ಸಾಂದರ್ಭಿಕ ಚಿತ್ರ 
ವಿದೇಶ

ರಕ್ತದ ಬ್ಯಾಂಕ್ ಅನ್ನೇ ಹ್ಯಾಕ್​ ಮಾಡಿದ ಹ್ಯಾಕರ್‌ಗಳು: ಅದೃಷ್ಟವಶಾತ್​ ಫ್ರಾನ್ಸ್‌ನಲ್ಲಿ ತಪ್ಪಿತು ಭಾರಿ ಅನಾಹುತ! Hackers Target Blood Bank

ನವೆಂಬರ್ 1 ಮತ್ತು 2ರ ನಡುವೆ ನಡೆದ ದಾಳಿಯಲ್ಲಿ ಫ್ರೀಜರ್‌ಗಳ ತಾಪಮಾನವನ್ನು ಮೈನಸ್ 30 ಡಿಗ್ರಿ ಸೆಲ್ಸಿಯಸ್‌ನಿಂದ ಬರೋಬ್ಬರಿ 110 ಡಿಗ್ರಿ ಸೆಲ್ಸಿಯಸ್‌ಗೆ ಬದಲಾಯಿಸಲಾಗಿದೆ ಎಂದು ವರದಿಯಾಗಿದೆ.

Hackers Target Blood Bank : ಫ್ರಿಡ್ಜ್ ಎಂದರೆ ಆಹಾರ ಪದಾರ್ಥಗಳು ಕೆಡದಂತೆ ತಂಪಾಗಿಡುವ ಸಾಧನ. ಆದರೆ ಇದೇ ಫ್ರಿಡ್ಜ್ ಈಗ ಹ್ಯಾಕರ್‌ಗಳ ಕೈಯಲ್ಲಿ ಅಪಾಯಕಾರಿ ಅಸ್ತ್ರವಾಗುತ್ತಿದೆ ಸೂಪರ್‌ಮಾರ್ಕೆಟ್‌ಗಳ ಶೀತಲೀಕರಣ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡಿದ್ದ ಸೈಬರ್ ದಾಳಿಕೋರರು ಇದೀಗ ಜೀವ ಉಳಿಸುವ ರಕ್ತ ಮತ್ತು ಪ್ಲಾಸ್ಮಾ ಸಂಗ್ರಹಣಾ ಘಟಕಗಳ ಮೇಲೂ ದಾಳಿ ನಡೆಸಿದ್ದಾರೆ. ಫ್ರಾನ್ಸ್‌ನಲ್ಲಿ ನಡೆದ ಈ ಘಟನೆ ಜಗತ್ತಿನಾದ್ಯಂತ ಆತಂಕ ಮೂಡಿಸಿದೆ.

ಫ್ರಾನ್ಸ್‌ನ ರಾಷ್ಟ್ರೀಯ ರಕ್ತ ಸಂಸ್ಥೆಯಾದ ಎಟಾಬ್ಲಿಸ್ಮೆಂಟ್ ಫ್ರಾಂಸೇ ದು ಸಾಂಗ್' (EFS) ನಿರ್ವಹಣೆಯ ರಕ್ತ ಸಂಗ್ರಹಣಾ ಘಟಕಗಳ ಶೀತಲೀಕರಣ ವ್ಯವಸ್ಥೆಗೆ ಹ್ಯಾಕರ್‌ಗಳು ಪ್ರವೇಶ ಪಡೆದಿದ್ದಾರೆ ಎನ್ನಲಾಗಿದೆ. ನವೆಂಬರ್ 1 ಮತ್ತು 2ರ ನಡುವೆ ನಡೆದ ದಾಳಿಯಲ್ಲಿ ಫ್ರೀಜರ್‌ಗಳ ತಾಪಮಾನವನ್ನು ಮೈನಸ್ 30 ಡಿಗ್ರಿ ಸೆಲ್ಸಿಯಸ್‌ನಿಂದ ಬರೋಬ್ಬರಿ 110 ಡಿಗ್ರಿ ಸೆಲ್ಸಿಯಸ್‌ಗೆ ಬದಲಾಯಿಸಲಾಗಿದೆ ಎಂದು ವರದಿಯಾಗಿದೆ.

