ಮಂತ್ರ-ತಂತ್ರದ ಹೆಸರಿನಲ್ಲಿ ನಿವೃತ್ತ ದಂಪತಿಗೆ 6.38 ಕೋಟಿ ವಂಚನೆ WEB
ವಿದೇಶ

ಮಂತ್ರ-ತಂತ್ರದ ಹೆಸರಿನಲ್ಲಿ ನಿವೃತ್ತ ದಂಪತಿಗೆ 6.38 ಕೋಟಿ ವಂಚನೆ; 10 ಮಂದಿ ವಿರುದ್ಧ ಕೇಸ್! Black Magic

ಮೂಢನಂಬಿಕೆ, ಮಾಟ-ಮಂತ್ರ ಹಾಗೂ ದೈವಿಕ ಶಕ್ತಿಗಳ ಹೆಸರಿನಲ್ಲಿ ನಿವೃತ್ತ ದಂಪತಿಯನ್ನು ಭಯಪಡಿಸಿ ಬರೋಬ್ಬರಿ 6.38 ಕೋಟಿ ವಂಚಿಸಿರುವ ಆರೋಪ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಕುಟುಂಬಕ್ಕೆ ಶಾಪ ತಗುಲಿದೆ, ದುಷ್ಟಶಕ್ತಿಗಳ ಕಾಟವಿದೆ, ಮಕ್ಕಳ ಜೀವಕ್ಕೆ ಅಪಾಯವಿದೆ ಎಂದು ಹೆದರಿಸಿ ದಂಪತಿಯ ಜೀವನಪೂರ್ತಿ ಸಂಪಾದಿಸಿದ ಹಣ, ಮನೆ, ಚಿನ್ನ ಹಾಗೂ ಷೇರುಗಳನ್ನು ಕಬಳಿಸಿರುವ ಆರೋಪ ಕೇಳಿಬಂದಿದೆ.Black Magic

ಮುಂಬೈ : ಮೂಢನಂಬಿಕೆ, ಮಾಟ-ಮಂತ್ರ ಹಾಗೂ ದೈವಿಕ ಶಕ್ತಿಗಳ ಹೆಸರಿನಲ್ಲಿ ನಿವೃತ್ತ ದಂಪತಿಯನ್ನು ಭಯಪಡಿಸಿ ಬರೋಬ್ಬರಿ 6.38 ಕೋಟಿ ವಂಚಿಸಿರುವ ಆರೋಪ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಕುಟುಂಬಕ್ಕೆ ಶಾಪ ತಗುಲಿದೆ, ದುಷ್ಟಶಕ್ತಿಗಳ ಕಾಟವಿದೆ, ಮಕ್ಕಳ ಜೀವಕ್ಕೆ ಅಪಾಯವಿದೆ ಎಂದು ಹೆದರಿಸಿ ದಂಪತಿಯ ಜೀವನಪೂರ್ತಿ ಸಂಪಾದಿಸಿದ ಹಣ, ಮನೆ, ಚಿನ್ನ ಹಾಗೂ ಷೇರುಗಳನ್ನು ಕಬಳಿಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ 10 ಮಂದಿ ವಿರುದ್ಧ ದಹಿಸರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂಬೈನ ದಹಿಸರ್ ನಿವಾಸಿ ಪಾರ್ಸಿಸ್ ದಾರಾ ಮೆಹ್ತಾ ನೀಡಿದ ದೂರಿನ ಆಧಾರದ ಮೇಲೆ ನವೆಂಬರ್ 13ರಂದು ಪ್ರಕರಣ ದಾಖಲಾಗಿದೆ. ವಂಚನೆಯ ಪ್ರಮುಖ ಆರೋಪಿ ಉಮೇಶ್ ದೇಶಪಾಂಡೆ ಸೇರಿದಂತೆ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ವಂಚನೆ 2016ರ ಡಿಸೆಂಬರ್‌ನಲ್ಲಿ ಆರಂಭವಾಗಿತ್ತು ಎನ್ನಲಾಗಿದೆ.

