ಕಾರಕಾಸ್ (ವೆನೆಜುವೆಲಾ): ವೆನೆಜುವೆಲಾದಲ್ಲಿ(Venezuela earthquake) ಬುಧವಾರ 39 ಸೆಕೆಂಡಿನ ಅಂತರದಲ್ಲಿ ಸಂಭವಿಸಿದ 7.2 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಭಾರೀ ಆತಂಕ ಸೃಷ್ಟಿಸಿವೆ. ರಾಜಧಾನಿ ಕಾರಕಾಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆಗಳು ಬಿರುಕು ಬಿಟ್ಟಿದ್ದು, ಕಟ್ಟಡಗಳಿಗೆ ಹಾನಿಯಾಗಿದೆ. ಜನರು ಭಯದಿಂದ ಮನೆ, ಕಚೇರಿಗಳು ಹಾಗೂ ವಿಮಾನ ನಿಲ್ದಾಣಗಳಿಂದ ಹೊರಗೆ ಓಡಿ ಬಂದಿದ್ದಾರೆ. ಭೂಕಂಪದ ಬಳಿಕ ಅಧಿಕಾರಿಗಳು ಹಾನಿಯ ಮೌಲ್ಯಮಾಪನ ಕಾರ್ಯ ಮುಂದುವರಿಸಿದ್ದಾರೆ.
39 ಸೆಕೆಂಡಿನ ಅಂತರದಲ್ಲಿ ಎರಡು ಭೂಕಂಪ
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಮೊದಲ ಭೂಕಂಪವು ಜಿಎಂಟಿ ಸಮಯ ರಾತ್ರಿ 10.04ಕ್ಕೆ ಕಾರಕಾಸ್‌ನ ಪಶ್ಚಿಮಕ್ಕೆ ಸುಮಾರು 284 ಕಿಲೋಮೀಟರ್ ದೂರದ ಸ್ಯಾನ್ ಫೆಲಿಪೆ ಸಮೀಪ ಸಂಭವಿಸಿತು. ಇದರ ತೀವ್ರತೆ 7.2 ಆಗಿತ್ತು. ಇದಾದ ಕೇವಲ 39 ಸೆಕೆಂಡುಗಳ ಬಳಿಕ, ಕಾರಕಾಸ್‌ನ ಪಶ್ಚಿಮಕ್ಕೆ ಸುಮಾರು 293 ಕಿಲೋಮೀಟರ್ ದೂರದ ಯುಮಾರೆ ಸಮೀಪ 7.5 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿತು. ಈ ಎರಡು ಭೂಕಂಪಗಳನ್ನು "ಭೂಕಂಪ ಜೋಡಿ" (Earthquake Doublet) ಎಂದು USGS ವಿವರಿಸಿದೆ. ಭೂಕಂಪದ ಕೇಂದ್ರಗಳು ಪರಸ್ಪರ ಸುಮಾರು 45 ಕಿಲೋಮೀಟರ್ ಅಂತರದಲ್ಲಿದ್ದು, ಬೇರೆ ಬೇರೆ ಆಳದಲ್ಲಿ ಸಂಭವಿಸಿವೆ. ಕಂಪನಗಳು ವೆನೆಜುವೆಲಾ ಮಾತ್ರವಲ್ಲದೆ ನೆರೆಯ ಕೊಲಂಬಿಯಾದಲ್ಲೂ ಅನುಭವಕ್ಕೆ ಬಂದಿವೆ.
ವೈರಲ್ ಆದ ಭಯಾನಕ ದೃಶ್ಯಗಳು
ಭೂಕಂಪದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೊಗಳು ವೈರಲ್ ಆಗಿವೆ. ಕೆಲವು ವಿಡಿಯೊಗಳಲ್ಲಿ ರಸ್ತೆಗಳು ಬಿರುಕು ಬಿಟ್ಟಿರುವುದು ಕಂಡುಬಂದಿದೆ. ಮತ್ತೊಂದರಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿದ್ದ ಪ್ರಯಾಣಿಕರು ಭೂಕಂಪದ ವೇಳೆ ಹೊರಗೆ ಓಡಿ ಬರುತ್ತಿರುವ ದೃಶ್ಯಗಳು ದಾಖಲಾಗಿವೆ. ಕಾರಕಾಸ್‌ನ ಎತ್ತರದ ಕಟ್ಟಡವೊಂದರ ಮೇಲ್ಭಾಗದಲ್ಲಿದ್ದ ಈಜುಕೊಳದಿಂದ ನೀರು ಉಕ್ಕಿ ಹರಿದ ದೃಶ್ಯವೂ ಗಮನ ಸೆಳೆದಿದೆ. ಹಲವು ಕಟ್ಟಡಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಮುಂಭಾಗದ ಭಾಗಗಳು ಹಾನಿಗೊಳಗಾಗಿರುವುದು ವಿಡಿಯೊಗಳಲ್ಲಿ ಕಂಡುಬಂದಿದೆ.
ಸಾವಿರಾರು ಸಾವುಗಳ ಆತಂಕ!
