ನತ ಅಧಿಕಾರಿಗಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಪಾಕಿಸ್ತಾನಿ ಪ್ರಜೆ ಆಸಿಫ್ ಮರ್ಚಂಟ್​ಗೆ ಅಮೆರಿಕದ ಫೆಡರಲ್ ನ್ಯಾಯಾಲಯವು ಬರೋಬ್ಬರಿ 27.5 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪರವಾಗಿ ಈ ಭಯೋತ್ಪಾದಕ ಕೃತ್ಯಕ್ಕೆ ಮುಂದಾಗಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಬ್ರೂಕ್ಲಿನ್‌ನ ಜಿಲ್ಲಾ ನ್ಯಾಯಾಧೀಶ ಎರಿಕ್ ಆರ್. ಕೊಮಿಟಿ ಈ ಐತಿಹಾಸಿಕ ತೀರ್ಪು ಪ್ರಕಟಿಸಿದ್ದಾರೆ.

ಸೊಲೈಮಾನಿ ಹತ್ಯೆಗೆ ಪ್ರತೀಕಾರದ ಸಂಚು!

2020 ರ ಜನವರಿಯಲ್ಲಿ ಅಮೆರಿಕದ ಡ್ರೋನ್ ದಾಳಿಯಲ್ಲಿ ಹತ್ಯೆಗೀಡಾದ ಇರಾನ್ ಸೇನಾ ಕಮಾಂಡರ್ ಖಾಸೆಮ್ ಸೊಲೈಮಾನಿ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಈ ಸಂಚು ರೂಪಿಸಲಾಗಿತ್ತು ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿದೆ.

ಅಧ್ಯಕ್ಷ ಟ್ರಂಪ್ ಹತ್ಯೆಗೆ ಸಂಚು ರೂಪಿಸಲು ಅಮೆರಿಕಕ್ಕೆ ಬಂದಿದ್ದ ಇರಾನ್ ಏಜೆಂಟ್‌ಗೆ ನ್ಯಾಯಯುತ ಶಿಕ್ಷೆಯಾಗಿದೆ. ನಮ್ಮ ನಾಯಕರ ವಿರುದ್ಧದ ವಿದೇಶಿ ಭಯೋತ್ಪಾದಕ ಸಂಚುಗಳನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದು ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ ಎಚ್ಚರಿಕೆ ನೀಡಿದ್ದಾರೆ.

ಇರಾನ್‌ನಲ್ಲಿ ತರಬೇತಿ ಪಡೆದ ಪಾಕಿಸ್ತಾನಿ!

ತನಿಖೆಯ ಪ್ರಕಾರ, 2022ರಲ್ಲಿ ಧಾರ್ಮಿಕ ಯಾತ್ರೆಯ ನೆಪದಲ್ಲಿ ಇರಾನ್‌ಗೆ ಭೇಟಿ ನೀಡಿದ್ದ ಆಸಿಫ್ ಮರ್ಚಂಟ್, ಸಂಬಂಧಿಕರ ಮೂಲಕ IRGC ಅಧಿಕಾರಿ ಯೂಸೆಫ್ ಮೆರ್ಹರ್ದಾದ್ ಪರಿಚಯ ಮಾಡಿಕೊಂಡಿದ್ದನು.

2023ರಿಂದ ಒಂದೂವರೆ ವರ್ಷದ ಅವಧಿಯಲ್ಲಿ ಟೆಹ್ರಾನ್‌ಗೆ 15 ಬಾರಿ ಭೇಟಿ ನೀಡಿದ್ದ ಮರ್ಚಂಟ್, ಅಲ್ಲಿ ಗುಪ್ತಚರ ತಂತ್ರಗಳ ತರಬೇತಿ ಪಡೆದಿದ್ದನು. ಅಮೆರಿಕದ ರಾಜಕೀಯ ಸಮಾವೇಶವೊಂದರಲ್ಲಿ ಸ್ಥಳೀಯ ಮಾಫಿಯಾ ಅಥವಾ ಬಾಡಿಗೆ ಹಂತಕರನ್ನು ಬಳಸಿ ಟ್ರಂಪ್ ಅವರನ್ನು ಹತ್ಯೆ ಮಾಡುವುದು ಈತನ ಮುಖ್ಯ ಗುರಿಯಾಗಿತ್ತು.