ಆ ಸಮಯದಲ್ಲಿ ಮೆಹ್ತಾ ಅವರ ಪತಿ ಸತತ ಮೂರು ಬಾರಿ ಪಾರ್ಶ್ವವಾಯುವಿಗೆ ಒಳಗಾಗಿ, ದೇಹದ ಚಲನೆಯೂ ಇಲ್ಲದ ಸ್ಥಿತಿಯಲ್ಲಿದ್ದರು. ಮಾನಸಿಕವಾಗಿ ಸಂಕಷ್ಟದಲ್ಲಿದ್ದ ಮೆಹ್ತಾ ಅವರಿಗೆ ನೆರೆಮನೆಯ ಮೆಘನಾ ಇನಾಮ್ದಾರ್ ಮೂಲಕ ರಾಮಾಬಾಯಿ ಸಾನೆ ಎಂಬ ಮಹಿಳೆ ಹಾಗೂ ಆಕೆಯ ಸಹಚರ ದೇಶಪಾಂಡೆ ಪರಿಚಯವಾಗಿದ್ದರು. ರಾಮಾಬಾಯಿ ತನಗೆ ಪವಾಡಗಳನ್ನು ಮಾಡುವ ಶಕ್ತಿಯಿದೆ ಎಂದು ಹೇಳಿಕೊಂಡಿದ್ದಳು ಎನ್ನಲಾಗಿದೆ.

ದಂಪತಿಯ ಮನೆಯ ವಾಸ್ತು ಸರಿಯಿಲ್ಲ, ಮಾಟ-ಮಂತ್ರದ ಪ್ರಭಾವವಿದೆ ಎಂದು ನಂಬಿಸಿದ ಆರೋಪಿಗಳು, ಮನೆಯ ಆಸ್ತಿ, ಹಣ ಹಾಗೂ ಚಿನ್ನದ ಮೇಲೆ ದುಷ್ಟಶಕ್ತಿಗಳ ಕಾಟವಿದೆ ಎಂದು ಹೆದರಿಸಿದ್ದಾರೆ. ಈ ಸಮಸ್ಯೆ ನಿವಾರಿಸದಿದ್ದರೆ ಇಬ್ಬರು ಪುತ್ರರು ಹಾಗೂ ಪತಿಯ ಜೀವಕ್ಕೆ ಅಪಾಯ ಎದುರಾಗಲಿದೆ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಇದನ್ನೂ ಓದಿ : ಹಾಸ್ಟೆಲ್‌ನಲ್ಲಿ ಮಕ್ಕಳ ಪ್ರಾಣಕ್ಕಿಲ್ಲ ರಕ್ಷಣೆ: ವಿದ್ಯುತ್ ತಂತಿ ತಗುಲಿ ಬಾಲಕಿ ಸಾವು, ಮತ್ತೊಬ್ಬಳಿಗೆ ಗಾಯ!Hyderabad hostel tragedy

ವೇಷ ಬದಲಿಸಿ ನಂಬಿಕೆ ಗಳಿಸಿದ್ದ ಖದೀಮರು

ಪ್ರಕರಣದ ಪ್ರಮುಖ ಆರೋಪಿ ದೇಶಪಾಂಡೆ, ಹೈದರಾಬಾದ್‌ನ ಮಠವೊಂದರ 108 ವರ್ಷದ ಆಧ್ಯಾತ್ಮಿಕ ಗುರು ಎಂದು ನಂಬಿಸುವ ಸಲುವಾಗಿ ಧ್ವನಿಯನ್ನು ಬದಲಾಯಿಸಿ ಮಾತನಾಡುತ್ತಿದ್ದ ಎನ್ನಲಾಗಿದೆ. ಆತನ ಮಹಿಳಾ ಸಹಚರರಾದ ಅಶ್ವಿನಿ ಗಾಯಕ್ವಾಡ್ ಮತ್ತು ವೃಷಾಲಿ ಗಾಯಕ್ವಾಡ್, ಸ್ನೇಹಲತಾ ದೀಕ್ಷಿತ್ ಅಲಿಯಾಸ್ ಬೈಸಾಹೇಬ್ ಹಾಗೂ ರಾಮಾಬಾಯಿ ಸಾನೆ ಎಂಬ ಪಾತ್ರಗಳನ್ನು ನಿರ್ವಹಿಸಿ ದಂಪತಿಯನ್ನು ನಂಬಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

ಆಸ್ತಿಗಳ ಶುದ್ಧೀಕರಣದ ಹೆಸರಿನಲ್ಲಿ ದಹಿಸರ್ ಮತ್ತು ಬೋರಿವಲಿಯಲ್ಲಿದ್ದ ನಾಲ್ಕು ಫ್ಲ್ಯಾಟ್‌ಗಳನ್ನು ಮಾರಾಟ ಮಾಡಿಸಿ ಸುಮಾರು 3.02 ಕೋಟಿ ಹಣ ಪಡೆದಿದ್ದಾರೆ ಎನ್ನಲಾಗಿದೆ. ಅಲ್ಲದೆ, 1.60 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿಸಿದ್ದು, ಬ್ಯಾಂಕ್ ಮತ್ತು ಅಂಚೆ ಕಚೇರಿ ಖಾತೆಗಳಿಂದ 45 ಲಕ್ಷ ಹಣವನ್ನು ಹಿಂಪಡೆಸಿದ್ದಾರೆ ಎಂಬ ಆರೋಪವೂ ಇದೆ.

