ಎನ್‌ವಿಡಿಯಾ ಸಂಸ್ಥೆಯ ಸಹ-ಸಂಸ್ಥಾಪಕ ಮತ್ತು ಸಿಇಒ ಜೆನ್ಸೆನ್ ಹುವಾಂಗ್  
ವಿದೇಶ

ನನ್ನ ಹೆಂಡ್ತಿಗೆ ಮೋಸ ಮಾಡಿದೆ...ಚೀನಾದ ಸ್ಪೈ ಜತೆ ಅಕ್ರಮ ಸಂಬಂಧ, ತಪ್ಪೊಪ್ಪಿಕೊಂಡು ಕಣ್ಣೀರಿಟ್ಟ Nvidia ಸಿಇಒ! Jensen Huang

ಚೀನಾದ ಗೂಢಚಾರಿ ಸಂಸ್ಥೆಗೆ ಸಹಾಯ ಮಾಡುತ್ತಿದ್ದಾರೆ ಎನ್ನಲಾದ ಚೀನೀ ಮೂಲದ ಉದ್ಯಮಿ ಆಲಿಸ್ ಹುವಾಂಗ್ (Alice Huang) ಜತೆ ಜೆನ್ಸೆನ್ ಹುವಾಂಗ್ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿವೆ.

ವಾಷಿಂಗ್ಟನ್​: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಹಾಗೂ ಪ್ರೊಸೆಸರ್ ಚಿಪ್ ನಿರ್ಮಾಣ ಕ್ಷೇತ್ರದಲ್ಲಿ ಇಡೀ ವಿಶ್ವದಲ್ಲೇ ಅಗ್ರಸ್ಥಾನದಲ್ಲಿರುವ ಎನ್‌ವಿಡಿಯಾ (Nvidia) ಸಂಸ್ಥೆಯ ಸಹ-ಸಂಸ್ಥಾಪಕ ಮತ್ತು ಸಿಇಒ ಜೆನ್ಸೆನ್ ಹುವಾಂಗ್ ( Jensen Huang ), ಚೀನಾ ಗೂಢಚಾರಿಣಿ ಎಂದು ಶಂಕಿಸಲಾದ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾಗಿ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಈ ಒಂದು ಬೆಳವಣಿಗೆಯು ಜಾಗತಿಕ ಟೆಕ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ನನ್ನ ಈ ನಡೆಯನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ ಮತ್ತು ನಾನು ಮಾಡಿದ ದೊಡ್ಡ ತಪ್ಪು ಇದು ಎಂದು 63 ವರ್ಷದ ಜೆನ್ಸೆನ್​ ಹುವಾಂಗ್​ ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕಂಪನಿಯ ಉದ್ಯೋಗಿಗಳಿಗೆ ಕಳುಹಿಸಿದ ಭಾವನಾತ್ಮಕ ಸಂದೇಶದಲ್ಲಿ ತಮ್ಮ ಹೆಂಡತಿ ಹಾಗೂ ಮಕ್ಕಳಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಮೂಲಗಳ ಪ್ರಕಾರ, ಚೀನಾದ ಗೂಢಚಾರಿ ಸಂಸ್ಥೆಗೆ ಸಹಾಯ ಮಾಡುತ್ತಿದ್ದಾರೆ ಎನ್ನಲಾದ ಚೀನೀ ಮೂಲದ ಉದ್ಯಮಿ ಆಲಿಸ್ ಹುವಾಂಗ್ (Alice Huang) ಜತೆ ಜೆನ್ಸೆನ್ ಹುವಾಂಗ್ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿವೆ. ಈ ವಿಷಯವು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ, ಎನ್‌ವಿಡಿಯಾ ಕಂಪನಿಯ ಆಡಳಿತ ಮಂಡಳಿಯು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ವತಂತ್ರ ತನಿಖೆಗೆ ಆದೇಶಿಸಿದೆ. ಅಮೆರಿಕದ ಅತ್ಯಂತ ಮೌಲ್ಯಯುತ ಚಿಪ್ ತಯಾರಿಕಾ ಸಂಸ್ಥೆಯ ಮುಖ್ಯಸ್ಥರೇ ಇಂತಹ ವಿದೇಶಿ ಗೂಢಚರ್ಯೆ ಜಾಲದಲ್ಲಿ ಸಿಲುಕಿರುವುದು ಇಡೀ ಟೆಕ್ ಉದ್ಯಮವನ್ನೇ ಬೆಚ್ಚಿಬೀಳಿಸಿದೆ.

