ಬ್ರಿಸ್ಬೇನ್ ನದಿಯಲ್ಲಿ ನೂರಾರು ಅನಕೊಂಡಗಳು! ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿರೋ ವಿಡಿಯೋದ ಅಸಲಿಯತ್ತೇನು? 
ವಿದೇಶ

ಬ್ರಿಸ್ಬೇನ್ ನದಿಯಲ್ಲಿ ನೂರಾರು ಅನಕೊಂಡಗಳು! ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿರೋ ವಿಡಿಯೋದ ಅಸಲಿಯತ್ತೇನು? Anaconda

ನವದೆಹಲಿ: ಈ ಡಿಜಿಟಲ್​ ಜಗತ್ತಿನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಯುಗ ಆರಂಭವಾದಾಗಿನಿಂದ ಪ್ರತಿದಿನ ನೂರಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇವುಗಳಲ್ಲಿ ಯಾವುದು ಅಸಲಿ? ಮತ್ತು ಯಾವುದು ನಕಲಿ? ಎಂದು ಗುರುತಿಸುವುದೇ ಜನಸಾಮಾನ್ಯರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇದೀಗ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಬ್ರಿಸ್ಬೇನ್ ನದಿಯಲ್ಲಿ ನೂರಾರು ಅನಕೊಂಡ ಹಾವುಗಳು ಕಾಣಿಸಿಕೊಂಡಿವೆ ಎಂಬ ಸತ್ಯಕ್ಕೆ ದೂರವಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ ಮತ್ತು ನೆಟ್ಟಿಗರನ್ನು ಹುಬ್ಬೇರಿಸಿದೆ.

ನದಿ ನೀರಿನಲ್ಲಿ ನೂರಾರು ಹಾವುಗಳು ಈಜಾಡುತ್ತಿರುವಂತೆ ಮೇಲಿನಿಂದ ಸೆರೆಹಿಡಿಯಲಾದ ದೃಶ್ಯಗಳು ವೈರಲ್ ವಿಡಿಯೋದಲ್ಲಿವೆ. ವಾರದ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ನೂರಾರು ಅನಕೊಂಡಗಳು ಬ್ರಿಸ್ಬೇನ್ ನದಿಗೆ ಬಂದಿದ್ದು, ಇದು 'ಸಾಮೂಹಿಕ ಸಂತಾನೋತ್ಪತ್ತಿ ಕಾರ್ಯಕ್ರಮ' (ಮ್ಯಾಸ್ ಬ್ರೀಡಿಂಗ್ ಈವೆಂಟ್) ಎಂದು ವಿಡಿಯೋದಲ್ಲಿ ಬಿಂಬಿಸಲಾಗಿದೆ. ನದಿ ಬಳಿ ಹೋಗಬೇಡಿ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎಂಬ ಸುಳ್ಳು ಮಾಹಿತಿಯನ್ನು ‘ಚಾನೆಲ್ 6 ಕ್ವೀನ್ಸ್‌ಲ್ಯಾಂಡ್’ ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾಗಿದ್ದು, ಇದು ಕ್ಷಣಮಾತ್ರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆದರೆ, ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದ ಅನೇಕ ಬಳಕೆದಾರರು ಇದು ಸಂಪೂರ್ಣವಾಗಿ AI ತಂತ್ರಜ್ಞಾನದಿಂದ ಸೃಷ್ಟಿಸಲ್ಪಟ್ಟ ನಕಲಿ ವಿಡಿಯೋ ಎಂದು ವಾದಿಸಿದ್ದಾರೆ. ಮೂಲತಃ ಅನಕೊಂಡಗಳು ಆಸ್ಟ್ರೇಲಿಯಾದಲ್ಲಿ ಕಂಡುಬರುವ ಜೀವಿಗಳಲ್ಲ, ಬದಲಿಗೆ ಅವು ದಕ್ಷಿಣ ಅಮೆರಿಕಾದ ಅಮೆಜಾನ್ ಕಾಡುಗಳಲ್ಲಿ ಮಾತ್ರ ಹೆಚ್ಚಾಗಿ ವಾಸಿಸುತ್ತವೆ. ಒಂದು ವೇಳೆ ಇಂತಹ ಅಸಾಧಾರಣ ಘಟನೆ ಬ್ರಿಸ್ಬೇನ್ ನದಿಯಲ್ಲಿ ನಿಜಕ್ಕೂ ನಡೆದಿದ್ದರೆ, ಅದು ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತಿತ್ತು ಎಂದು ತಜ್ಞರು ಮತ್ತು ನೆಟ್ಟಿಗರು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಇಂತಹ ಸತ್ಯಕ್ಕೆ ದೂರವಾದ ವಿಡಿಯೋಗಳು ಜನರನ್ನು ದಾರಿ ತಪ್ಪಿಸುತ್ತಿದ್ದು, ಯಾವುದೇ ಅಧಿಕೃತ ಮಾಹಿತಿಯಿಲ್ಲದೆ ಇಂತಹ ಸುಳ್ಳು ಸುದ್ದಿಗಳನ್ನು ನಂಬಬಾರದು ಹಾಗೂ ಇತರೆಡೆಗೆ ಶೇರ್ ಮಾಡಬಾರದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಎಐ ಹಾವಳಿಯಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ನಕಲಿ ಕಂಟೆಂಟ್‌ಗಳ ಹಾವಳಿ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಎಚ್ಚೆತ್ತುಕೊಳ್ಳುವುದು ಅತ್ಯಗತ್ಯವಾಗಿದೆ, (ಏಜೆನ್ಸೀಸ್​).