ಒಪ್ಪಂದ ಮುರಿದು ಬಿದ್ದರೆ ಇರಾನ್ ಮೇಲೆ ದಾಳಿ ಮಾಡುವುದಾಗಿ ಟ್ರಂಪ್ ಬೆದರಿಕೆ
- ಮಧ್ಯಪ್ರಾಚ್ಯದ ಯುದ್ಧದಲ್ಲಿ ಕದನ ವಿರಾಮ ಘೋಷಣೆ
- ಇಸ್ಲಾಮಾಬಾದ್ನಲ್ಲಿ ಶಾಂತಿ ಮಾತುಕತೆ
- ಒಪ್ಪಂದ ಮುರಿದು ಬಿದ್ದರೆ ಇರಾನ್ ಮೇಲೆ ದಾಳಿ ಮಾಡುವುದಾಗಿ ಟ್ರಂಪ್ ಬೆದರಿಕೆ
- ಅಮೆರಿಕ ಈ ಹೇಳಿಕೆಯಿಂದ ಅಡಕತ್ತರಿಯಲ್ಲಿ ಸಿಲುಕಿದ ಪಾಕಿಸ್ತಾನ
ವಾಷಿಂಗ್ಟನ್: ಕಳೆದೊಂದು ತಿಂಗಳಿನಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿದ್ದ ಸಂಘರ್ಷವನ್ನು ಶಾಂತಿಯುತವಾಗಿ ಕೊನೆಗಾಣಿಸಲು, ಅಮೆರಿಕ ಮತ್ತು ಇರಾನ್ ಶಾಂತಿ ಸ್ಥಾಪನಾ ನಿಯೋಗವು ಶನಿವಾರ (ಏ.11) ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ತಲುಪಿದೆ.
ಸದ್ಯ 14 ದಿನಗಳ ಕದನ ವಿರಾಮವನ್ನು ಘೋಷಿಸಿರುವ ಅಮೆರಿಕಾದ ಮುಂದೆ ಇರಾನ್ ತನ್ನ 10 ಷರತ್ತುಗಳನ್ನು ತಿಳಿಸಿದೆ. ಆದರೆ ಈ ಶಾಂತಿ ಒಪ್ಪಂದ ಮುರಿದು ಬಿದ್ದರೆ ಮುಂದೇನು? ಎಂಬ ಪ್ರಶ್ನೆ ಜಾಗತಿಕ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಒಪ್ಪಂದ ಮುರಿದು ಬಿದ್ದರೆ ಮುಂದೇನು?
ಅಮೆರಿಕ-ಇರಾನ್ ಮಾತುಕತೆ ವಿಫಲವಾದರೆ ಅಥವಾ ಟೆಹ್ರಾನ್ ಹೊರ್ಮುಜ್ ಜಲಸಂಧಿಯನ್ನು ತೆರೆಯಲು ನಿರಾಕರಿಸಿದರೆ ವಾಷಿಂಗ್ಟನ್‌ಗೆ ಬ್ಯಾಕಪ್ ಯೋಜನೆ ಸಿದ್ಧವಾಗಿದೆಯೇ ಎಂದು ಕೇಳಿದಾಗ, ಅಧ್ಯಕ್ಷ ಟ್ರಂಪ್ (Donald Trump Warning), ಬ್ಯಾಕಪ್ ಯೋಜನೆಯ ಅಗತ್ಯವಿಲ್ಲ. ನಾವು ಅವರ ಸೇನೆಯನ್ನು ಈಗಾಗಲೇ ಸೋಲಿಸಿದ್ದೆವೆ.
ಅವರ ಬಳಿ ಬಹಳ ಕಡಿಮೆ ಕ್ಷಿಪಣಿಗಳು ಮತ್ತು ಬಹಳ ಸೀಮಿತ ಉತ್ಪಾದನಾ ಸಾಮರ್ಥ್ಯವಿದೆ. ನಾವು ಅವರಿಗೆ ಭಾರಿ ಹೊಡೆತ ನೀಡಿದ್ದೇವೆ. ನಮ್ಮ ಸೇನೆ ಎಲ್ಲಾ ರೀತಿಯಲ್ಲಿ ಸಶಕ್ತವಾಗಿದೆ ಆದ್ದರಿಂದ ಈ ಶಾಂತಿ ಒಪ್ಪಂದ ಇರಾನಿನ ಒಳಿತಿಗಾಗಿ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ವರದಿಗಳ ಪ್ರಕಾರ, ಅಮೆರಿಕ ಮಧ್ಯಪ್ರಾಚ್ಯದಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸಿದೆ, ಆದರೆ ಎರಡು ವಾರಗಳ ಕದನ ವಿರಾಮವು ವಾರಗಳ ಹೋರಾಟದ ನಂತರ ಗಲ್ಫ್ ಪ್ರದೇಶಕ್ಕೆ ಶಾಂತಿಯ ಕ್ಷಣವನ್ನು ತಂದಿದೆ ಎನ್ನುವುದು ಅಂತರಾಷ್ಟ್ರೀಯ ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ.
ಇಸ್ಲಾಮಾಬಾದ್ ತಲುಪಿದ ಜೆ.ಡಿ.ವ್ಯಾನ್ಸ್
ಇತ್ತೀಚೆಗೆ ದೊರೆತ ಮಾಹಿತಿಗಳ ಪ್ರಕಾರ ಅಮೆರಿಕದ ಶಾಂತಿ ಸ್ಥಾಪನಾ ನಿಯೋಗದ ಮುಖ್ಯಸ್ಥನಾಗಿ ದೇಶದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಪಾಕಿಸ್ತಾನವನ್ನು ತಲುಪಿದ್ದಾರೆ. ವಿಮಾನವನ್ನು ಏರುವ ಮುನ್ನ ಏರ್ಪೋರ್ಟ್ನಲ್ಲಿ ಮಾತನಾಡಿದ ಅವರು, ಇರಾನ್ ಶಾಂತಿ ಒಪ್ಪಂದವನ್ನು ಶಾಂತಯುತವಾಗಿ ನಡೆಸದಿದ್ದರೆ, ನಾವು ಅವರ ಯಾವುದೇ ಷರತ್ತನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.
ಇರಾನಿನ ನಿಯೋಗವನ್ನು ಸ್ವಾಗತಿಸಿದ ಸೇನಾ ಮುಖ್ಯಸ್ಥ
ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ನೇತೃತ್ವದ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಗ್ಚಿ ಸೇರಿದಂತೆ ಇರಾನ್ ನಿಯೋಗ ಶನಿವಾರ (ಏ.11) ಬೆಳಿಗ್ಗೆ ಇಸ್ಲಾಮಾಬಾದ್‌ಗೆ ಆಗಮಿಸಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಅವರನ್ನು ಪಾಕಿಸ್ತಾನ ಸಚಿವ ಇಶಾಕ್ ದಾರ್ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಬರಮಾಡಿಕೊಂಡಿದ್ದಾರೆ, (ಏಜನ್ಸೀಸ್).