ರಾತ್ರಿ ಕರ್ತವ್ಯದಲ್ಲಿದ್ದ ತಂತ್ರಜ್ಞರೊಬ್ಬರು ತಾಪಮಾನದಲ್ಲಿ ಅಸಹಜ ಏರಿಕೆಯಾಗಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ತುರ್ತು ಕ್ರಮ ಕೈಗೊಂಡಿದ್ದರಿಂದ ರಕ್ತದ ಮಾದರಿಗಳು ಮತ್ತು ಪ್ಲಾಸ್ಮಾ ಸಂಪೂರ್ಣವಾಗಿ ಹಾಳಾಗುವುದನ್ನು ತಪ್ಪಿಸಲಾಗಿದೆ. ಆರೋಗ್ಯ ಸಚಿವಾಲಯದ ಪ್ರಕಾರ, ಈ ಘಟನೆಯಿಂದ ಆಸ್ಪತ್ರೆಗಳ ರಕ್ತ ಪೂರೈಕೆ ಅಥವಾ ರಕ್ತ ವರ್ಗಾವಣೆ ಸೇವೆಗೆ ಯಾವುದೇ ತೊಂದರೆಯಾಗಿಲ್ಲ. ಒಂದು ವೇಳೆ ರಕ್ತ ಹಾಳಾಗಿದ್ದರೆ ಅದರಿಂದ ಭಾರಿ ಜೀವ ಹಾನಿ ಸಂಭವಿಸುವ ಸಾಧ್ಯತೆ ಇತ್ತು.

700 ಸೂಪರ್‌ಮಾರ್ಕೆಟ್‌ಗಳ ಫ್ರಿಡ್ಜ್‌ಗಳಿಗೂ ಕನ್ನ

ಇದು ಮೊದಲ ದಾಳಿಯಲ್ಲ. ಇದಕ್ಕೂ ಮೊದಲು ಯುರೋಪಿನ ಹಲವು ದೇಶಗಳ ಸೂಪರ್‌ಮಾರ್ಕೆಟ್‌ಗಳ ಶೀತಲೀಕರಣ ವ್ಯವಸ್ಥೆಗಳ ಮೇಲೆ ಸೈಬರ್ ದಾಳಿಗಳು ನಡೆದಿದ್ದವು. ಫ್ರಾನ್ಸ್‌ನಲ್ಲಿಯೇ ಸುಮಾರು 700 ಸೂಪರ್‌ಮಾರ್ಕೆಟ್‌ಗಳ ಶೀತಲೀಕರಣ ವ್ಯವಸ್ಥೆಗಳನ್ನು ಹ್ಯಾಕರ್‌ಗಳು ನಿಯಂತ್ರಣಕ್ಕೆ ಪಡೆದಿದ್ದರು ಎನ್ನಲಾಗಿದೆ. ಮೈನಸ್ 27 ಡಿಗ್ರಿಯಲ್ಲಿದ್ದ ಫ್ರೀಜರ್‌ಗಳ ತಾಪಮಾನವನ್ನು 50 ಡಿಗ್ರಿಗಿಂತ ಹೆಚ್ಚಿಸಿದ ಪರಿಣಾಮ ಮಾಂಸ, ಹಾಲಿನ ಉತ್ಪನ್ನಗಳು ಸೇರಿದಂತೆ ಅಪಾರ ಪ್ರಮಾಣದ ಆಹಾರ ಪದಾರ್ಥಗಳು ಹಾಳಾಗಿದ್ದವು. ಕೆಲವು ಮಳಿಗೆಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಯುರೋಗಳ ನಷ್ಟ ಉಂಟಾಗಿತ್ತು.

ಫ್ರಿಡ್ಜ್‌ಗಳನ್ನೇ ಹ್ಯಾಕ್ ಮಾಡುವುದು ಹೇಗೆ?

ಇಂದಿನ ಆಧುನಿಕ ಫ್ರಿಡ್ಜ್‌ಗಳು ಮತ್ತು ಶೀತಲೀಕರಣ ಘಟಕಗಳನ್ನು ಇಂಟರ್‌ನೆಟ್ ಮೂಲಕ ನಿಯಂತ್ರಿಸುವ ವ್ಯವಸ್ಥೆ ಹೊಂದಿವೆ. ತಂತ್ರಜ್ಞರು ದೂರದ ಸ್ಥಳದಿಂದಲೇ ಅವುಗಳ ತಾಪಮಾನವನ್ನು ಪರಿಶೀಲಿಸಲು ಮತ್ತು ಬದಲಾಯಿಸಲು ಸಾಧ್ಯವಿದೆ. ಆದರೆ ಇಂತಹ ವ್ಯವಸ್ಥೆಗಳಿಗೆ ಸೂಕ್ತ ಭದ್ರತೆ ಇಲ್ಲದಿದ್ದರೆ, ಹ್ಯಾಕರ್‌ಗಳು ಅವುಗಳ ನಿಯಂತ್ರಣವನ್ನು ತಮ್ಮ ಕೈಗೆ ಪಡೆಯಬಹುದು. ಹಳೆಯ ತಂತ್ರಾಂಶ ಮತ್ತು ದುರ್ಬಲ ಪಾಸ್‌ವರ್ಡ್‌ಗಳು ಇಂತಹ ದಾಳಿಗಳಿಗೆ ಅವಕಾಶ ಮಾಡಿಕೊಡಬಹುದು.

