ಸಾಲದ ಸುಳಿಯಲ್ಲಿ ಪಾಕಿಸ್ತಾನ; 10 ವರ್ಷಗಳಲ್ಲಿ ವಿದೇಶಿ ಲೋನ್​ ದುಪ್ಪಟ್ಟು

ಸಾಲದ ಸುಳಿಯಲ್ಲಿ ಪಾಕಿಸ್ತಾನ; 10 ವರ್ಷಗಳಲ್ಲಿ ವಿದೇಶಿ ಲೋನ್​ ದುಪ್ಪಟ್ಟು
Published on: 

ಆರ್ಥಿಕ ಬಿಕ್ಕಟ್ಟು, ಹಣದುಬ್ಬರ, ವಿದೇಶಿ ವಿನಿಮಯ ಕೊರತೆ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ನೆರವಿನ ಮೇಲೆ ಅವಲಂಬನೆ... ಇವು ಪಾಕಿಸ್ತಾನದ ಆರ್ಥಿಕತೆಯನ್ನು ಹಲವು ವರ್ಷಗಳಿಂದ ಕಾಡುತ್ತಿರುವ ಸಮಸ್ಯೆಗಳು. ಇದೀಗ ವಿಶ್ವಬ್ಯಾಂಕ್​ನ ಹೊಸ ವರದಿ ಮತ್ತೊಂದು ಆತಂಕಕಾರಿ ಚಿತ್ರಣವನ್ನು ತೆರೆದಿಟ್ಟಿದೆ. 2015ರಲ್ಲಿ 6.46 ಲಕ್ಷ ಕೋಟಿ ರೂ. ಇದ್ದ ಪಾಕಿಸ್ತಾನದ ವಿದೇಶಿ ಸಾಲ 2025ರ ಅಂತ್ಯಕ್ಕೆ 12.71 ಲಕ್ಷ ಕೋಟಿ ರೂ.ಗೆ ಏರಿದೆ. ಅಂದರೆ ಒಂದು ದಶಕದಲ್ಲಿ ಸಾಲದ ಮೊತ್ತ ಸುಮಾರು ಶೇ. 97ರಷ್ಟು ಹೆಚ್ಚಾಗಿದೆ.

ಪಾಕಿಸ್ತಾನ ಅತಿ ಹೆಚ್ಚು ಸಾಲ ಪಡೆದಿರುವುದು ಚೀನಾದಿಂದಲೇ. ಆ ರಾಷ್ಟ್ರದಿಂದ ಪಡೆದ 2.11 ಲಕ್ಷ ಕೋಟಿ ರೂ. ಸಾಲವನ್ನು ಪಾಕಿಸ್ತಾನ ಇನ್ನೂ ಬಾಕಿ ಉಳಿಸಿಕೊಂಡಿದೆ. ವಿಶ್ವಬ್ಯಾಂಕ್ ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್​ಗಳಿಗೂ ಪಾಕಿಸ್ತಾನ ದೊಡ್ಡ ಮೊತ್ತವನ್ನು ಮರುಪಾವತಿಸಬೇಕಿದೆ. ಸಾಲ ಪಡೆಯುವುದಷ್ಟೇ ಅಲ್ಲ; ಅದನ್ನು ಯಾವ ಬಡ್ಡಿ ದರಕ್ಕೆ ಪಡೆಯಲಾಗಿದೆ, ಯಾವ ಅವಧಿಯಲ್ಲಿ ಮರುಪಾವತಿಸಬೇಕು ಮತ್ತು ಅದರಿಂದ ದೇಶದ ರಫ್ತು ಆದಾಯದ ಮೇಲೆ ಎಷ್ಟು ಒತ್ತಡ ಬೀಳುತ್ತದೆ ಎಂಬುದೂ ಮುಖ್ಯ. ಪಾಕಿಸ್ತಾನದ ಸಾಲದ ಸ್ವರೂಪ, ಚೀನಾದ ಪ್ರಭಾವ ಮತ್ತು ಆರ್ಥಿಕತೆಯ ಮುಂದಿರುವ ಸವಾಲುಗಳ ಅವಲೋಕನ ಇಲ್ಲಿದೆ.