ನಂಬಿಕೆ ಮತ್ತೆ ಗಳಿಸುತ್ತೇನೆ

ಉದ್ಯೋಗಿಗಳನ್ನು ಉದ್ದೇಶಿಸಿ ಬರೆದಿರುವ ಸಂದೇಶದಲ್ಲಿ ಜೆನ್ಸೆನ್ ಹುವಾಂಗ್, "ನನ್ನ ನಡವಳಿಕೆಯಿಂದ ನನ್ನ ಕುಟುಂಬ, ಕಂಪನಿಯ ಆಡಳಿತ ಮಂಡಳಿ, ಉದ್ಯೋಗಿಗಳು ಹಾಗೂ ಷೇರುದಾರರ ನಂಬಿಕೆಗೆ ಧಕ್ಕೆಯಾಗಿದೆ. ನನ್ನ ಜವಾಬ್ದಾರಿಯನ್ನು ಪೂರೈಸುವಲ್ಲಿ ನಾನು ವಿಫಲನಾಗಿದ್ದೇನೆ. ಆದರೆ, ಎನ್‌ವಿಡಿಯಾ ಸಂಸ್ಥೆಗೆ ನಾನು ಸಂಪೂರ್ಣವಾಗಿ ಬದ್ಧನಾಗಿದ್ದು, ನಿಮ್ಮ ನಂಬಿಕೆಯನ್ನು ಮತ್ತೆ ಗಳಿಸಲು ಶ್ರಮಿಸುತ್ತೇನೆ" ಎಂದು ಹೇಳಿದ್ದಾರೆ. 1993ರಲ್ಲಿ ಸಂಸ್ಥೆಯನ್ನು ಸ್ಥಾಪಿಸಿ ಮೂರು ದಶಕಗಳಿಗೂ ಹೆಚ್ಚು ಕಾಲ ಯಶಸ್ವಿಯಾಗಿ ಉದ್ಯಮವನ್ನು ಮುನ್ನಡೆಸಿದ ನಾಯಕನೊಬ್ಬ ಈ ರೀತಿ ವೈಯಕ್ತಿಕ ಜೀವನದಲ್ಲಿ ತಾನು ಮಾಡಿದ ತಪ್ಪಿನಿಂದಾಗಿ ಕ್ಷಮೆಯಾಚಿಸುವ ಸ್ಥಿತಿ ಬಂದೊದಗಿದೆ.

ಈ ಹನಿಟ್ರ್ಯಾಪ್​ ಅಥವಾ ಗೂಢಚರ್ಯೆಯ ಪ್ರಮುಖ ಸೂತ್ರಧಾರಿ ಎನ್ನಲಾದ ಆಲಿಸ್ ಹುವಾಂಗ್, ಸಿಂಗಾಪುರ ಮೂಲದ 'ಮೆಗಾಸ್ಪೀಡ್​' (Megaspeed) ಎಂಬ ಡೇಟಾ ಸೆಂಟರ್ ಕಂಪನಿಯೊಂದಿಗೆ ಸಂಪರ್ಕ ಹೊಂದಿದ್ದರು. ಅಮೆರಿಕವು ಚೀನಾಗೆ ಅತ್ಯಾಧುನಿಕ ಎಐ ಚಿಪ್‌ಗಳನ್ನು ಮಾರಾಟ ಮಾಡುವುದರ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಿದೆ. ಆದರೆ, ಮೆಗಾಸ್ಪೀಡ್​ ಕಂಪನಿಯ ಮೂಲಕ ಎನ್‌ವಿಡಿಯಾದ ಅತ್ಯಾಧುನಿಕ ಚಿಪ್‌ಗಳನ್ನು ಚೀನಾಗೆ ತಲುಪಿಸಲು ಹಾಗೂ ಅಮೆರಿಕದ ತಂತ್ರಜ್ಞಾನ ರಹಸ್ಯಗಳನ್ನು ಕದಿಯಲು ಆಲಿಸ್ ಹುವಾಂಗ್ ಯತ್ನಿಸುತ್ತಿದ್ದರು ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಶಂಕಿಸಿವೆ.

ವಿಚಾರಣೆ ಬುಲಾವ್​

ಅಮೆರಿಕದ ದಿ ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಆಲಿಸ್ ಹುವಾಂಗ್ ಚೀನಾದ ಬೀಜಿಂಗ್ ಸರ್ಕಾರಕ್ಕಾಗಿ ಗೂಢಚರ್ಯೆ ನಡೆಸುತ್ತಿದ್ದಾರೆ ಎಂಬ ಮಾಹಿತಿಯನ್ನು ಅಮೆರಿಕದ ಗುಪ್ತಚರ ವಿಭಾಗವು ಕಳೆದ ವರ್ಷವೇ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಿಳಿಸಿತ್ತು. ಈ ವಿಷಯ ಈಗ ಬಹಿರಂಗವಾಗುತ್ತಿದ್ದಂತೆ ಅಮೆರಿಕ ಸಂಸತ್ತಿನ (ಕಾಂಗ್ರೆಸ್) ಹಿರಿಯ ನಾಯಕರು ಜೆನ್ಸೆನ್​ ಹುವಾಂಗ್ ಅವರನ್ನು ವಿಚಾರಣೆಗೆ ಕರೆಸಲು ನಿರ್ಧರಿಸಿದ್ದಾರೆ. ಚೀನಾಗೆ ಯಾವುದೇ ರೀತಿಯ ರಹಸ್ಯ ತಂತ್ರಜ್ಞಾನ ಲೀಕ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಮೆರಿಕದ ಜನಪ್ರತಿನಿಧಿಗಳ ಸಭೆ ತೀವ್ರ ಆತಂಕ ವ್ಯಕ್ತಪಡಿಸಿದೆ.

ತನಿಖೆ ಆರಂಭಿಸಿದ ಎನ್​ವಿಡಿಯಾ

ಈ ಎಲ್ಲ ಬೆಳವಣಿಗೆಗಳ ನಡುವೆ, ಎನ್‌ವಿಡಿಯಾ ಕಂಪನಿಯ ಆಡಳಿತ ಮಂಡಳಿಯು ತಕ್ಷಣವೇ ಸ್ವತಂತ್ರ ನಿರ್ದೇಶಕರ ಸಮಿತಿಯನ್ನು ರಚಿಸಿದ್ದು, ಕಾನೂನು ತಜ್ಞರ ನೆರವಿನೊಂದಿಗೆ ಆಂತರಿಕ ತನಿಖೆ ಆರಂಭಿಸಿದೆ. ಕಂಪನಿಯ ಯಾವುದೇ ತಾಂತ್ರಿಕ ರಹಸ್ಯಗಳು ಅಥವಾ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರಗಳು ದುರುಪಯೋಗವಾಗಿವೆ ಎಂಬುದಕ್ಕೆ ಸದ್ಯಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆಯಾದರೂ, ಸತ್ಯಾಸತ್ಯತೆ ತಿಳಿಯಲು ಸಂಪೂರ್ಣ ತನಿಖೆ ನಡೆಸುವುದಾಗಿ ಹೇಳಿದೆ. ಈ ತನಿಖೆಗೆ ಸಿಇಒ ಜೆನ್ಸೆನ್ ಹುವಾಂಗ್ ಕೂಡ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ಜೆನ್ಸೆನ್​ ಪರ ಬ್ಯಾಟ್​ ಬೀಸಿದ ಟ್ರಂಪ್​

ಮತ್ತೊಂದೆಡೆ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಚಾರದಲ್ಲಿ ಜೆನ್ಸೆನ್ ಹುವಾಂಗ್ ಪರ ವಹಿಸಿ ಮಾತನಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, "ಜೆನ್ಸೆನ್ ಒಬ್ಬ ಅತ್ಯುತ್ತಮ ಮತ್ತು ಗೌರವಾನ್ವಿತ ವ್ಯಕ್ತಿ. ನಮ್ಮ ದೇಶಕ್ಕಾಗಿ ಅವರು ಅದ್ಭುತ ಕೆಲಸ ಮಾಡಿದ್ದಾರೆ. ಆದರೆ, ವೈಯಕ್ತಿಕವಾಗಿ ಏನು ನಡೆಯುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ" ಎಂದು ಹುವಾಂಗ್‌ಗೆ ಬೆಂಬಲ ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ, ಕಳೆದ ವರ್ಷ ಗುಪ್ತಚರ ಮಾಹಿತಿ ಬಂದಾಗ ತಕ್ಷಣ ಕ್ರಮ ಕೈಗೊಳ್ಳದಿರುವ ಬಗ್ಗೆ ತಮಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದೂ ಟ್ರಂಪ್ ಹೇಳಿದ್ದಾರೆ.

