ಅಮೆರಿಕದಲ್ಲಿ ವರ್ಷಕ್ಕೆ 1 ಕೋಟಿ ರೂ. ದುಡಿಯುತ್ತಿದ್ರೂ ಈ ಒಂದು ವಿಚಾರದಲ್ಲಿ ನನ್ನ ದೇಶವೇ ಬೆಸ್ಟ್​ ಎಂದ ಭಾರತೀಯ ಮಹಿಳೆ! Indian  
ವಿದೇಶ

ಅಮೆರಿಕದಲ್ಲಿ ವರ್ಷಕ್ಕೆ 1 ಕೋಟಿ ರೂ. ದುಡಿಯುತ್ತಿದ್ರೂ ಈ ಒಂದು ವಿಚಾರದಲ್ಲಿ ನನ್ನ ದೇಶವೇ ಬೆಸ್ಟ್​ ಎಂದ ಭಾರತೀಯ ಮಹಿಳೆ! Indian woman

ನವದೆಹಲಿ: ಅಮೆರಿಕಕ್ಕೆ ಹೋಗಿ ಒಂದು ದೊಡ್ಡ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ವರ್ಷಕ್ಕೆ ಕೋಟ್ಯಂತರ ರೂಪಾಯಿ ಸಂಬಳ ಪಡೆಯಬೇಕು ಎಂಬುದು ಅನೇಕ ಭಾರತೀಯರ ಕನಸಾಗಿರುತ್ತದೆ. ಆದರೆ, ಈ ಕನಸಿನ ಹಿಂದಿರುವ ಕಹಿ ವಾಸ್ತವವನ್ನು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಮಹಿಳೆಯೊಬ್ಬರು ( Indian woman ) ಜಗತ್ತಿನ ಮುಂದೆ ಬಿಚ್ಚಿಟ್ಟಿದ್ದಾರೆ.

ಅಮೆರಿಕದಲ್ಲಿ ವಾಸಿಸುತ್ತಿರುವ ನಿತಿನ್ ಮಲ್ಹೋತ್ರಾ ಅವರು ತಮ್ಮ 'ದೇಸಿ ಡ್ಯಾಡ್ ಇನ್ ಅಮೆರಿಕ' (desidadinamerica) ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ತಮ್ಮ ಸಹೋದರಿ ಮಹಿಮಾ ರಾಠಿ ಅವರ ಮಾಸಿಕ ಆದಾಯ ಮತ್ತು ಖರ್ಚುಗಳ ಸಂಪೂರ್ಣ ಲೆಕ್ಕಾಚಾರವನ್ನು ನೀಡಿದ್ದಾರೆ. ವರ್ಷಕ್ಕೆ ಸುಮಾರು 1 ಕೋಟಿ ರೂಪಾಯಿ (ತಿಂಗಳಿಗೆ ಅಂದಾಜು 7.5 ಲಕ್ಷ ರೂ.) ಸಂಪಾದಿಸುತ್ತಿದ್ದರೂ, ಅಮೆರಿಕದಲ್ಲಿ ತಾವು ಕೇವಲ 'ಮಧ್ಯಮ ವರ್ಗದ' ಜೀವನವನ್ನಷ್ಟೇ ನಡೆಸಲು ಸಾಧ್ಯವಾಗುತ್ತಿದೆ ಎಂದು ಮಹಿಮಾ ಹೇಳಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ತಮ್ಮ 1 ಕೋಟಿ ರೂಪಾಯಿ ವಾರ್ಷಿಕ ಆದಾಯದ ಲೆಕ್ಕಾಚಾರವನ್ನು ವಿವರಿಸಿರುವ ಮಹಿಮಾ ರಾಠಿ, ಅಮೆರಿಕದಲ್ಲಿ ತಮ್ಮ ಒಟ್ಟು ಮಾಸಿಕ ವೇತನ 8,000 ಡಾಲರ್ ಆಗಿದ್ದು, ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು 7.5 ಲಕ್ಷ ರೂಪಾಯಿಗಳಿಗೆ ಸಮಾನವಾಗಿದೆ ಎಂದಿದ್ದಾರೆ. ಆದರೆ, ಸಂಬಳ ಕೈಗೆ ಬರುತ್ತಿದ್ದಂತೆಯೇ ದೊಡ್ಡ ಮೊತ್ತವು ತೆರಿಗೆ ಮತ್ತು ಅಗತ್ಯ ವೆಚ್ಚಗಳ ರೂಪದಲ್ಲಿ ಕರಗಿಹೋಗುತ್ತದೆ. ಮೊದಲನೆಯದಾಗಿ, ಆದಾಯ ತೆರಿಗೆಗಾಗಿಯೇ (Tax) ಪ್ರತಿ ತಿಂಗಳು ಸುಮಾರು 1.4 ಲಕ್ಷ ರೂಪಾಯಿ ಪಾವತಿಸಬೇಕಾಗುತ್ತದೆ. ಇದಾದ ನಂತರ ಅತಿ ದೊಡ್ಡ ಖರ್ಚು ಎಂದರೆ ಮನೆಯ ಸಾಲದ ಕಂತು (Home Loan EMI), ಇದಕ್ಕಾಗಿಯೇ ಬರೋಬ್ಬರಿ 2.34 ಲಕ್ಷ ರೂಪಾಯಿ ವ್ಯಯವಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ಇಷ್ಟಕ್ಕೆ ಖರ್ಚಿನ ಪಟ್ಟಿ ಮುಗಿಯುವುದಿಲ್ಲ; ಅಮೆರಿಕದ ದುಬಾರಿ ಜೀವನಶೈಲಿಯಲ್ಲಿ ದಿನನಿತ್ಯದ ಅಗತ್ಯಗಳಿಗೂ ದೊಡ್ಡ ಮೊತ್ತವನ್ನೇ ತೆರಬೇಕಾಗುತ್ತದೆ. ಮಹಿಮಾ ಅವರ ಲೆಕ್ಕಾಚಾರದ ಪ್ರಕಾರ, ಪ್ರತಿ ತಿಂಗಳು ಆಹಾರ ಮತ್ತು ದಿನಸಿ ಸಾಮಗ್ರಿಗಳಿಗಾಗಿ ಸುಮಾರು 94,000 ರೂಪಾಯಿ ಖರ್ಚಾಗುತ್ತದೆ. ಇದರ ಜೊತೆಗೆ ಆರೋಗ್ಯ ವಿಮೆಗಾಗಿ ಪ್ರತ್ಯೇಕವಾಗಿ 47,000 ರೂಪಾಯಿ, ಕಾರಿನ ಪೆಟ್ರೋಲ್ ಮತ್ತು ವಿಮೆಗಾಗಿ ಮತ್ತೆ 47,000 ರೂಪಾಯಿ ಹಾಗೂ ಫೋನ್, ಇಂಟರ್ನೆಟ್, ವಿದ್ಯುತ್ ಮತ್ತು ನೀರಿನ ಬಿಲ್‌ಗಳಿಗಾಗಿ 47,000 ರೂಪಾಯಿ ಪಾವತಿಸಬೇಕಾಗುತ್ತದೆ. ಅಲ್ಲದೆ, ಮಕ್ಕಳ ಆರೈಕೆ ಮತ್ತು ಇತರ ಅಗತ್ಯಗಳಿಗಾಗಿ ಸುಮಾರು 28,000 ರೂಪಾಯಿ ಹಾಗೂ ಇನ್ನಿತರ ಸಣ್ಣಪುಟ್ಟ ಖರ್ಚುಗಳಿಗಾಗಿ 19,000 ರೂಪಾಯಿ ವೆಚ್ಚವಾಗುತ್ತದೆ.