6.46ರಿಂದ 12.71 ಲಕ್ಷ ಕೋಟಿ ರೂ.ಗೆ

ವಿಶ್ವಬ್ಯಾಂಕ್​ನ ಅಂತಾರಾಷ್ಟ್ರೀಯ ಸಾಲ ವರದಿ 2026 ಪ್ರಕಾರ, 2015ರಲ್ಲಿ ಪಾಕಿಸ್ತಾನದ ಒಟ್ಟು ವಿದೇಶಿ ಸಾಲ 6.46 ಲಕ್ಷ ಕೋಟಿ ರೂ. ಇತ್ತು. 2025ರ ಅಂತ್ಯಕ್ಕೆ ಅದು 12.71 ಲಕ್ಷ ಕೋಟಿ ರೂ.ಗೆ ತಲುಪಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2025ರಲ್ಲಿ ಸಾಲದ ಮೊತ್ತ ಶೇ. 4ರಷ್ಟು ಹೆಚ್ಚಾಗಿದೆ. ಒಂದು ದಶಕದ ಅವಧಿಯಲ್ಲಿ ಸಾಲ ಬಹುತೇಕ ದುಪ್ಪಟ್ಟಾಗಿರುವುದು ಆ ದೇಶದ ಆರ್ಥಿಕ ನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಮೊತ್ತದಲ್ಲಿ ಸಾರ್ವಜನಿಕ ಮತ್ತು ಸರ್ಕಾರದ ಖಾತ್ರಿಯಿರುವ ಸಾಲ 10.08 ಲಕ್ಷ ಕೋಟಿ ರೂ. ಖಾಸಗಿ ವಲಯದ ಸರ್ಕಾರದ ಖಾತ್ರಿಯಿಲ್ಲದ ಸಾಲ 1.65 ಲಕ್ಷ ಕೋಟಿ ರೂ. ಹಾಗೂ ಅಲ್ಪಾವಧಿ ಸಾಲ 98,335 ಕೋಟಿ ರೂ. ಇದೆ. ಅಂದರೆ ವಿದೇಶಿ ಸಾಲದ ಬಹುಪಾಲು ಸರ್ಕಾರ ಅಥವಾ ಸರ್ಕಾರದ ಖಾತ್ರಿಯಿರುವ ಸಂಸ್ಥೆಗಳ ಹೊಣೆಯಾಗಿದೆ. ಇದರಿಂದ ಸಾಲದ ಮರುಪಾವತಿಯ ಒತ್ತಡ ನೇರವಾಗಿ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆಯೇ ಬೀಳುತ್ತಿದೆ.

ಚೀನಾದ ಸಾಲದ ಹಿಡಿತ

ಪಾಕಿಸ್ತಾನದ ಅತಿ ದೊಡ್ಡ ವೈಯಕ್ತಿಕ ಸಾಲದಾತ ಚೀನಾ. 2025ರ ಅಂತ್ಯಕ್ಕೆ ಚೀನಾಕ್ಕೆ ಪಾಕಿಸ್ತಾನ 2.11 ಲಕ್ಷ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ನಂತರದ ಸ್ಥಾನಗಳಲ್ಲಿ ವಿಶ್ವಬ್ಯಾಂಕ್​ನ 1.81 ಲಕ್ಷ ಕೋಟಿ ರೂ. ಮತ್ತು ಎಡಿಬಿಯ 1.58 ಲಕ್ಷ ಕೋಟಿ ರೂ. ಸಾಲ ಇವೆ. ಸರ್ಕಾರದ ಖಾತ್ರಿಯಿರುವ ಸಾಲದ ಒಟ್ಟು ಮೊತ್ತದಲ್ಲಿ ಬಹುಪಕ್ಷೀಯ ಹಣಕಾಸು ಸಂಸ್ಥೆಗಳಿಗೆ 5.35 ಲಕ್ಷ ಕೋಟಿ ರೂ., ದ್ವಿಪಕ್ಷೀಯ ಸಾಲದಾತರಿಗೆ 3.99 ಲಕ್ಷ ಕೋಟಿ ರೂ. ಹಾಗೂ ಖಾಸಗಿ ಸಾಲದಾತರಿಗೆ 73,398 ಕೋಟಿ ರೂ. ಬಾಕಿ ಇದೆ. ಬಹುಪಕ್ಷೀಯ ಸಾಲದಾತರು ಎಂದರೆ ವಿಶ್ವಬ್ಯಾಂಕ್, ಎಡಿಬಿಯಂತಹ ಹಲವು ದೇಶಗಳ ಪಾಲುದಾರಿಕೆಯಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಗಳು. ದ್ವಿಪಕ್ಷೀಯ ಸಾಲದಾತರು ಎಂದರೆ ಚೀನಾದಂತಹ ಪ್ರತ್ಯೇಕ ದೇಶಗಳು.

