ತಾಷ್ಕೆಂಟ್: ವೈದ್ಯಕೀಯ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಿದ್ದ ಕೇರಳದ ಪ್ರತಿಭಾವಂತ ವಿದ್ಯಾರ್ಥಿನಿ ( Malayali Student ) ಸಾವರಿಯಾ ಬೆಸೆಂಟ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಜ್ಬೇಕಿಸ್ತಾನದ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಹರಿಪಾಡ್ ಮೂಲದ 21 ವರ್ಷದ ಸಾವರಿಯಾ ಅವರನ್ನು ಬರ್ಬರವಾಗಿ ಹತ್ಯೆಗೈದ ಆರೋಪ ಸಾಬೀತಾಗಿದ್ದು, ಆಕೆಯ ಸಹಪಾಠಿ, ಮಲಪ್ಪುರಂ ಮೂಲದ ಸಾರುಲ್ ಅನಾಮ್ಗೆ 8.5 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ. ಕಳೆದ ವರ್ಷ ನಡೆದ ಈ ದಾರುಣ ಘಟನೆಯು ಕೇರಳದಲ್ಲಿ ತೀವ್ರ ಆಘಾತವನ್ನು ಉಂಟುಮಾಡಿತ್ತು.
ಕೇರಳದ ಹರಿಪಾಡ್ನ ಪಿಲಾಪುಜಾ ನಿವಾಸಿಗಳಾದ ಬೆಸೆಂಟ್ ಮತ್ತು ಮಿನಿ ಸುಪ್ರಭಾ ದಂಪತಿಯ ಪುತ್ರಿ ಸಾವರಿಯಾ, ಉಜ್ಬೇಕಿಸ್ತಾನದ ಬುಖಾರಾ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಅದೇ ಕಾಲೇಜಿನ ಸಹಪಾಠಿ, ಮಲಪ್ಪುರಂ ಜಿಲ್ಲೆಯ ಪುಲಮಂತೋಲ್ ಮೂಲದ ಸಾರುಲ್ ಅನಾಮ್ (22) ಕೂಡ ಅದೇ ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದನು. ಹಾಸ್ಟೆಲ್ ಸೌಕರ್ಯಗಳು ಕಳಪೆಯಾಗಿದ್ದರಿಂದ ಇಬ್ಬರೂ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಕಳೆದ ಜುಲೈನಲ್ಲಿ, ತನ್ನ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳನ್ನು ಮುಗಿಸಿ ಊರಿಗೆ ಮರಳಲು ಸಿದ್ಧಳಾಗಿದ್ದ ಸಾವರಿಯಾಳನ್ನು, ಸಾರುಲ್ ಅನಾಮ್ ಬರ್ಬರವಾಗಿ ಥಳಿಸಿ, ತಲೆಗೆ ಬಲವಾಗಿ ಹೊಡೆದು ಕೊಂದಿದ್ದಾನೆ ಎಂಬ ಗಂಭೀರ ಆರೋಪವಿದೆ.
ಸಾವರಿಯಾಳ ಕುಟುಂಬವು ಉಜ್ಬೇಕಿಸ್ತಾನದಲ್ಲಿ ನೇಮಿಸಿದ ವಕೀಲರ ಮೂಲಕ ನೀಡಿದ ಮಾಹಿತಿಯ ಪ್ರಕಾರ, ವಿಚಾರಣೆಯನ್ನು ನಡೆಸಿದ ಸ್ಥಳೀಯ ನ್ಯಾಯಾಲಯವು ಆರೋಪಿ ಸಾರುಲ್ ಅನಾಮ್ನ ಮೇಲಿನ ಅಪರಾಧವನ್ನು ದೃಢಪಡಿಸಿದೆ. ಉಜ್ಬೇಕಿಸ್ತಾನದ ಕ್ರಿಮಿನಲ್ ಕೋಡ್ನ ಸೆಕ್ಷನ್ 104 ರ ಅಡಿಯಲ್ಲಿ ಆತನನ್ನು ದೋಷಿ ಎಂದು ಪರಿಗಣಿಸಲಾಗಿದೆ.
