ಇರಾನ್​ಗೆ ಆರ್ಥಿಕ ದಿಗ್ಬಂಧನ ಹಾಕಲು ಮುಂದಾದ ಡೊನಾಲ್ಡ್​ ಟ್ರಂಪ್​ 
ವಿದೇಶ

ಇರಾನ್​​​ ಅಣು ಬಾಂಬ್​ ಪಡೆಯಲು ಸಾಧ್ಯವಿಲ್ಲ: ಆರ್ಥಿಕ ದಿಗ್ಬಂಧನಕ್ಕೆ ಮುಂದಾದ ಅಮೆರಿಕ ಅಧ್ಯಕ್ಷ; ಶತ್ರು ದೇಶಕ್ಕೆ ಬೆಂಬಲ ನೀಡಿದರೆ ಹುಷಾರ್​! Donald Trump Warnning

ಪ್ರಮುಖ ಮುಖ್ಯಾಂಶಗಳು

  • ಇರಾನ್​ಗೆ ಆರ್ಥಿಕ ದಿಗ್ಬಂಧನ ಹಾಕಲು ಮುಂದಾದ ಡೊನಾಲ್ಡ್​ ಟ್ರಂಪ್​
  • ತೆಹ್ರಾನ್​ಗೆ ಹಣಕಾಸಿನ ಸಹಾಯ ಮಾಡದಿರಿ ಎಂದು ವಿಶ್ವಕ್ಕೆ ಕರೆಕೊಟ್ಟ ಅಮೆರಿಕ ಅಧ್ಯಕ್ಷ
  • ಇರಾನ್​ನ ಸೇನೆ ನೆಲಕಚ್ಚಿದೆ ಎಂದಿರುವ ಟ್ರಂಪ್​
ವಾಷಿಂಗ್ಟನ್​​: ಇರಾನ್ ಮತ್ತು ಅಮೆರಿಕ ನಡುವಿನ ಕದನ ಮತ್ತಷ್ಟು ಸ್ಫೋಟಗೊಂಡಿದ್ದು, ಇರಾನ್‌ಗೆ ಯಾವುದೇ ರೀತಿಯ ಹಣಕಾಸು ಬೆಂಬಲ ನೀಡುವ ದೇಶಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump Warnning) ನೇರ ಎಚ್ಚರಿಕೆ ನೀಡಿದ್ದಾರೆ. ಇರಾನ್ ಜತೆ ಕೈಜೋಡಿಸುವ ದೇಶಗಳು ಆರ್ಥಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಗುಡುಗಿದ್ದಾರೆ.
ಸಾಮಾಜಿಕ ಜಾಲತಾಣ ವೇದಿಕೆ ಟ್ರೂತ್ ಸೋಷಿಯಲ್ ಮೂಲಕ ಈ ಬಿಗ್ ಅಪ್ಡೇಟ್ ಹಂಚಿಕೊಂಡಿರುವ ಟ್ರಂಪ್, ಇತಿಹಾಸದಲ್ಲೇ ಅತ್ಯಂತ ಕಠಿಣ ಆರ್ಥಿಕ ಅಭಿಯಾನವನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಟೆಹ್ರಾನ್ ಅನ್ನು ಜಾಗತಿಕ ವಾಣಿಜ್ಯ ಮತ್ತು ಹಣಕಾಸು ಜಾಲದಿಂದ ಸಂಪೂರ್ಣವಾಗಿ ಕಡಿತಗೊಳಿಸುವ ಮಾಸ್ಟರ್ ಪ್ಲಾನ್ ಅನ್ನು ಅಮೆರಿಕ ರೂಪಿಸಿದೆ.

ಟ್ರಂಪ್ ಎಚ್ಚರಿಕೆಯ ಹೈಲೈಟ್ಸ್!

ಯಾರಿಗೂ ಬಿಡುಗಡೆಯಿಲ್ಲ: ಇರಾನ್‌ನ ಹಣಕಾಸು ಸಂಸ್ಥೆಗಳು, ವ್ಯವಹಾರಗಳು, ವಿಮಾನ ನಿಲ್ದಾಣಗಳು ಅಥವಾ ಸರ್ಕಾರಿ ಘಟಕಗಳಿಗೆ ಯಾವುದೇ ಬೆಂಬಲ ನೀಡಿದರೆ ಆ ದೇಶಗಳ ಕಥೆ ಮುಗಿಯಿತು ಎಂದೇ ಅರ್ಥ.
ಕಠಿಣ ಗುರಿಗಳು: ತೈಲ ಕಳ್ಳಸಾಗಣೆ, ನಗದು ವರ್ಗಾವಣೆ, ಹಣಕಾಸು ವಿನಿಮಯ ವ್ಯವಸ್ಥೆಗಳು, ಹಡಗು ನೋಂದಣಿಗಳು ಮತ್ತು ಮುಂಭಾಗದ ನಕಲಿ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಮಿತ್ರರಾಷ್ಟ್ರಗಳಿಗೆ ಕರೆ: ಇರಾನ್ ಅನ್ನು ಜಾಗತಿಕವಾಗಿ ಪ್ರತ್ಯೇಕಿಸುವ ಈ ಅಭಿಯಾನದಲ್ಲಿ ಅಮೆರಿಕದ ಜತೆ ಕೈಜೋಡಿಸುವಂತೆ ಜಾಗತಿಕ ಮಿತ್ರರಾಷ್ಟ್ರಗಳಿಗೆ ಟ್ರಂಪ್ ಕರೆಯನ್ನು ನೀಡಿದ್ದಾರೆ.