ಚೀನಾ ಈಗ ಪಾಕಿಸ್ತಾನದ ಪ್ರಮುಖ ಆರ್ಥಿಕ ಪಾಲುದಾರ ನಾಗಿದ್ದು, ಮೂಲಸೌಕರ್ಯ, ಇಂಧನ ಮತ್ತು ಸಾರಿಗೆ ಯೋಜನೆಗಳಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಮಾಡಿದೆ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಯೂ ಇದರಲ್ಲೊಂದು. ಆದರೆ ಸಾಲದ ಮೊತ್ತ ಹೆಚ್ಚುತ್ತಿರುವಂತೆ ಪಾಕಿಸ್ತಾನದ ಆರ್ಥಿಕ ನಿರ್ಧಾರಗಳಲ್ಲಿ ಚೀನಾದ ಪಾತ್ರ ಮತ್ತು ಪ್ರಭಾವದ ಬಗ್ಗೆಯೂ ಚರ್ಚೆ ಹೆಚ್ಚಾಗಿದೆ. ಸಾಲ ದಾತನಾಗಿ ಚೀನಾ ಅಗ್ರಸ್ಥಾನದಲ್ಲಿದ್ದರೂ, ಒಟ್ಟು ಸಾರ್ವಜನಿಕ ವಿದೇಶಿ ಸಾಲದಲ್ಲಿ ಬಹುಪಕ್ಷೀಯ ಸಂಸ್ಥೆಗಳ ಪಾಲು ಅದಕ್ಕಿಂತ ಹೆಚ್ಚಿದೆ.

ಖಾಸಗಿ ಸಾಲದ ಬಡ್ಡಿ ಹೆಚ್ಚು

ಪಾಕಿಸ್ತಾನದ ಸಾಲದ ಸಮಸ್ಯೆಯಲ್ಲಿ ಬಡ್ಡಿ ದರ ಮುಖ್ಯವಾದದ್ದು. ವಿಶ್ವಬ್ಯಾಂಕ್ ವರದಿ ಪ್ರಕಾರ, 2025ರಲ್ಲಿ ಅಧಿಕೃತ ಸಾಲದಾತರಿಂದ ಪಡೆದ ಹೊಸ ಸಾಲಗಳಿಗೆ ಸರಾಸರಿ ಶೇ. 3.6ರಷ್ಟು ಬಡ್ಡಿ ವಿಧಿಸಲಾಗಿದೆ. ಈ ಸಾಲಗಳ ಸರಾಸರಿ ಮರುಪಾವತಿ ಅವಧಿ 16 ವರ್ಷಗಳಾಗಿದ್ದು, ನಾಲ್ಕು ವರ್ಷಗಳವರೆಗೆ ಅಸಲು ಮರುಪಾವತಿಯಿಂದ ವಿನಾಯಿತಿ ಇದೆ. ಆದರೆ ಖಾಸಗಿ ಸಾಲದಾತರಿಂದ ಪಡೆದ ಹೊಸ ಸಾಲಗಳ ಸರಾಸರಿ ಬಡ್ಡಿದರ ಶೇ. 8.6ರಷ್ಟಿದೆ. ಮರುಪಾವತಿ ಅವಧಿ ಕೇವಲ 3 ವರ್ಷ. ಅಸಲು ಪಾವತಿಗೆ 1 ವರ್ಷದ ವಿನಾಯಿತಿ ಮಾತ್ರ ಇದೆ. ಅಂದರೆ ಖಾಸಗಿ ಮೂಲಗಳಿಂದ ಸಾಲ ಪಡೆಯುವುದು ದುಬಾರಿ ಮಾತ್ರವಲ್ಲ, ಕಡಿಮೆ ಅವಧಿಯಲ್ಲಿ ಹಣ ಹಿಂತಿರುಗಿಸುವ ಒತ್ತಡವನ್ನೂ ಸೃಷ್ಟಿಸುತ್ತದೆ. ಆರ್ಥಿಕ ಸಂಕಷ್ಟದಲ್ಲಿರುವ ದೇಶಕ್ಕೆ ಇಂತಹ ಸಾಲಗಳು ಮತ್ತಷ್ಟು ಹೊರೆ. ಹಳೆಯ ಸಾಲ ತೀರಿಸಲು ಹೊಸ ಸಾಲ ಪಡೆಯುವ ಪರಿಸ್ಥಿತಿ ನಿರ್ವಣವಾಗಿದ್ದು, ಪಾಕ್ ಸಾಲದ ಸುಳಿಯಿಂದ ಹೊರಬರುವುದು ಕಷ್ಟವಾಗಿದೆ.

