Hubble Space Telescope : ಸಾಮಾನ್ಯವಾಗಿ ನಕ್ಷತ್ರಗಳು ಮತ್ತು ಗ್ರಹಗಳು ಒಂದೇ ಸಮಯದಲ್ಲಿ ಒಟ್ಟಿಗೆ ಹುಟ್ಟುತ್ತವೆ ಎಂದು ನಂಬಲಾಗಿದೆಯಾದರೂ, ಸಾಯುತ್ತಿರುವ ನಕ್ಷತ್ರವೊಂದರ ಸುತ್ತಲೂ 'ಎರಡನೇ ತಲೆಮಾರಿನ' ಹೊಸ ಗ್ರಹವೊಂದು ರೂಪುಗೊಂಡಿರಬಹುದು ಎಂಬ ಅಚ್ಚರಿಯ ಸುಳಿವು ಖಗೋಳ ವಿಜ್ಞಾನಿಗಳಲ್ಲಿ ಹೊಸ ಕುತೂಹಲ ಮೂಡಿಸಿದೆ. ಹೌದು, ನಕ್ಷತ್ರವೊಂದು ತನ್ನ ಜೀವಿತಾವಧಿಯನ್ನು ಪೂರ್ಣಗೊಳಿಸಿ ಸತ್ತುಹೋಗುವಾಗ ಹೊರಹಾಕುವ ಧೂಳು ಮತ್ತು ಅನಿಲಗಳ ಅವಶೇಷಗಳು ಕಾಲಾನಂತರದಲ್ಲಿ ಮತ್ತೆ ಒಂದಾಗಿ ಸೇರಿಕೊಂಡು ಹೊಸ ಗ್ರಹಕ್ಕೆ ಜನ್ಮ ನೀಡಲು ಸಾಧ್ಯವಿದೆ ಎಂಬುದು ವಿಜ್ಞಾನಿಗಳ ಈ ಹೊಸ ಆವಿಷ್ಕಾರದ ಸಾರಾಂಶವಾಗಿದೆ.
ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕದ ಹಳೆಯ ದತ್ತಾಂಶವನ್ನು ಮರುಪರಿಶೀಲಿಸಿದ ಸಂಶೋಧಕರು ಈ ಸಾಧ್ಯತೆಯನ್ನು ಗುರುತಿಸಿದ್ದಾರೆ. HS 0209+0832 ಎಂಬ ಹೆಸರಿನ ಬಿಳಿ ಕುಬ್ಜ ನಕ್ಷತ್ರದ ಸುತ್ತ ಇಂತಹ ಗ್ರಹವೊಂದು ಇರಬಹುದೆಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಈ ಅಧ್ಯಯನದಲ್ಲಿ ನಿಯೋಬಿಯಂ ಎಂಬ ರಾಸಾಯನಿಕ ಮೂಲವಸ್ತುವಿನ ಅಸಾಮಾನ್ಯ ಪ್ರಮಾಣ ಪತ್ತೆಯಾಗಿರುವುದು ವಿಶೇಷ.
1999ರಲ್ಲಿ ಹಬಲ್ ದೂರದರ್ಶಕವು ನಕ್ಷತ್ರವೊಂದನ್ನು ವೀಕ್ಷಿಸಿದಾಗ ಅಲ್ಲಿ ನೂರಕ್ಕೂ ಹೆಚ್ಚು ಅಸ್ಪಷ್ಟ ರಾಸಾಯನಿಕ ಲಕ್ಷಣಗಳು ಪತ್ತೆಯಾಗಿದ್ದವು ಆದರೆ, ಅವು ಯಾವ ಮೂಲವಸ್ತುಗಳೆಂದು ಸ್ಪಷ್ಟವಿರಲಿಲ್ಲ. ಇತ್ತೀಚೆಗೆ ವಾರ್ವಿಕ್ ವಿಶ್ವವಿದ್ಯಾಲಯದ ಸಂಶೋಧಕ ಜೇಮಿ ವಿಲಿಯಮ್ಸ್ ಅವರು ನವೀಕರಿಸಿದ ಡೇಟಾಬೇಸ್ ಸಹಾಯದಿಂದ ಈ ಹಳೆಯ ದಾಖಲೆಗಳನ್ನು ಮರುಪರಿಶೀಲಿಸಿದಾಗ, ಆ ನಿಗೂಢ ಲಕ್ಷಣಗಳು 'ನಿಯೋಬಿಯಂ' (Niobium)ಗೆ ಹೋಲಿಕೆಯಾಗಿರುವುದು ಬೆಳಕಿಗೆ ಬಂದಿದೆ. ಈ ಆಶ್ಚರ್ಯಕರ ಸುಳಿವು ಆ ಸಾಯುತ್ತಿರುವ ನಕ್ಷತ್ರದ ಸುತ್ತಲೂ ಏನೋ ಅಪರೂಪದ ಹಾಗೂ ವಿಸ್ಮಯಕಾರಿ ಪ್ರಕ್ರಿಯೆ ನಡೆಯುತ್ತಿರಬಹುದು ಎಂಬ ಗಂಭೀರ ಯೋಚನೆಗೆ ವಿಜ್ಞಾನಿಗಳನ್ನು ದೂಡಿದೆ.
