ಹಾರ್ಮುಜ್ ಜಲಸಂಧಿ(Strait Of Hormuz)
- ಹಾರ್ಮುಜ್ ಜಲಸಂಧಿ ಬಂದ್ ಮಾಡಿದ ಇರಾನ್
- ರಕ್ಷಣೆಗೆ ನಾವು ಬರಲಿದ್ದೇವೆ ಎಂದ ಅಮೆರಿಕ
- ಅಮೆರಿಕ ಹಸ್ತಕ್ಷೇಪ ಮಾಡಿದರೆ ಮಹಾಯುದ್ಧ ಗ್ಯಾರಂಟಿ ಎಂದ ರಾಜಕೀಯ ತಜ್ಞರು
ಇರಾನ್: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾಗಿ ಇಂದಿಗೆ ಐದು ದಿನಗಳು ಕಳೆದಿದ್ದು, ಹಾರ್ಮುಜ್ ಜಲಸಂಧಿ (Strait Of Hormuz) ಯಲ್ಲಿ ಹಡಗುಗಳ ಸಂಚಾರವನ್ನು ಇರಾನ್ ನಿಷೇಧಿಸಿದೆ.ಈ ಭಾಗದಲ್ಲಿ ಏನಾದರೂ ಪರಿಸ್ಥಿತಿ ಹದಗೆಟ್ಟರೆ ಈ ಸಂಘರ್ಷ ಇನ್ನೂ ಹೆಚ್ಚಿನ ಕಾಲ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಫೆಬ್ರವರಿ 28 ರಂದು ಇರಾನಿನ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿಯನ್ನು ಅಮೆರಿಕ ಮತ್ತು ಇಸ್ರೇಲ್ನ ಜಂಟಿ ಕಾರ್ಯಾಚರಣೆಯಲ್ಲಿ ಕೊಲ್ಲುವ ಮೂಲಕ ಈ ಸಂಘರ್ಷ ಆರಂಭವಾಯಿತು.
ಅಮೆರಿಕ ಮತ್ತು ಇಸ್ರೇಲ್ನ ದಾಳಿಗೆ ಉತ್ತರಿಸಲು ಮುಂದಾದ ಇರಾನ್ ಕೊಲ್ಲಿ ರಾಷ್ಟ್ರಗಳಾದ ದುಬೈ, ಸೌದಿ ಅರೇಬಿಯಾ,ಕುವೈತ್ ಮೊದಲಾದ ದೇಶಗಳ ಮೇಲೆ ಮಿಸೈಲ್ ದಾಳಿ ನಡೆಸಿತು. ಹಾಗೆಯೇ ವಿಶ್ವ ತೈಲ ಸರಕುಗಳ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಇರಾನ್ ಸ್ಥಗಿತಗೊಳಿಸಿದ ಪರಿಣಾಮ ಜಾಗತಿಕ ಆರ್ಥಿಕ ಪರಿಣಾಮ ಉಂಟಾಗಲು ಪ್ರಾರಂಭವಾಗಿದೆ.
ಈ ಯುದ್ಧ ಇಲ್ಲಿಗೆ ನಿಲ್ಲುವುದಿಲ್ಲ
ಇರಾನ್ ಹಾರ್ಮುಜ್ ಜಲಸಂಧಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳತ್ತಿದ್ದಂತೆ, ಅಮೆರಿಕ ಹಾರ್ಮುಜ್ ಜಲಸಂಧಿಯಲ್ಲಿ ಮೊದಲಿನಂತೆ ಹಡಗುಗಳು ಚಲಿಸಲಿವೆ ಮತ್ತು ಅಮೆರಿಕ ಅವಕ್ಕೆ ರಕ್ಷಣೆ ನೀಡಲಿದೆ ಎಂದು ತಿಳಿಸಿದೆ. ಆದರೆ ಅಮೆರಿಕ ಹೀಗೆ ರಕ್ಷಣೆ ನೀಡಲು ಮುಂದಾದಾಗ ಇರಾನ್ ದಾಳಿ ಮುಂದುವರೆಸಿದರೆ ಈ ಸಂಘರ್ಷ ಮತ್ತಷ್ಟು ಭೀಕರವಾಗಲಿದೆ ಎನ್ನುವುದು ಅಂತರಾಷ್ಟ್ರೀಯ ರಾಜಕೀಯ ತಜ್ಞರ ಮಾತಾಗಿದೆ.