FBI ಬಲೆಗೆ ಬಿದ್ದಿದ್ದು ಹೇಗೆ?

2024 ರ ಏಪ್ರಿಲ್‌ನಲ್ಲಿ ಅಮೆರಿಕಕ್ಕೆ ಬಂದಿಳಿದ ಮರ್ಚಂಟ್, ಹತ್ಯೆಯ ಸಂಚಿಗೆ ಸಹಾಯ ಪಡೆಯಲು ಪರಿಚಯಸ್ಥರೊಬ್ಬರನ್ನು ಸಂಪರ್ಕಿಸಿದ್ದನು. ಆದರೆ ಆ ವ್ಯಕ್ತಿ ತಕ್ಷಣವೇ ಎಫ್‌ಬಿಐಗೆ ಮಾಹಿತಿ ನೀಡಿದ್ದರಿಂದ, ಅಮೆರಿಕದ ಗುಪ್ತಚರ ಇಲಾಖೆ ಮರ್ಚಂಟ್ ಸುತ್ತ ಬಲೆ ಹೆಣೆಯಿತು.

5,000 ಡಾಲರ್ ಮುಂಗಡ ಹಣ: ತಾನು ಬಾಡಿಗೆ ಹಂತಕರು ಎಂದು ಭಾವಿಸಿ ಮರ್ಚಂಟ್ ಮೂರು ಬಾರಿ ಭೇಟಿಯಾದ ವ್ಯಕ್ತಿಗಳು ವಾಸ್ತವದಲ್ಲಿ ಎಫ್‌ಬಿಐನ ಏಜೆಂಟರಾಗಿದ್ದರು. ರಾಜಕಾರಣಿಯೊಬ್ಬರ ಹತ್ಯೆಗಾಗಿ ವಿದೇಶದ ಸಂಬಂಧಿಕರಿಂದ ತರಿಸಿದ್ದ 5,000 ಅಮೆರಿಕನ್ ಡಾಲರ್‌ಗಳನ್ನು ಆತ ಮುಂಗಡವಾಗಿ ನೀಡಿದ್ದನು.

ವಿಮಾನ ನಿಲ್ದಾಣದಲ್ಲಿ ಬಂಧನ: ಅಮೆರಿಕದಿಂದ ಪರಾರಿಯಾಗಲು ಸಿದ್ಧನಾಗಿದ್ದ ಮರ್ಚಂಟ್‌ನನ್ನು ಜುಲೈ 12, 2026 ರಂದು ಟೆಕ್ಸಾಸ್‌ನ ರಿಚ್‌ಮಂಡ್‌ನಲ್ಲಿ ಬಂಧಿಸಲಾಯಿತು. ಆತನ ಲ್ಯಾಪ್‌ಟಾಪ್ ಮತ್ತು ಫೋನ್‌ಗಳಲ್ಲಿ ನ್ಯೂಜೆರ್ಸಿಯ ಟ್ರಂಪ್ ಪ್ರಚಾರ ರ‍್ಯಾಲಿಯ ಗೂಗಲ್ ಮ್ಯಾಪ್ ಹುಡುಕಾಟ ಹಾಗೂ ಸೊಲೈಮಾನಿಯನ್ನು ಹೊಗಳುವ ಪೋಸ್ಟ್‌ಗಳು ಪತ್ತೆಯಾಗಿದ್ದವು.

ಮಾರ್ಚ್ 2026 ರಲ್ಲಿ ತೀರ್ಪುಗಾರರ ಮಂಡಳಿಯಿಂದ ತಪ್ಪಿತಸ್ಥನೆಂದು ಘೋಷಿಸಲ್ಪಟ್ಟಿದ್ದ ಮರ್ಚಂಟ್‌ಗೆ ಇದೀಗ 27.5 ವರ್ಷಗಳ ಜೈಲು ಶಿಕ್ಷೆಯಾಗಿದ್ದು, ಅಮೆರಿಕದ ವಿರುದ್ಧ ಸಂಚು ರೂಪಿಸುವ ವಿದೇಶಿ ಶಕ್ತಿಗಳಿಗೆ ಇದು ಕಠಿಣ ಎಚ್ಚರಿಕೆಯಾಗಿದೆ ಎಂದು ನ್ಯಾಯಾಂಗ ಇಲಾಖೆ ಬಣ್ಣಿಸಿದೆ, (ಏಜೆನ್ಸೀಸ್).