ಖರ್ಗೆ ಕುಟುಂಬದಿಂದ ಭೂಮಿ ಲೂಟಿ: ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಗಂಭೀರ ಆರೋಪ

Pradeep Bhandari
Pradeep Bhandari
Published on
ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ, ಸಿದ್ದಾರ್ಥ ವಿಹಾರ ಟ್ರಸ್ಟ್ ಹೆಸರಿನಲ್ಲಿ ಕರ್ನಾಟಕದ ವಿವಿಧೆಡೆ ಭೂಮಿ ಲೂಟಿ ಮಾಡುವ ಮೂಲಕ ಅಪಾರ ಪ್ರಮಾಣದ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ(Pradeep Bhandari) ಆರೋಪಿಸಿದ್ದಾರೆ.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಪುತ್ರ ಪ್ರಿಯಾಂಕ್, ಖಾಸಗಿ ಟ್ರಸ್ಟ್ ಹೆಸರಿನಡಿ ಕರ್ನಾಟಕದಲ್ಲಿ ಭ್ರಷ್ಟಾಚಾರ ಮತ್ತು ಭೂಕಬಳಿಕೆಯಲ್ಲಿ ಭಾಗಿಯಾಗಿದ್ದಾರೆ. ಟ್ರಸ್ಟ್‌ನಲ್ಲಿ ಖರ್ಗೆ ಪತ್ನಿ ಹಾಗೂ ಅಳಿಯ ಸಹ ಇದ್ದಾರೆ. ಟ್ರಸ್ಟ್ ಮೂಲಕ ಕರ್ನಾಟಕದ ವಿವಿಧ ಭಾಗಗಳಲ್ಲಿ ಬಡವರಿಗೆ ಸೇರಿದ್ದ ಭೂಮಿ ಕಬಳಿಸಲು ಅಧಿಕಾರ ಬಳಸಿಕೊಂಡಿದ್ದಾರೆ. 2024ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಏರೋಸ್ಪೇಸ್ ಮತ್ತು ರಕ್ಷಣಾ ವಿಭಾಗದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ನೆಪದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಸಿದ್ದಾರ್ಥ ವಿಹಾರ ಟ್ರಸ್ ಗೆ ಐದು ಎಕರೆ ಭೂಮಿಯನ್ನು ಮಂಜೂರು ಮಾಡಿರುವುದು ಲೂಟಿ ಪ್ರಕರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದಿದ್ದಾರೆ.

ಗೃಹಲಕ್ಷ್ಮಿ ಹೆಸರಿನಲ್ಲಿ ಹಗರಣ

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಬ್ಯಾಂಕ್‌ ಖಾತೆಯೇ ಇಲ್ಲದ 23,262 ಜನರಿಗೆ 46.52 ಕೋಟಿ ರೂ. ಪಾವತಿಸಿರುವುದು ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಿಡಿಕಾರಿದರು.
19,020 ಜನರಿಗೆ ಒಂದೇ ಬ್ಯಾಂಕ್‌ನ ಖಾತೆಗಳಿಗೆ ಹಣ ವರ್ಗಾವಣೆ ಬಿ.ವೈ. ಆಗಿರುವುದನ್ನು ಸ್ವತಃ ಸಿಎಜಿ ವರದಿ ಬಯಲಿಗೆಳೆದಿದೆ. 10 ಲಕ್ಷ ಫಲಾನುಭವಿಗಳ ಖಾತೆಗಳು ನಿರಂತರವಾಗಿ ಬದಲಾಗುತ್ತಿರುವುದು ಬಡ ಮಹಿಳೆಯರ ಹೆಸರಿನಲ್ಲಿ ನಡೆಯುತ್ತಿರುವ ಬೃಹತ್ ಲೂಟಿಗೆ ಸಾಕ್ಷಿಯೇ ಎಂದು ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದರು. ಬಡವರ ಹೆಸರಿನಲ್ಲಿ ಕೋಟ್ಯಂತರ ರೂ. ಲೂಟಿ ಹೊಡೆದಿರುವ ಗಂಭೀರ ಭ್ರಷ್ಟಾಚಾರದ ಬಗ್ಗೆ ತಕ್ಷಣ ಅತ್ಯಂತ ಪಾರದರ್ಶಕವಾಗಿ, ಉನ್ನತ ಮಟ್ಟದ ತನಿಖೆ ಆಗಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net