ವರದಿಗಳ ಪ್ರಕಾರ, ಸದ್ಯಕ್ಕೆ ಈ ಜಲಸಂಧಿಯಲ್ಲಿ ಇರಾನಿನ ಮಿತ್ರ ದೇಶ ಚೀನಾದ ಹಡಗುಗಳು ಮಾತ್ರ ಸಂಚಾರ ನಡೆಸುತ್ತಿದ್ದು, ಒಂದು ವೇಳೆ ಅಮೆರಿಕ ಇಲ್ಲಿ ಸಂಚರಿಸುವ ಎಲ್ಲಾ ಹಡಗುಗಳಿಗೆ ರಕ್ಷಣೆ ನೀಡಲು ಮುಂದಾದರೇ ಇರಾನ್ ಖಂಡಿತವಾಗಿ ಯುಎಸ್ ಮೇಲೆ ದಾಳಿ ಮಾಡುತ್ತದೆ ಮತ್ತು ಇರಾನ್ಗೆ ಆ ಶಕ್ತಿಯಿದೆ ಎನ್ನುವುದು ರಾಜಕೀಯ ತಜ್ಞೆ ವೆಲಿನಾ ಟ್ಚಕರೋವಾ ಅವರ ಅಭಿಪ್ರಾಯವಾಗಿದೆ.
ಇರಾನ್ ಕೊನೆಯವರೆಗೆ ಹೋರಾಡಲಿದೆ
ಪ್ರಸ್ತುತ ಪರಿಸ್ಥಿತಿಯಲ್ಲಿ ಇರಾನ್ಗೆ ಹಾರ್ಮುಜ್ ಜಲಸಂಧಿ ರಾಜತಾಂತ್ರಿಕವಾಗಿ ಬಹುಮುಖ್ಯವಾಗಿದ್ದು, ಇದನ್ನು ಕಳೆದುಕೊಳ್ಳಲು ಇರಾನ್ ಎಂದಿಗೂ ಬಯಸುವುದಿಲ್ಲ. ಈ ಜಲಸಂಧಿಯನ್ನು ಉಳಿಸಿಕೊಳ್ಳಲು ಇರಾನ್ ಯಾವ ಮಟ್ಟಕ್ಕಾದರೂ ಇಳಿಯಬಹುದು ಎಂದು ಟ್ಚಕರೋವಾ ಹೇಳಿದರು. ಯುದ್ಧದಲ್ಲಿ ಏನು ಬೇಕಾದರೂ ನಡೆಯುವ ಸಂಭವನೀಯತೆ ಇರುತ್ತದೆ. ಆದರೆ ಒಂದತ್ತು ಸತ್ಯ ಇರಾನ್ ಈ ಯುದ್ಧದಲ್ಲಿ ಕೊನೆವರೆಗೆ ಹೋರಾಡಲಿದೆ ಮತ್ತು ಅದಕ್ಕೆ ಹೋರಾಡುವ ಶಕ್ತಿ ಕೂಡ ಇದೆ ಎಂದು ಅವರು ಹೇಳಿದರು.
ಅಮೆರಿಕದ ಯುದ್ಧ ಇರಾನ್ ಜೊತೆಯಲ್ಲ
ಅಮೆರಿಕದ ಯುದ್ಧ ನೀತಿ ಬಗ್ಗೆ ಮಾತನಾಡಿದ ವೆಲಿನಾ ಟ್ಚಕರೋವಾ, ಅಸಲಿಗೆ ಅಮೆರಿಕ ಇರಾನ್ ಜೊತೆ ಯುದ್ಧ ಮಾಡುತ್ತಿಲ್ಲ, ಅದು ಹಾರ್ಮುಜ್ ಜಲಸಂಧಿ ಮೂಲಕ ಚೀನಾಗೆ ಹೋಗುವ ತೈಲ ಮತ್ತು ಇತರೆ ಸಾಮಾಗ್ರಿಗಳನ್ನು ತಡೆಯಲು ಈ ರೀತಿ ಮಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅಮೆರಿಕ ಯಾರು ಚೀನಾ ಜೊತೆಗೆ ಸ್ನೇಹ ಬೆಳೆಸಲು ಹೋಗುತ್ತಾರೋ ಅವರ ಮೇಲೆ ಆಕ್ರಮಣ ಮಾಡುತ್ತಿದೆ ಎಂದು ವೆಲಿನಾ ತಮ್ಮ ವಿಚಾರವನ್ನು ತಿಳಿಸಿದರು,(ಏಜನ್ಸೀಸ್).