USGS ಆರಂಭಿಕ ಅಂದಾಜಿನ ಪ್ರಕಾರ, ಈ ಭೂಕಂಪಗಳಿಂದ ವ್ಯಾಪಕ ಹಾನಿ ಸಂಭವಿಸುವ ಸಾಧ್ಯತೆ ಇದೆ. ಸಾವಿನ ಸಂಖ್ಯೆ 10 ಸಾವಿರದಿಂದ 1 ಲಕ್ಷದವರೆಗೆ ಇರಬಹುದೆಂಬ ಪ್ರಾಥಮಿಕ ಅಂದಾಜು ವ್ಯಕ್ತಪಡಿಸಲಾಗಿತ್ತು. ಆದರೆ ಅಧಿಕೃತವಾಗಿ ಯಾವುದೇ ಸಾವುನೋವುಗಳ ವಿವರ ಇನ್ನೂ ಪ್ರಕಟವಾಗಿಲ್ಲ. ವೆನೆಜುವೆಲಾದ ಒಳಾಂಗಣ ಸಚಿವ ಡಿಯೋಸ್ಡಾಡೊ ಕಬೆಲ್ಲೊ ಮಾತನಾಡಿ, ಕಾರಕಾಸ್‌ನಲ್ಲಿ ಕೆಲವು ಕಟ್ಟಡಗಳು ಮತ್ತು ಮನೆಗಳು ಕುಸಿದಿವೆ ಎಂದು ತಿಳಿಸಿದ್ದಾರೆ. ಆದರೆ ಗಾಯಾಳುಗಳು ಹಾಗೂ ಸಾವಿನ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ.
ಜನರಲ್ಲಿ ಭೀತಿ!
ಭೂಕಂಪದ ವೇಳೆ ಮನೆಗಳಲ್ಲಿದ್ದ ವಸ್ತುಗಳು ಕೆಳಗೆ ಬಿದ್ದಿದ್ದು, ಜನರು ಭಯದಿಂದ ಹೊರಗೆ ಓಡಿದ್ದಾರೆ. ಪೂರ್ವ ಕಾರಕಾಸ್‌ನ ನಿವಾಸಿ ಕೊರೊ ಮಾರ್ಟಿನೆಜ್, "ಬಹಳ ದೊಡ್ಡ ಶಬ್ದ ಕೇಳಿಸಿತು. ಮನೆಯೊಳಗಿನ ವಸ್ತುಗಳೆಲ್ಲ ಕೆಳಗೆ ಬಿದ್ದವು. ನನ್ನ ಜೀವನದಲ್ಲಿ ಇಂತಹ ಅನುಭವ ಆಗಿರಲಿಲ್ಲ" ಎಂದು ಹೇಳಿದ್ದಾರೆ. 80 ವರ್ಷದ ನಿವೃತ್ತೆ ಮರಿಯಾ ರೊಮೆರೊ ಅವರನ್ನು ಪೊಲೀಸರು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. "ಈ ಭೂಕಂಪ ಭಯಾನಕವಾಗಿತ್ತು. 1967ರಲ್ಲಿ ನಡೆದ ಭೂಕಂಪಕ್ಕಿಂತಲೂ ಹೆಚ್ಚು ಭೀತಿ ಹುಟ್ಟಿಸಿತು" ಎಂದು ಅವರು ಹೇಳಿದ್ದಾರೆ.ವೆಲೆನ್ಸಿಯಾ ನಗರದ ನಿವಾಸಿಯೊಬ್ಬರು, ತಮ್ಮ ಕಟ್ಟಡದ ಹಲವೆಡೆ ಗೋಡೆಗಳು ಬಿರುಕು ಬಿಟ್ಟಿವೆ ಎಂದು ತಿಳಿಸಿದ್ದಾರೆ. ಭೂಕಂಪ ನಿಂತ ತಕ್ಷಣ ತಾವು ಮತ್ತು ಪತಿ ಕಟ್ಟಡದಿಂದ ಹೊರಗೆ ಬಂದಿರುವುದಾಗಿ ಹೇಳಿದ್ದಾರೆ.
ಹಾನಿ ಪರಿಶೀಲನೆ ಮುಂದುವರಿಕೆ
ಭೂಕಂಪದ ಬಳಿಕ ಕಾರಕಾಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಗ್ನಿಶಾಮಕ ದಳ ಹಾಗೂ ತುರ್ತು ಸೇವಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಟ್ಟಡಗಳ ಸುರಕ್ಷತೆ, ಹಾನಿಯ ಪ್ರಮಾಣ ಹಾಗೂ ಸಂಭವನೀಯ ನಂತರದ ಕಂಪನಗಳ ಬಗ್ಗೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಸದ್ಯ ರಕ್ಷಣಾ ಮತ್ತು ಪರಿಶೀಲನಾ ಕಾರ್ಯ ಮುಂದುವರಿದಿದ್ದು, ಸಂಪೂರ್ಣ ಹಾನಿಯ ವಿವರ ಇನ್ನಷ್ಟೇ ಹೊರಬರಬೇಕಿದೆ,(ಏಜೆನ್ಸೀಸ್).