ಇದೇ ವೇಳೆ, ಚೀನಾ ಸರ್ಕಾರ ತನ್ನ ಮೇಲಿನ ಎಲ್ಲಾ ಬೇಹುಗಾರಿಕೆ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. ಅಮೆರಿಕ ಸರ್ಕಾರ ಮತ್ತು ಮಾಧ್ಯಮಗಳು ಆಧಾರರಹಿತ ಕಲ್ಪನೆಗಳ ಮೂಲಕ ಚೀನಾದ ಹೆಸರು ಕೆಡಿಸಲು ಯತ್ನಿಸುತ್ತಿವೆ ಎಂದು ಬೀಜಿಂಗ್ ತಿರುಗೇಟು ನೀಡಿದೆ. ಆದಾಗ್ಯೂ, ಚೀನಾ ಮತ್ತು ಅಮೆರಿಕ ನಡುವೆ ತಂತ್ರಜ್ಞಾನ ಸಮರ ತೀವ್ರಗೊಂಡಿರುವ ಈ ಸಮಯದಲ್ಲಿ ಈ ಪ್ರಕರಣ ಮುಂಚೂಣಿಗೆ ಬಂದಿರುವುದು ಜಾಗತಿಕ ರಾಜಕೀಯದಲ್ಲೂ ಸಂಚಲನ ಮೂಡಿಸಿದೆ.

ಅಂದಹಾಗೆ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಎನ್‌ವಿಡಿಯಾ ಕಂಪನಿಗೆ ಈ ವಿವಾದ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಓಪನ್‌ಎಐ (OpenAI), ಮೆಟಾ (Meta) ನಂತಹ ದೈತ್ಯ ಕಂಪನಿಗಳು ಎನ್‌ವಿಡಿಯಾದ ಚಿಪ್‌ಗಳನ್ನೇ ನೆಚ್ಚಿಕೊಂಡಿವೆ. ಪ್ರಸ್ತುತ ಸುಮಾರು 4.5 ಟ್ರಿಲಿಯನ್ ಡಾಲರ್ ಮೌಲ್ಯ ಹೊಂದಿರುವ ಎನ್‌ವಿಡಿಯಾ ಸಂಸ್ಥೆಯ ಷೇರುಗಳು, ಈ ಆಘಾತಕಾರಿ ಸುದ್ದಿಯಿಂದಾಗಿ ಷೇರು ಮಾರುಕಟ್ಟೆಯಲ್ಲಿ ಕುಸಿತ ಕಾಣುವ ಭೀತಿಗೆ ಸಿಲುಕಿವೆ. ಹೂಡಿಕೆದಾರರಲ್ಲಿಯೂ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಕಂಪನಿಯ ಭವಿಷ್ಯ ಮತ್ತು ತಂತ್ರಜ್ಞಾನದ ತಂತ್ರಗಾರಿಕೆಯಲ್ಲಿ ಜೆನ್ಸೆನ್ ಹುವಾಂಗ್ ಅವರ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಒಂದು ವೇಳೆ ಆಂತರಿಕ ತನಿಖೆಯಲ್ಲಿ ಕಂಪನಿಯ ಭದ್ರತೆಗೆ ಧಕ್ಕೆಯಾಗಿರುವುದು ಸಾಬೀತಾದರೆ, ಹುವಾಂಗ್ ಸಿಇಒ ಹುದ್ದೆ ತೊರೆಯಬೇಕಾಗಿ ಬರಬಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಇದು ಎನ್‌ವಿಡಿಯಾ ಕಂಪನಿಯ ಷೇರು ಮೌಲ್ಯದ ಮೇಲೆ ಹಾಗೂ ಇಡೀ ಜಾಗತಿಕ ಎಐ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ, (ಏಜೆನ್ಸೀಸ್​).