ಈ ಕಾಯ್ದೆಯಡಿ ಗರಿಷ್ಠ 10 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿದ್ದರೂ, ಕೋರ್ಟ್ ಅಂತಿಮವಾಗಿ 8 ವರ್ಷ ಮತ್ತು ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ತೀರ್ಪಿನ ಅಧಿಕೃತ ಪ್ರತಿ ಇನ್ನೂ ಲಭ್ಯವಾಗಿಲ್ಲವಾದರೂ, ಕುಟುಂಬಕ್ಕೆ ವಕೀಲರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಪರಾಧಿ ತನ್ನ ಶಿಕ್ಷೆಯನ್ನು ಉಜ್ಬೇಕಿಸ್ತಾನದ ಜೈಲಿನಲ್ಲಿಯೇ ಅನುಭವಿಸಬೇಕಾಗುತ್ತದೆ.
ಈ ಘಟನೆಯ ಬಗ್ಗೆ ತೀರ್ಪು ಪ್ರಕಟವಾಗಿರುವ ಬಗ್ಗೆ ಉಜ್ಬೇಕಿಸ್ತಾನದಿಂದ ಅಧಿಕೃತ ಮಾಹಿತಿ ಬಂದಿದೆಯೇ ಎಂದು ಪರಿಶೀಲಿಸಿದಾಗ, ಹರಿಪಾಡ್ ಪೊಲೀಸರು ಇನ್ನೂ ತಮಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಸಾವರಿಯಾ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ಹರಿಪಾಡ್ ಪೊಲೀಸರು ಮೊದಲಿಗೆ ದಾಖಲಿಸಿಕೊಂಡಿದ್ದ ಪ್ರಕರಣವನ್ನು, ಈಗ ರಾಜ್ಯದ ಉನ್ನತ ತನಿಖಾ ಸಂಸ್ಥೆಯಾದ ಅಪರಾಧ ವಿಭಾಗವು (Crime Branch) ವಹಿಸಿಕೊಂಡಿದೆ. ಕ್ರೈಂ ಬ್ರಾಂಚ್ ಅಧಿಕಾರಿಗಳು ಉಜ್ಬೇಕಿಸ್ತಾನ ನ್ಯಾಯಾಲಯದ ತೀರ್ಪಿಗೆ ಸಂಬಂಧಿಸಿದ ಅಧಿಕೃತ ದಾಖಲೆಗಳು ಮತ್ತು ಮಾಹಿತಿಯನ್ನು ಪಡೆಯಲು ಸಂಬಂಧಪಟ್ಟ ಇಲಾಖೆಗಳ ಮೂಲಕ ಕೋರಿಕೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ತಮ್ಮ ಮಗಳನ್ನು ಕಳೆದುಕೊಂಡ ಸಾವರಿಯಾಳ ಕುಟುಂಬಕ್ಕೆ ವಿದೇಶಿ ನೆಲದಲ್ಲಿ ದೊರೆತ ಈ ತೀರ್ಚು ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ. ಕಳೆದ ತಿಂಗಳು ಈ ಪ್ರಕರಣದ ವಿಚಾರಣೆಗೆ ಸಾಕ್ಷಿಯಾಗಿ ಸಾವರಿಯಾಳ ತಂದೆ ಕೂಡ ಉಜ್ಬೇಕಿಸ್ತಾನಕ್ಕೆ ತೆರಳಿದ್ದರು. ಮಗಳ ಬದುಕು ಅರಳುವ ಮುನ್ನವೇ ಕಮರಿದ ನೋವಿನ ನಡುವೆಯೂ, ಅಪರಾಧಿಗೆ ಶಿಕ್ಷೆಯಾಗಿರುವುದು ಕಾನೂನಿನ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ. ಅಪರಾಧಿ ಸಾರುಲ್ ಅನಾಮ್ಗೆ ಉಜ್ಬೇಕಿಸ್ತಾನದಲ್ಲಿ ಶಿಕ್ಷೆ ವಿಧಿಸಲಾಗಿದ್ದರೂ, ಭಾರತದಲ್ಲಿ ನಡೆಯುತ್ತಿರುವ ಕ್ರೈಂ ಬ್ರಾಂಚ್ ತನಿಖೆಯು ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆಯನ್ನು ಹೊರತರುವ ನಿರೀಕ್ಷೆಯಿದೆ, (ಏಜೆನ್ಸೀಸ್).