ಉಗಾಂಡದ ಸರಣಿ ಹಂತಕ, ನರಭಕ್ಷಕ ಆರೋಪಿ ಮುಜುರಿಜಿ ಮೋಸಸ್ 
ವಿದೇಶ

15 ವರ್ಷದಲ್ಲಿ 38 ಜನರನ್ನು ಕೊಂದು ತಿಂದ ನರಭಕ್ಷಕ: ಉಗಾಂಡವನ್ನೇ ನಡಗಿಸಿದ್ದ ಸರಣಿ ಹಂತಕ ಕೊನೆಗೂ ಅರೆಸ್ಟ್! Mujurizi Moses

ಕಂಪಾಲ: ಆಫ್ರಿಕಾದ ಉಗಾಂಡದಲ್ಲಿ ( Uganda) ನರಭಕ್ಷಕನೊಬ್ಬನ ಕ್ರೌರ್ಯ ಬಯಲಿಗೆ ಬಂದಿದ್ದು, ಇಡೀ ಜಗತ್ತನ್ನೇ ಆಘಾತಕ್ಕೀಡುಮಾಡಿದೆ. ಕಳೆದ 15 ವರ್ಷಗಳ ಅವಧಿಯಲ್ಲಿ 38 ಜನರನ್ನು ಭೀಕರವಾಗಿ ಹತ್ಯೆ ಮಾಡಿ, ಅವರ ಮಾಂಸವನ್ನು ತಿಂದಿರುವ ಆರೋಪದ ಮೇಲೆ ಮುಜುರಿಜಿ ಮೋಸಸ್ ( Mujurizi Moses ) ಎಂಬ ಸರಣಿ ಹಂತಕನನ್ನು ಉಗಾಂಡದ ಭದ್ರತಾ ಪಡೆಗಳು ಬಂಧಿಸಿವೆ.

ಬಂಧನದ ಬಗ್ಗೆ ಉಗಾಂಡದ ಸೇನಾ ಮುಖ್ಯಸ್ಥ ಜನರಲ್ ಮುಹೂಜಿ ಕೈನೇರುಗಾಬಾ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ನೀಡಿದ್ದು, ಆರೋಪಿಯನ್ನು ಸಾರ್ವಜನಿಕವಾಗಿ ವಿಚಾರಣೆ ನಡೆಸಿ ಗಲ್ಲಿಗೇರಿಸಲಾಗುವುದು ಎಂದು ಘೋಷಿಸಿದ್ದಾರೆ.

ನಮ್ಮ ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ಸರಣಿ ಹಂತಕ ಹಾಗೂ ನರಭಕ್ಷಕ ಮುಜುರಿಜಿ ಮೋಸಸ್‌ನನ್ನು ನಮ್ಮ ಭದ್ರತಾ ಪಡೆಗಳು ಬಂಧಿಸಿವೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಈತ 2010 ರಿಂದ 2025ರ ಅವಧಿಯಲ್ಲಿ ಮಸಾಕಾ, ಇಬಾಂಡಾ ಮತ್ತು ಕಾಜೋ ಜಿಲ್ಲೆಗಳಲ್ಲಿ 38 ಜನರನ್ನು ಕೊಂದು ತಿಂದಿದ್ದಾನೆ. ನಾವು ಈತನನ್ನು ಸಾರ್ವಜನಿಕವಾಗಿ ವಿಚಾರಣೆಗೆ ಒಳಪಡಿಸಿ, ಖಂಡಿತವಾಗಿಯೂ ಮರಣದಂಡನೆಗೆ ಗುರಿಪಡಿಸುತ್ತೇವೆ ಎಂದು ಮುಹೂಜಿ ಕೈನೇರುಗಾಬಾ ಟ್ವೀಟ್​ ಮಾಡಿದ್ದಾರೆ.