ಈ ಎಲ್ಲಾ ಕಡ್ಡಾಯ ಖರ್ಚುಗಳನ್ನು ಕಳೆದ ನಂತರ, ತಿಂಗಳ ಕೊನೆಯಲ್ಲಿ ಮಹಿಮಾ ಅವರ ಕೈಯಲ್ಲಿ ಉಳಿಯುವುದು ಕೇವಲ 94,000 ರೂಪಾಯಿ ಮಾತ್ರ! ವಿಶೇಷವೆಂದರೆ, ಈ ಉಳಿದ ಮೊತ್ತದಲ್ಲಿ ಅವರ ಸ್ವಂತ ವೈಯಕ್ತಿಕ ಖರ್ಚುಗಳು ಇನ್ನೂ ಸೇರಿರುವುದಿಲ್ಲ. ಭಾರತದಲ್ಲಿ ಇದ್ದಾಗಿನ ದಿನಗಳನ್ನು ನೆನಪಿಸಿಕೊಂಡಿರುವ ಮಹಿಮಾ, "ನಾನು ಭಾರತದಲ್ಲಿದ್ದಾಗ ವಾರ್ಷಿಕ 15 ಲಕ್ಷ ರೂಪಾಯಿ ಪ್ಯಾಕೇಜ್ ಪಡೆಯುತ್ತಿದ್ದೆ. ಆದರೆ ಆ ಹಣದಲ್ಲೇ ನಾನು ಸಾಕಷ್ಟು ಉಳಿತಾಯ ಮಾಡುತ್ತಿದ್ದೆ. ಈಗ ಅಮೆರಿಕದಲ್ಲಿ ನನ್ನ ಸಂಬಳ ಆರು ಪಟ್ಟು ಹೆಚ್ಚಾಗಿದೆ, ಆದರೆ ಅದಕ್ಕೆ ಹೋಲಿಸಿದರೆ ನನ್ನ ಉಳಿತಾಯ ಮಾತ್ರ ಬಹುತೇಕ ಶೂನ್ಯಕ್ಕೆ ಬಂದು ನಿಂತಿದೆ" ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.

ಸದ್ಯ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗಿದ್ದು, ನೆಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. "ಕಡಿಮೆ ಆದಾಯವಿದ್ದರೂ ನೆಮ್ಮದಿ ಮತ್ತು ಉಳಿತಾಯ ಎರಡೂ ಇರುವ ನಮ್ಮ ಭಾರತವೇ ಇದಕ್ಕಿಂತ ಎಷ್ಟೋ ವಾಸಿ" ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ಅಮೆರಿಕದ ಉನ್ನತ ಜೀವನಮಟ್ಟ, ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಪಡೆಯಲು ಜನರು ಇಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡಲು ಸಿದ್ಧರಿರುತ್ತಾರೆ ಎಂದು ಕೆಲವು ಬಳಕೆದಾರರು ಸಮರ್ಥಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ, ವಿದೇಶದ ಕೋಟಿ ರೂಪಾಯಿ ಸಂಬಳದ ಆಕರ್ಷಣೆಯ ಹಿಂದಿರುವ ಆರ್ಥಿಕ ಸವಾಲುಗಳಿಗೆ ಈ ವಿಡಿಯೋ ಕನ್ನಡಿ ಹಿಡಿದಿದೆ, (ಏಜೆನ್ಸೀಸ್​).