ಎಷ್ಟೇ ಅವಕಾಶ ಕೊಟ್ಟರೂ ಇರಾನ್ ತಿದ್ದಿಕೊಳ್ಳಲಿಲ್ಲ!

ಇರಾನ್‌ಗೆ ತಮ್ಮ ಆಡಳಿತದಿಂದ ಹಲವು ಬಾರಿ ಒಪ್ಪಂದ ಮಾಡಿಕೊಳ್ಳಲು ಸುವರ್ಣ ಅವಕಾಶಗಳನ್ನು ನೀಡಲಾಗಿತ್ತು ಎಂದು ಟ್ರಂಪ್ ಬೇಸರ ವ್ಯಕ್ತಪಡಿಸಿದ್ದಾರೆ. ಇರಾನ್ ಇಸ್ಲಾಮಿಕ್ ಗಣರಾಜ್ಯಕ್ಕೆ ಒಪ್ಪಂದ ಮಾಡಿಕೊಳ್ಳಲು ನನ್ನಷ್ಟು ದೊಡ್ಡ ಅವಕಾಶವನ್ನು ಬೇರೆ ಯಾರೂ ನೀಡಿಲ್ಲ. ಆದರೆ ಟೆಹ್ರಾನ್ ಅದನ್ನು ಬಳಸಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ.
ಈ ಹೊಸ ಕ್ರಮಗಳನ್ನು ಅಭೂತಪೂರ್ವ ಆರ್ಥಿಕ ಯುದ್ಧ ಮತ್ತು ಪ್ರತ್ಯೇಕತೆ ಎಂದು ಬಣ್ಣಿಸಿರುವ ಅವರು, ಇರಾನ್ ಜತೆ ವ್ಯವಹಾರ ಮುಂದುವರಿಸುವ ಸರ್ಕಾರಗಳು ಹಾಗೂ ಕಂಪನಿಗಳ ವಿರುದ್ಧ ಮುನ್ಸೂಚನೆ ಇಲ್ಲದೆ ಮುಗಿಬೀಳುವ ಸುಳಿವು ನೀಡಿದ್ದಾರೆ.

ಇರಾನ್ ಮಿಲಿಟರಿ ಶಕ್ತಿ ಛಿದ್ರ-ಛಿದ್ರ: ಟ್ರಂಪ್ ದಾವೆ

ಇರಾನ್‌ನ ಸೇನಾ ಸಾಮರ್ಥ್ಯಗಳು ಪ್ರಸ್ತುತ ಸಂಪೂರ್ಣವಾಗಿ ದುರ್ಬಲಗೊಂಡಿವೆ ಎಂದು ಟ್ರಂಪ್ ವಿಶ್ಲೇಷಿಸಿದ್ದಾರೆ. ಇರಾನ್ ನೌಕಾಪಡೆ ನಾಶವಾಗಿದೆ, ವಾಯುಪಡೆ ಅಡಕತ್ತರಿಯಲ್ಲಿ ಸಿಲುಕಿದೆ ಮತ್ತು ಪ್ರಮುಖ ಮಿಲಿಟರಿ ಕಾರ್ಖಾನೆಗಳು ಧ್ವಂಸಗೊಂಡಿವೆ ಎಂದು ಅವರು ಆರೋಪಿಸಿದ್ದಾರೆ. ಇರಾನ್ ಆರ್ಥಿಕತೆಯು ಈಗಾಗಲೇ ತೀವ್ರ ಉಸಿರುಗಟ್ಟಿಸುವ ಸ್ಥಿತಿಯಲ್ಲಿದ್ದು, ಈ ಹೊಸ ನಿಷೇಧಗಳು ಆ ದೇಶದ ಉಸಿರನ್ನೇ ನಿಲ್ಲಿಸಲಿವೆ ಎಂದಿದ್ದಾರೆ.

ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರ ಪಡೆಯುವುದಿಲ್ಲ

ತಮ್ಮ ಪೋಸ್ಟ್‌ನ ಕೊನೆಯಲ್ಲಿ ಇರಾನ್‌ನ ಪರಮಾಣು ಮಹತ್ವಾಕಾಂಕ್ಷೆಯ ವಿರುದ್ಧ ಮತ್ತೊಮ್ಮೆ ಗುಡುಗಿರುವ ಟ್ರಂಪ್, ಜಾಗತಿಕ ಭಯೋತ್ಪಾದನೆಯನ್ನು ಹರಡುವ ಇರಾನ್‌ನ ಸಾಮರ್ಥ್ಯಕ್ಕೆ ಶಾಶ್ವತವಾಗಿ ಬ್ರೇಕ್ ಹಾಕಲಾಗುವುದು ಎಂದು ಹೇಳಿದ್ದಾರೆ. ಅಂತಿಮವಾಗಿ ತಮ್ಮ ಖಡಕ್ ನಿಲುವನ್ನು ಸ್ಪಷ್ಟಪಡಿಸುತ್ತಾ, ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದುವುದಿಲ್ಲ ಎಂದು ಘೋಷಿಸಿದ್ದಾರೆ, (ಏಜನ್ಸೀಸ್​).