ಸ್ಥಳೀಯ ತನಿಖಾಧಿಕಾರಿಗಳ ಪ್ರಕಾರ, ಆರೋಪಿ ಮೋಸಸ್ ಅನೇಕ ವರ್ಷಗಳಿಂದ ಸಂಚು ರೂಪಿಸಿ ಕೊಲೆಗಳನ್ನು ನಡೆಸುತ್ತಿದ್ದ. ಈತ ಇಡೀ ಕುಟುಂಬಗಳನ್ನೇ ಗುರಿಯಾಗಿಸಿಕೊಂಡು ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಕೊಡಲಿ ಮತ್ತು ಕತ್ತಿಗಳಿಂದ ದಾಳಿ ನಡೆಸುತ್ತಿದ್ದ. ಒಮ್ಮೆ ಪಂಟಕೋಸ್ಟಲ್ ಚರ್ಚ್‌ನ ಪಾದ್ರಿ ಕಸ್ಟರ್ ಸ್ಟೀವನ್ ಮುಗಾಂಬೆ ಅವರ ಮನೆಗೆ ಡ್ರಿಲ್ ಮಾಡಿ ನುಗ್ಗಿದ ಮೋಸಸ್ ಹಾಗೂ ಆತನ ಸಹಚರರು ಮನೆಯಲ್ಲಿದ್ದ ಪ್ರತಿಯೊಬ್ಬರನ್ನೂ ಭೀಕರವಾಗಿ ಕೊಚ್ಚಿ ಕೊಂದಿದ್ದರು ಎಂದು ವರದಿಯಾಗಿದೆ.

ಇನ್ನು ಕೆಲವು ಪ್ರಕರಣಗಳಲ್ಲಿ, ಈತ ಪ್ರೀತಿ ಅಥವಾ ಸಂಬಂಧದ ನಕಲಿ ಭರವಸೆಗಳನ್ನು ನೀಡಿ ಜನರನ್ನು ಪುಸಲಾಯಿಸಿ ಕರೆದೊಯ್ದು ಕೊಲೆ ಮಾಡುತ್ತಿದ್ದ. ಕಳೆದ ಹಲವು ವರ್ಷಗಳಲ್ಲಿ ಈ ಮೋಸಸ್ ಹಲವಾರು ಬಾರಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರೂ, ಜೈಲಿನಿಂದ ಹೇಗೋ ತಪ್ಪಿಸಿಕೊಂಡು ಅಥವಾ ಬಿಡುಗಡೆಯಾಗಿ ಮತ್ತೆ ತನ್ನ ದೌರ್ಜನ್ಯವನ್ನು ಮುಂದುವರಿಸಿದ್ದ ಎನ್ನಲಾಗಿದೆ.

ಆರೋಪಿಯ ಬಂಧನದ ನಂತರ, ಆತನ ನಿವಾಸದಿಂದ ಪೊಲೀಸರು ಪ್ರಮುಖ ಭೌತಿಕ ಸಾಕ್ಷ್ಯಾಧಾರಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದ 15 ವರ್ಷಗಳಲ್ಲಿ ಈ ಪ್ರದೇಶದಲ್ಲಿ ದಾಖಲಾಗಿರುವ ಕಾಣೆಯಾದ ಪ್ರಕರಣಗಳು ಮತ್ತು ರಹಸ್ಯ ಕೊಲೆಗಳ ದಾಖಲೆಗಳನ್ನು ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಈ ಎಲ್ಲಾ ಅಪರಾಧಗಳಿಗೆ ಕಾನೂನು ಪ್ರಕ್ರಿಯೆಯ ಮೂಲಕ ಸೂಕ್ತ ಸಾಕ್ಷ್ಯಗಳನ್ನು ಒದಗಿಸಿ ನ್ಯಾಯ ದೊರಕಿಸಿಕೊಡಲು ತನಿಖಾ ಸಂಸ್ಥೆಗಳು ಮುಂದಾಗಿವೆ, (ಏಜೆನ್ಸೀಸ್​).