ಸಂಶೋಧಕರು ನಾಸಾದ ಈ ಹಿಂದೆ ಕಾರ್ಯನಿರ್ವಹಿಸಿದ್ದ ಫಾರ್ ಅಲ್ಟ್ರಾವಯೊಲೆಟ್ ಸ್ಪೆಕ್ಟ್ರೋಸ್ಕೋಪಿಕ್ ಎಕ್ಸ್‌ಪ್ಲೋರರ್ (FUSE) ಉಪಗ್ರಹದ ದತ್ತಾಂಶವನ್ನೂ ಪರಿಶೀಲಿಸಿದರು. ಅದರಲ್ಲಿಯೂ ನಿಯೋಬಿಯಂ ಇರುವುದಕ್ಕೆ ಬಲವಾದ ಸೂಚನೆಗಳು ದೊರೆತಿವು.
ನಮ್ಮ ಸೂರ್ಯನಂತಹ ಕಡಿಮೆ ದ್ರವ್ಯರಾಶಿಯ ನಕ್ಷತ್ರಗಳು ತಮ್ಮಲ್ಲಿರುವ ಪರಮಾಣು ಇಂಧನವನ್ನು ಬಳಸಿಕೊಂಡ ಬಳಿಕ ಹೊರಪದರಗಳನ್ನು ಕಳೆದುಕೊಳ್ಳುತ್ತವೆ. ಅಂತಿಮವಾಗಿ ಅವುಗಳ ಮಧ್ಯಭಾಗ ಉಳಿದುಕೊಳ್ಳುತ್ತದೆ. ಇಂತಹ ಉಳಿದ ನಕ್ಷತ್ರದ ಮಧ್ಯಭಾಗವನ್ನು ಬಿಳಿ ಕುಬ್ಜ ಎಂದು ಕರೆಯಲಾಗುತ್ತದೆ. ನಕ್ಷತ್ರದ ಅಂತಿಮ ಹಂತದಲ್ಲಿ ಹೊರಬಿಡಲ್ಪಡುವ ವಸ್ತುಗಳು ಬಾಹ್ಯಾಕಾಶದಲ್ಲಿ ಹರಡುತ್ತವೆ. ಆ ವಸ್ತುಗಳಿಂದ ಹೊಸ ಗ್ರಹವೊಂದು ರೂಪುಗೊಂಡಿದ್ದರೆ, ಅದನ್ನು ಎರಡನೇ ತಲೆಮಾರಿನ ಗ್ರಹ ಎಂದು ಕರೆಯಬಹುದು.
ನಮ್ಮ ಭೂಮಿ ಸೇರಿದಂತೆ ಸೌರವ್ಯೂಹದ ಗ್ರಹಗಳು ಸೂರ್ಯನ ಜನನದ ಸಮಯದಲ್ಲಿ ಉಳಿದಿದ್ದ ಅನಿಲ ಮತ್ತು ಧೂಳಿನ ವಸ್ತುಗಳಿಂದ ರೂಪುಗೊಂಡ ಮೊದಲ ತಲೆಮಾರಿನ ಗ್ರಹಗಳಾಗಿವೆ. ಆದರೆ, ಸಾಯುತ್ತಿರುವ ನಕ್ಷತ್ರವೊಂದರಿಂದ ಹೊರಬಂದ ವಸ್ತುಗಳೇ ಹೊಸ ಗ್ರಹದ ನಿರ್ಮಾಣಕ್ಕೆ ಕಾರಣವಾಗಿರಬಹುದೆಂಬ ಸಾಧ್ಯತೆ ಈ ಅಧ್ಯಯನದ ವಿಶೇಷವಾಗಿದೆ.