ರಫ್ತು ಆದಾಯದ ಮೇಲೂ ಸಾಲದ ಹೊರೆ

ಪಾಕಿಸ್ತಾನದ ವಿದೇಶಿ ಸಾಲ 2025ರಲ್ಲಿ ಅದರ ಒಟ್ಟು ರಾಷ್ಟ್ರೀಯ ಆದಾಯದ ಶೇ. 34ರಷ್ಟಿತ್ತು. ಸಾಲದ ಅಸಲು ಮತ್ತು ಬಡ್ಡಿ ಪಾವತಿಗೆ ಬಳಸುವ ಹಣವು ದೇಶದ ರಫ್ತು ಆದಾಯದ ಶೇ. 33ರಷ್ಟಿದೆ. ಅಂದರೆ ದೇಶ ವಿದೇಶಗಳಿಗೆ ಸರಕು ಮತ್ತು ಸೇವೆಗಳನ್ನು ಮಾರಾಟ ಮಾಡಿ ಗಳಿಸುವ ಆದಾಯದ ಗಮನಾರ್ಹ ಭಾಗ ಸಾಲದ ಮರುಪಾವತಿಗೆ ಹೋಗುತ್ತಿದೆ! ಇದರಿಂದ ಆಮದುಗಳಿಗೆ ಅಗತ್ಯವಾದ ವಿದೇಶಿ ವಿನಿಮಯವನ್ನು ಸಂಗ್ರಹಿಸುವುದು, ಕೈಗಾರಿಕೆಗಳಿಗೆ ಉತ್ತೇಜನ ನೀಡುವುದು ಮತ್ತು ಅಭಿವೃದ್ಧಿ ಯೋಜನೆಗಳಿಗೆ ಹಣ ಒದಗಿಸುವುದು ಕಷ್ಟವಾಗಬಹುದು. ಸಾಲದ ಹೊರೆ ಹೆಚ್ಚಾದಾಗ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಮತ್ತು ಜನಕಲ್ಯಾಣ ಯೋಜನೆಗಳಿಗೆ ಮೀಸಲಿಡಬಹುದಾದ ಹಣದ ಮೇಲೂ ಒತ್ತಡ ಉಂಟಾಗುತ್ತದೆ.

ಐಎಂಎಫ್ ನೆರವು

ಸಾಲ ಮರುಪಾವತಿಯ ಒತ್ತಡ ತಗ್ಗಿಸಿಕೊಳ್ಳಲು ಪಾಕಿಸ್ತಾನ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ನೆರವನ್ನೂ ಪಡೆಯುತ್ತಿದೆ. 2025ರಲ್ಲಿ ಐಎಂಎಫ್ ಪಾಕಿಸ್ತಾನಕ್ಕೆ 21,643 ಕೋಟಿ ರೂ. ಬಿಡುಗಡೆ ಮಾಡಿದೆ. ವಿಸõತ ನಿಧಿ ಸೌಲಭ್ಯ (ಇಎಫ್​ಎಫ್) ಮತ್ತು ಸ್ಥಿತಿಸ್ಥಾಪಕತ್ವ ಹಾಗೂ ಸುಸ್ಥಿರತೆ ಸೌಲಭ್ಯ (ಆರ್​ಎಸ್​ಎಫ್) ಯೋಜನೆಗಳಡಿ ಈ ಹಣ ನೀಡಲಾಗಿದೆ. ಇದೇ ವೇಳೆ 2025ರಲ್ಲಿ ಮರುಪಾವತಿಯಾಗಬೇಕಿದ್ದ ಸುಮಾರು 18,820 ಕೋಟಿ ರೂ. ಸಾಲದ ಅವಧಿಯನ್ನು ಚೀನಾ ವಿಸ್ತರಿಸಿದೆ. ಇದರಿಂದ ಪಾಕಿಸ್ತಾನಕ್ಕೆ ತಕ್ಷಣದ ಮರುಪಾವತಿ ಒತ್ತಡ ಸ್ವಲ್ಪ ಕಡಿಮೆಯಾಗಿದೆ. ಆದರೆ ಸಾಲ ಮನ್ನಾ ಆಗುವುದಿಲ್ಲ.

ಮುಂದಿನ ದಿನಗಳಲ್ಲಿ ಆ ಮೊತ್ತವನ್ನು ಪಾವತಿಸಲೇಬೇಕು. ಐಎಂಎಫ್ ನೆರವಿಗೂ ಷರತ್ತುಗಳಿವೆ. ಸರ್ಕಾರಿ ವೆಚ್ಚ ನಿಯಂತ್ರಣ, ತೆರಿಗೆ ಆದಾಯ ಹೆಚ್ಚಳ, ಸಬ್ಸಿಡಿ ಕಡಿತ ಮತ್ತು ಆರ್ಥಿಕ ಸುಧಾರಣೆಗಳಂತಹ ಕ್ರಮಗಳನ್ನು ಕೈಗೊಳ್ಳುವಂತೆ ಅದು ಒತ್ತಡ ಹೇರುತ್ತದೆ. ಇವು ದೇಶದ ಹಣಕಾಸು ಶಿಸ್ತು ಸುಧಾರಿಸಲು ನೆರವಾಗಬಹುದಾದರೂ, ಸಾಮಾನ್ಯ ಜನರ ಮೇಲೆ ತೆರಿಗೆ ಮತ್ತು ಬೆಲೆ ಏರಿಕೆಯ ಹೊರೆ ಹೆಚ್ಚಿಸುವ ಸಾಧ್ಯತೆಯೂ ಇರುತ್ತದೆ.