ಈ ಪ್ರಕರಣದಲ್ಲಿ EFS ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದ ಶೀತಲೀಕರಣ ನಿರ್ವಹಣಾ ಗುತ್ತಿಗೆದಾರ ಸಂಸ್ಥೆಯ ವ್ಯವಸ್ಥೆಗೆ ಹ್ಯಾಕರ್‌ಗಳು ಪ್ರವೇಶ ಪಡೆದಿರುವ ಶಂಕೆಯಿದೆ. ಆರಂಭದಲ್ಲಿ ಆರೋಗ್ಯ ಮೇಲ್ವಿಚಾರಣೆಗೆ ಸಂಬಂಧಿಸಿದ ರಕ್ತದ ಮಾದರಿಗಳಷ್ಟೇ ಅಪಾಯದಲ್ಲಿವೆ ಎನ್ನಲಾಗಿತ್ತು. ಬಳಿಕ ರಕ್ತ ವರ್ಗಾವಣೆಗೆ ಬಳಸುವ ಪ್ಲಾಸ್ಮಾವೂ ಆ ಘಟಕಗಳಲ್ಲಿ ಸಂಗ್ರಹವಾಗಿತ್ತು ಎಂಬುದು ದೃಢಪಟ್ಟಿದೆ.

ಎಐ ತಂತ್ರಜ್ಞಾನವೂ ಆತಂಕಕ್ಕೆ ಕಾರಣವೇ?

ಕೃತಕ ಬುದ್ಧಿಮತ್ತೆ (AI) ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಸೈಬರ್ ದಾಳಿಗಳನ್ನು ಇನ್ನಷ್ಟು ವೇಗವಾಗಿ ಮತ್ತು ವ್ಯಾಪಕವಾಗಿ ನಡೆಸುವ ಸಾಧ್ಯತೆಗಳ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಫ್ರಾನ್ಸ್‌ನ ಈ ದಾಳಿಗಳಲ್ಲಿ ಎಐ ಬಳಕೆಯಾಗಿದೆ ಎಂಬುದಕ್ಕೆ ಸದ್ಯ ಯಾವುದೇ ಪುರಾವೆ ಇಲ್ಲ.ಈ ದಾಳಿಗಳ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ. ಯಾವುದೇ ಹ್ಯಾಕಿಂಗ್ ಗುಂಪು ಹೊಣೆ ಹೊತ್ತುಕೊಂಡಿಲ್ಲ ಅಥವಾ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಬಗ್ಗೆ ವರದಿಯಾಗಿಲ್ಲ.

ಒಂದು ಕಾಲದಲ್ಲಿ ಕಂಪ್ಯೂಟರ್ ಮತ್ತು ಬ್ಯಾಂಕ್ ಖಾತೆಗಳಿಗೆ ಮಾತ್ರ ಸೀಮಿತವೆಂದು ಭಾವಿಸಲಾಗಿದ್ದ ಸೈಬರ್ ದಾಳಿಗಳು ಈಗ ಆಹಾರ ಸಂಗ್ರಹಣೆ, ಆರೋಗ್ಯ ಸೇವೆ ಮತ್ತು ಜೀವ ಉಳಿಸುವ ವೈದ್ಯಕೀಯ ವ್ಯವಸ್ಥೆಗಳಿಗೂ ತಲುಪಿವೆ. ತಂತ್ರಜ್ಞಾನ ಎಷ್ಟು ಅನುಕೂಲ ಕಲ್ಪಿಸುತ್ತದೆಯೋ, ಅದರ ಭದ್ರತೆಯಲ್ಲಿ ಸಣ್ಣ ಲೋಪವೂ ಅಷ್ಟೇ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು ಎಂಬುದನ್ನು ಈ ಘಟನೆ ಎಚ್ಚರಿಸಿದೆ, (ಏಜೆನ್ಸೀಸ್​).