ನಾಸಾದ ಟ್ರಾನ್ಸಿಟಿಂಗ್ ಎಕ್ಸೋಪ್ಲಾನೆಟ್ ಸರ್ವೆ ಉಪಗ್ರಹ (TESS) ಈ ಬಿಳಿ ಕುಬ್ಜ ನಕ್ಷತ್ರವನ್ನು ನಾಲ್ಕು ತಿಂಗಳ ಕಾಲ ವೀಕ್ಷಿಸಿದೆ. ಈ ಅವಧಿಯಲ್ಲಿ ನಕ್ಷತ್ರದ ಹೊಳಪಿನಲ್ಲಿ ಪುನರಾವರ್ತಿತ ಬದಲಾವಣೆಗಳು ಕಂಡುಬಂದಿವೆ. ಈ ಬದಲಾವಣೆಗಳು ನಕ್ಷತ್ರದ ಸುತ್ತ ಒಂದು ಗ್ರಹ ಪರಿಭ್ರಮಿಸುತ್ತಿರಬಹುದೆಂಬ ಸೂಚನೆ ನೀಡಿವೆ. ಸಂಶೋಧಕರ ಅಂದಾಜಿನ ಪ್ರಕಾರ, ಈ ಸಂಭಾವ್ಯ ಗ್ರಹವು ಗುರುಗ್ರಹದ ಗಾತ್ರದ ಅನಿಲ ದೈತ್ಯವಾಗಿರಬಹುದು. ಅದು ನಕ್ಷತ್ರದಿಂದ ಸುಮಾರು 60 ಲಕ್ಷ ಕಿಲೋಮೀಟರ್ ದೂರದಲ್ಲಿರಬಹುದು. ಹೋಲಿಕೆಗೆ, ನಮ್ಮ ಸೌರವ್ಯೂಹದಲ್ಲಿ ಬುಧ ಗ್ರಹವು ಸೂರ್ಯನಿಂದ ಸುಮಾರು 5.8 ಕೋಟಿ ಕಿಲೋಮೀಟರ್ ದೂರದಲ್ಲಿದೆ. ಅಂದರೆ, ಈ ಸಂಭಾವ್ಯ ಗ್ರಹವು ತನ್ನ ನಕ್ಷತ್ರಕ್ಕೆ ಅತ್ಯಂತ ಹತ್ತಿರದಲ್ಲಿರಬಹುದು.
ಈ ಬಿಳಿ ಕುಬ್ಜ ನಕ್ಷತ್ರ ಇನ್ನೂ ಅತ್ಯಂತ ಬಿಸಿಯಾಗಿರುವುದರಿಂದ, ಅದರ ಶಕ್ತಿಯ ವಿಕಿರಣವು ಹತ್ತಿರದಲ್ಲಿರುವ ಗ್ರಹದ ಹೊರಪದರಗಳನ್ನು ಕಳೆದುಕೊಳ್ಳುವಂತೆ ಮಾಡುತ್ತಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಗ್ರಹದಿಂದ ಹೊರಬೀಳುವ ಅನಿಲ ಮತ್ತು ಇತರ ವಸ್ತುಗಳು ಧೂಮಕೇತುವಿನ ಬಾಲದಂತೆ ಉದ್ದನೆಯ ರಚನೆಯನ್ನು ರೂಪಿಸಬಹುದು. ಈ ವಸ್ತುಗಳು ನಕ್ಷತ್ರದ ಸುತ್ತಲೂ ಒಂದು ಚಕ್ರದಂತೆ ಹರಡಿ, ಕೊನೆಗೆ ನಕ್ಷತ್ರದ ಮೇಲ್ಮೈಗೆ ಮರಳಬಹುದು. ಹಬಲ್ ದೂರದರ್ಶಕದಲ್ಲಿ ನಿಯೋಬಿಯಂ ಪತ್ತೆಯಾಗಿರುವುದಕ್ಕೆ ಈ ಪ್ರಕ್ರಿಯೆಯೂ ಒಂದು ಸಂಭವನೀಯ ವಿವರಣೆಯಾಗಿರಬಹುದು.