ಇಷ್ಟಕ್ಕೆ ನಿಲ್ಲದ ವಂಚಕರು, ಮಠ ನಿರ್ಮಾಣಕ್ಕೆ ಹಣ ಬೇಕೆಂದು ಹೇಳಿ ಖಾಸಗಿ ಸಾಲದಾತರಿಂದ 45 ಲಕ್ಷ ಸಾಲ ಪಡೆಯುವಂತೆ ದಂಪತಿಗೆ ಒತ್ತಾಯಿಸಿದ್ದಾರೆ. ತಿಂಗಳಿಗೆ ಶೇ.8ರ ಬಡ್ಡಿ ವಿಧಿಸಲಾಗಿದ್ದು, ಸಾಲ ಮರುಪಾವತಿಗಾಗಿ ದಂಪತಿ ಸುಮಾರು 90 ಲಕ್ಷ ಪಾವತಿಸುವಂತಾಗಿದೆ ಎನ್ನಲಾಗಿದೆ. ಮನೆಯಲ್ಲಿದ್ದ 1,200 ಗ್ರಾಂ ಚಿನ್ನ ಹಾಗೂ ಪೀಠೋಪಕರಣಗಳನ್ನೂ ಆರೋಪಿಗಳು ತೆಗೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : ಕಿರುಕುಳ ನೀಡಿ ಎಸ್ಕೇಪ್ ಆಗಲು ಯತ್ನ; ಸಾರ್ವಜನಿಕ ಶೌಚಾಲಯದಲ್ಲಿ ಅವಿತಿದ್ದ ಆರೋಪಿ ಪೊಲೀಸರ ವಶಕ್ಕೆ | Mumbai Crime

24 ಸಾವಿರ ಸಾಲ ಕೇಳಿದಾಗ ಬಯಲಾದ ವಂಚನೆ

ದಂಪತಿಯ ಸಂಪೂರ್ಣ ಹಣ ಹಾಗೂ ಆಸ್ತಿಗಳು ಕಳೆದುಹೋದ ಬಳಿಕ, 2025ರ ಜೂನ್‌ನಲ್ಲಿ ಹೈದರಾಬಾದ್‌ಗೆ ಪ್ರಯಾಣಿಸಲು ನೆರೆಹೊರೆಯ ರವೀಂದ್ರ ಕಿಣಿ ಅವರ ಬಳಿ 24 ಸಾವಿರ ಸಾಲ ಕೇಳಿದ್ದಾರೆ. ದಂಪತಿಯ ಆರ್ಥಿಕ ಸ್ಥಿತಿ ಕಂಡು ಅನುಮಾನಗೊಂಡ ಕಿಣಿ ವಿಚಾರಿಸಿದಾಗ, ವರ್ಷಗಳ ಕಾಲ ನಡೆದ ವಂಚನೆಯ ವಿಚಾರ ಹೊರಬಂದಿದೆ ಎನ್ನಲಾಗಿದೆ.

ವಂಚನೆಯಿಂದ ಪಡೆದ ಹಣದಲ್ಲಿ ಆರೋಪಿಗಳು ಗೋರೆಗಾಂವ್‌ನ ದಿಂಡೋಶಿ ಹಾಗೂ ನಾಗರಿ ನಿವಾರಾ ಪರಿಷತ್ ಪ್ರದೇಶಗಳಲ್ಲಿ ಹಲವು ಫ್ಲ್ಯಾಟ್‌ಗಳನ್ನು ಖರೀದಿಸಿರುವ ಶಂಕೆ ಪೊಲೀಸರಿಗಿದೆ. ಸದ್ಯ ಆರೋಪಿಗಳ ಪತ್ತೆ, ವಂಚನೆಯ ಹಣದಿಂದ ಖರೀದಿಸಿರುವ ಆಸ್ತಿಗಳ ಗುರುತು ಹಾಗೂ ಪ್ರಕರಣದ ಸಂಪೂರ್ಣ ಹಿನ್ನೆಲೆ ಕುರಿತು ತನಿಖೆ ಮುಂದುವರಿದಿದೆ.