ವಿಸ್ಕಾನ್ಸಿನ್–ಮ್ಯಾಡಿಸನ್ ವಿಶ್ವವಿದ್ಯಾಲಯದ ಸೈದ್ಧಾಂತಿಕ ಖಗೋಳ ಭೌತವಿಜ್ಞಾನಿ ನಿಕೋಲಸ್ ಸ್ಟೋನ್ ಅವರ ಪ್ರಕಾರ, ಕಬ್ಬಿಣಕ್ಕಿಂತ ಭಾರವಾದ ನಿಯೋಬಿಯಂನಂತಹ ಕೆಲವು ಮೂಲವಸ್ತುಗಳು ಸಾಯುತ್ತಿರುವ ನಕ್ಷತ್ರಗಳಲ್ಲಿನ ವಿಶೇಷ ಪರಿಸ್ಥಿತಿಗಳಲ್ಲಿ ರೂಪುಗೊಳ್ಳುತ್ತವೆ. ಇಂತಹ ಮೂಲವಸ್ತುಗಳ ಉಪಸ್ಥಿತಿಯು ನಕ್ಷತ್ರದ ಒಳಗಿನ ವಸ್ತುಗಳು ಬಾಹ್ಯಾಕಾಶಕ್ಕೆ ಬಿಡುಗಡೆಯಾಗಿರುವ ಸಾಧ್ಯತೆಯನ್ನು ಸೂಚಿಸಬಹುದು.
ಈ ಸಂಶೋಧನೆಯು ನಕ್ಷತ್ರಗಳ ಜೀವನಚಕ್ರ ಮತ್ತು ಗ್ರಹಗಳ ರಚನೆಯ ಕುರಿತು ಹೊಸ ಪ್ರಶ್ನೆಗಳನ್ನು ಎತ್ತಿದೆ. ಆದರೂ, ಈ ವ್ಯವಸ್ಥೆಯಲ್ಲಿ ಎರಡನೇ ತಲೆಮಾರಿನ ಗ್ರಹವಿದೆ ಎಂಬುದನ್ನು ಸಂಪೂರ್ಣವಾಗಿ ಖಚಿತಪಡಿಸಲು ಹೆಚ್ಚಿನ ಅಧ್ಯಯನಗಳು ಅಗತ್ಯವಿದೆ. ಗ್ರಹವು ತನ್ನ ವಾತಾವರಣದ ಕೆಲವು ಭಾಗಗಳನ್ನು ಕಳೆದುಕೊಳ್ಳುತ್ತಿದ್ದರೂ, ಅದು ನಕ್ಷತ್ರದ ಸುತ್ತಲಿನ ವ್ಯವಸ್ಥೆಯಲ್ಲಿ ಉಳಿಯುವ ಸಾಧ್ಯತೆಯಿದೆ ಎಂದು ಜೇಮಿ ವಿಲಿಯಮ್ಸ್ ಅಭಿಪ್ರಾಯಪಟ್ಟಿದ್ದಾರೆ.
ನಕ್ಷತ್ರವೊಂದರ ಜೀವನ ಅಂತ್ಯಗೊಂಡ ಬಳಿಕವೂ ಅದರ ಸುತ್ತ ಹೊಸ ಗ್ರಹಗಳ ನಿರ್ಮಾಣಕ್ಕೆ ಅವಕಾಶವಿರಬಹುದೇ ಎಂಬ ಪ್ರಶ್ನೆಗೆ ಈ ಅಧ್ಯಯನ ಮಹತ್ವದ ಸುಳಿವು ನೀಡಿದೆ. ಮುಂದಿನ ಸಂಶೋಧನೆಗಳು ಈ ಸಾಧ್ಯತೆಯನ್ನು ದೃಢಪಡಿಸಿದರೆ, ಗ್ರಹಗಳು ಹೇಗೆ ರೂಪುಗೊಳ್ಳುತ್ತವೆ ಎಂಬ ನಮ್ಮ ತಿಳಿವಳಿಕೆಗೆ ಹೊಸ ಆಯಾಮ ದೊರೆಯಬಹುದು, (ಏಜೆನ್ಸೀಸ್).